ಮುಝಾರಿಬಾ ಕಂಪೆನಿ ಹಗರಣ ಪ್ರಕರಣ: ಹೂಡಿಕೆದಾರರು ದಾಖಲಾತಿಯೊಂದಿಗೆ ದೂರು ಸಲ್ಲಿಸಲು ಸಿಐಡಿ ಸೂಚನೆ

Update: 2021-01-18 15:02 GMT

ಬೆಂಗಳೂರು, ಜ.18: ಐಎಂಎ(ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ಹಗರಣ ಮಾದರಿಯಲ್ಲಿಯೇ ನಗರದಲ್ಲಿ ಬೆಳಕಿಗೆ ಬಂದ ಮತ್ತೊಂದು ವಂಚನೆ ಪ್ರಕರಣ ಸಂಬಂಧ ಹೂಡಿಕೆದಾರರು ದಾಖಲಾತಿಗಳೊಂದಿಗೆ ದೂರು ಸಲ್ಲಿಸುವಂತೆ ಸಿಐಡಿ ಮನವಿ ಮಾಡಿದೆ.

ಮುಝಾರಿಬಾ ಬುಲಿಯನ್ ಟ್ರೇಡಿಂಗ್ ಸಲ್ಯೂಷನ್ ಪ್ರೈ.ಲಿ. ಹೆಸರಿನ ಕಂಪೆನಿಯು ಹೂಡಿಕೆದಾರರಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹಣವನ್ನು ಪಡೆದು ವಂಚನೆ ಮಾಡಿದ್ದು, ಈ ಸಂಬಂಧ ಇತ್ತೀಚಿಗೆ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ತದನಂತರ, ಈ ಪ್ರಕರಣವನ್ನು ಸಿಐಡಿ ಘಟಕಕ್ಕೆ ವರ್ಗಾಯಿಸಿ, ತನಿಖೆ ನಡೆಸಲಾಗುತ್ತಿದ್ದು, ವಂಚನೆಕ್ಕೊಳಗಾಗಿರುವ ಸದಸ್ಯರು ದಾಖಲಾತಿ ಸಲ್ಲಿಸುವಂತೆ ಸಿಐಡಿ ಹೇಳಿದೆ.

ಏನಿದು ಪ್ರಕರಣ?: 2018ನೇ ಸಾಲಿನಲ್ಲಿ ಇಲ್ಲಿನ ಪುಲಿಕೇಶಿನಗರ ವ್ಯಾಪ್ತಿಯ ಕೋಲ್ಸ್ ರಸ್ತೆಯಲ್ಲಿ ಮುಝಾರಿಬಾ ಬುಲಿಯನ್ ಟ್ರೇಡಿಂಗ್ ಸಲ್ಯೂಷನ್ ಪ್ರೈ.ಲಿ. ಕಂಪೆನಿ ಆರಂಭಿಸಿ, ಹಣ ಹೂಡಿಕೆ ಮಾಡಿದರೆ, ಶೇಕಡ 60ರಿಂದ 70ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ, ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿಕೊಂಡಿದ್ದರು. ಬಳಿಕ, ಹಣ ನೀಡದೆ ಏಕಾಏಕಿ ಕಂಪೆನಿಯ ಕಚೇರಿಗೆ ಬಾಗಿಲು ಜಡಿಯಲಾಗಿತ್ತು.

ಇದಾದ ಬಳಿಕ ಹೂಡಿಕೆದಾರರಲ್ಲಿ ಒಬ್ಬರಾದ ನಿವೃತ್ತ ರೈಲ್ವೇ ನೌಕರ ಮುಹಮ್ಮದ್ ಝಮೀಲ್ ಎಂಬುವರು ನೀಡಿದ ದೂರಿನನ್ವಯ ಕಂಪೆನಿಯ ಪ್ರಮುಖರು ಎನ್ನಲಾದ ಮುಹಮ್ಮದ್ ರಿಯಾಝ್, ಅಹ್ಮದ್ ಫೈಝಾನ್, ಮುಹಮ್ಮದ್ ಮುದಾಸ್ಸಿರ್ ಪಾಷಾ, ಮುಹಮ್ಮದ್ ತಬ್ರೇಝ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.

ಇನ್ನು, ಈ ಪ್ರಕರಣ ತನಿಖೆ ಹಂತದಲ್ಲಿದ್ದು, ಹೂಡಿದಾರರು ತಮ್ಮ ಬಳಿಯ ದಾಖಲಾತಿ ಇದ್ದಲ್ಲಿ ಸಿಐಡಿ ಕಚೇರಿಗೆ ತಲುಪಿಸುವಂತೆ ಸಿಐಡಿ ಘಟಕದ ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯುನಿಟ್ ಪೊಲೀಸ್ ಇನ್ಸ್‍ಪೆಕ್ಟರ್ ಟಿ.ಸೋಮಶೇಖರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News