ದೇವಸ್ಥಾನ ಉದ್ಘಾಟನೆ ಸಂದರ್ಭ ತಮಿಳು ಹಾಡು ಹಾಕಿದ್ದಕ್ಕೆ ಹಲ್ಲೆ: ಆರೋಪ

Update: 2021-01-18 15:12 GMT

ಬೆಂಗಳೂರು, ಜ.18: ನಗರದ ವ್ಯಾಪ್ತಿಯಲ್ಲಿ ದೇವಸ್ಥಾನ ಉದ್ಘಾಟನೆ ಸಂದರ್ಭದಲ್ಲಿ ತಮಿಳು ಭಾಷೆಯ ಹಾಡುಗಳು ಧ್ವನಿವರ್ಧಕದಲ್ಲಿ ಹಾಕಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ನಗರದ ಕೆಪಿ ಅಗ್ರಹಾರದ ಬಿನ್ನಿಮಿಲ್ ಬಳಿ ನೂತನವಾಗಿ ಸುಬ್ರಹ್ಮಣ್ಯ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಸೋಮವಾರ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ತಮಿಳು ಹಾಡುಗಳನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ವ್ಯಕ್ತಿಯೊಬ್ಬರ ಮೇಲೆ ಆಕ್ರೋಶ ಹೊರಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು ಘಟನೆ ವೇಳೆ ಹೊಣರೆಡ್ಡಿ ಮತ್ತು ವಡಿವೇಲು ಎಂಬುವರು ತಮ್ಮ ಸಹಚರ ಮೂಲಕ ಹಲ್ಲೆಗೆ ಕುಮ್ಮಕ್ಕು ನೀಡಿರುವ ದೂರುಗಳು ಕೇಳಿಬಂದಿದ್ದು, ಘಟನೆಯಲ್ಲಿ ಕರವೇ ಕಾರ್ಯಕರ್ತನಿಗೂ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕೆಪಿ ಅಗ್ರಹಾರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News