ಕರ್ನಾಟಕದ ಪ್ರತಿ ಹಳ್ಳಿಗೂ ಬ್ಯಾಂಕ್ ಸೇವೆ ಸೌಲಭ್ಯ: ಟಿ.ಎಂ.ವಿಜಯಭಾಸ್ಕರ್

Update: 2021-01-18 18:10 GMT

ಬೆಂಗಳೂರು, ಜ.18: ರಾಜ್ಯದಲ್ಲಿ ಆರ್ಥಿಕ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರತಿ ಹಳ್ಳಿಯಲ್ಲೂ ಬ್ಯಾಂಕ್ ಸೇವೆ ಒದಗಿಸುವಂತೆ ಬ್ಯಾಂಕ್‍ಗಳಿಗೆ ನಿರಂತರವಾಗಿ ಒತ್ತಡ ಹೇರಿದ್ದರಿಂದ ಪ್ರತಿ ಹಳ್ಳಿಗೂ ಶಾಖೆಗಳ ಮೂಲಕ ಅಥವಾ ಎಟಿಎಂ ಯಂತ್ರವನ್ನು ಒಳಗೊಂಡ ಸಂಚಾರಿ ಬ್ಯಾಂಕಿಂಗ್ ಸೇವೆ ಲಭ್ಯವಾಗುವ ಸಮಯ ಸನ್ನಿಹಿತವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಹೇಳಿದ್ದಾರೆ.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್ ಅವರ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಂಕರ್ಸ್‍ಗಳ ಸಮಿತಿಯ (ಎಸ್‍ಎಲ್‍ಬಿಸಿ) ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿರುವ ವಿಜಯಭಾಸ್ಕರ್ ಅವರು, ರಾಜ್ಯ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆ ಒದಗಿಸುವಂತೆ ಬ್ಯಾಂಕ್‍ಗಳಿಗೆ ನಿರಂತರವಾಗಿ ಒತ್ತಡ ಹೇರಿದ್ದರ ಪರಿಣಾಮವಾಗಿ ಬ್ಯಾಂಕಿಂಗ್ ಸೇವೆ ಲಭ್ಯವಾಗುವ ಸಮಯ ಸನ್ನಿಹಿತವಾಗಿದೆ ಎಂದು ಹೇಳಿದರು.  

ಆರ್ಥಿಕ ಇಲಾಖೆ ಕಾರ್ಯದರ್ಶಿ(ಹಣಕಾಸು ಸುಧಾರಣೆ) ಮಂಜು ಪ್ರಸನ್ನನ್ ಪಿಳ್ಳೈ ಪ್ರತಿಕ್ರಿಯಿಸಿ, ಆರ್‍ಬಿಐ ಮಾಹಿತಿಯಂತೆ 5 ಮತ್ತು 6ನೆ ಶ್ರೇಣಿಯ ರಾಜ್ಯದ ಹಳ್ಳಿಗಳಲ್ಲಿ ಬ್ಯಾಂಕಿಂಗ್ ಸೇವೆ ಲಭ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಶಾಖೆಗಳನ್ನು ತೆರೆಯಲು ಅಥವಾ ಸಂಚಾರಿ ಬ್ಯಾಂಕ್ ಸೇವೆಯನ್ನು ಪ್ರಾರಂಭಿಸಲು ನಿರ್ದೇಶಿಸಿತ್ತು. ಹಾಗೆಯೇ, ಬ್ಯಾಂಕ್ ಸೇವೆ ಲಭ್ಯವಿಲ್ಲದ ಗ್ರಾಮೀಣ ಭಾಗಗಳಲ್ಲಿ ಪ್ರತಿ 5 ಕಿ.ಮೀ ರೇಡಿಯಸ್‍ನಲ್ಲಿ ಶಾಖೆಗಳನ್ನು ಆರಂಭಿಸುವಂತೆ ವಾಣಿಜ್ಯ ಬ್ಯಾಂಕುಗಳಿಗೂ ಸೂಚಿಸಿತ್ತು.

ಗ್ರಾಮೀಣ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆ ಲಭ್ಯವಾಗುವಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದ ಸರಕಾರ ಹಾಗೂ ಹಣಕಾಸು ಇಲಾಖೆ ಇತ್ತೀಚೆಗೆ ಸೇವೆಯಿಂದ ವಂಚಿತವಾಗಿದ್ದ 609 ಗ್ರಾಮಗಳನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಸಿಬಿಎಸ್(ಕೋರ್ ಬ್ಯಾಂಕಿಂಗ್ ಸಲುಷನ್) ಅಥವಾ ಗ್ರಾಹಕರು ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಸೇವೆ ಪಡೆದುಕೊಳ್ಳಲು ಅವಕಾಶ ಇರುವಂತೆ ಬ್ಯಾಂಕುಗಳು ತಮ್ಮ ಶಾಖೆಗಳನ್ನು ಪ್ರಾರಂಭಿಸುವಂತೆ ಸೂಚಿಸಿದೆ. ಅದರಂತೆ, ಸದ್ಯದಲ್ಲೇ ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತವಾಗಿದ್ದ ಗ್ರಾಮಗಳಿಗೂ ಸೇವೆ ಲಭ್ಯವಾಗಲಿದೆ. 375 ಜನರಿರುವ ತುಮಕೂರಿನ ಕುಗ್ರಾಮ ಹರಳಕಟ್ಟೆ ಹಾಗೂ 156 ಜನರಿರುವ ಉತ್ತರ ಕನ್ನಡ ಜಿಲ್ಲೆಯ ವಿರಾಂಜೋಳ ಗ್ರಾಮಗಳಲ್ಲಿಯೂ ಬ್ಯಾಂಕಿಂಗ್ ಸೇವೆ ಲಭ್ಯವಾಗಲಿದೆ.

2019 ಎಪ್ರಿಲ್‍ನಲ್ಲಿ ಗ್ರಾಮೀಣ ಬ್ಯಾಂಕುಗಳ ವಿಲೀನವಾದ ಬಳಿಕ ರಾಜದ್ಯಲ್ಲಿ ಎರಡು ಗ್ರಾಮೀಣ ಬ್ಯಾಂಕುಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಕೆನರಾ ಬ್ಯಾಂಕ್ ಪ್ರಯೋಜಿತ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗಳು ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿವೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ 114 ಶಾಖೆಗಳ ಪೈಕಿ 839 ಶಾಖೆಗಳು ಗ್ರಾಮೀಣ ಭಾಗದಲ್ಲಿಯೇ ಇವೆ. ಇನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 629 ಗ್ರಾಮೀಣ ಶಾಖೆಗಳನ್ನು ಹೊಂದಿದೆ. ಇವಲ್ಲದೇ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್), ಸಿಂಡಿಕೇಟ್ ಬ್ಯಾಂಕ್, ಎಸ್ ಬಿಐ, ಗ್ರಾಮೀಣ ಭಾಗದಲ್ಲಿ ಹೆಚ್ಚು ಶಾಖೆಗಳನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News