ರಾಜ್ಯದಲ್ಲಿ ತೈಲ ಸಂರಕ್ಷಣಾ ಮಾಸ ‘ಸಕ್ಷಮ’ಕ್ಕೆ ಚಾಲನೆ ನೀಡಿದ ಸಚಿವ ಗೋಪಾಲಯ್ಯ

Update: 2021-01-18 18:18 GMT

ಬೆಂಗಳೂರು, ಜ.18: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಸಂರಕ್ಷಣೆ ಸಂಶೋಧನಾ ಸಂಸ್ಥೆ (ಪಿಸಿಆರ್.ಎ) ತೈಲ ಕೈಗಾರಿಕೆಗಳ ಸಹಯೋಗದಲ್ಲಿ ತೈಲ ಸಂರಕ್ಷಣಾ ಮಾಸ ‘ಸಕ್ಷಮ’ವನ್ನು ಜ.16ರಿಂದ ಫೆಬ್ರವರಿ 11ರವರೆಗೆ ಆಚರಿಸುತ್ತಿದ್ದು, ಸಕ್ಷಮವನ್ನು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ಸೋಮವಾರ ಬೆಂಗಳೂರಿನ ಇಂಡಿಯನ್ ಆಯಿಲ್ ರಾಜ್ಯ ಕಚೇರಿಯಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಗೋಪಾಲಯ್ಯ, ಕೋವಿಡ್ ಸಮಯದಲ್ಲಿ ತೈಲ ಕಂಪನಿಗಳು ನಿರ್ವಹಿಸಿದ ಅದ್ಭುತ ಕಾರ್ಯವನ್ನು ಮತ್ತು ಅವರ ಕೊಡುಗೆಯನ್ನು ಶ್ಲಾಘಿಸಿದರು. ಅಮೂಲ್ಯವಾದ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂರಕ್ಷಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ತೈಲ ಕಂಪನಿಗಳು ವಿವಿಧ ಸ್ವರೂಪದಲ್ಲಿ ತೈಲ ಸಂರಕ್ಷಣೆಯ ಸಂದೇಶವನ್ನು ಸಾರುತ್ತಿದ್ದು, ಮಕ್ಕಳಿಂದ ಸಮುದಾಯದವರೆಗೆ ಎಲ್ಲ ವರ್ಗವನ್ನೂ ತಲುಪುತ್ತಿವೆ. ರಾಜ್ಯಾದ್ಯಂತ ಈ ವರ್ಷ ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಇಂಡಿಯನ್ ಆಯಿಲ್‍ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ರಾಜ್ಯದ ಮುಖ್ಯಸ್ಥ ಡಿ.ಎಲ್. ಪ್ರಮೋದ್ ಮಾತನಾಡಿ, ಈ ತಿಂಗಳು ಪೂರ್ತಿ ನಡೆಯಲಿರುವ ತೈಲ ಸಂರಕ್ಷಣೆ ಜಾಗೃತಿ ಚಟುವಟಿಕೆಗಳ ಬಗ್ಗೆ ವಿವರಿಸಿ, ಈ ವರ್ಷದ ಧ್ಯೇಯವಾಕ್ಯ ‘ಹಸಿರು ಮತ್ತು ಸ್ವಚ್ಛ ಇಂಧನ’ ಎಂಬುದನ್ನು ಸೂಕ್ತವಾಗಿ ಆಯ್ಕೆ ಮಾಡಲಾಗಿದೆ ಎಂದರು.

ಇದು ಈ ಹೊತ್ತಿನ ಅಗತ್ಯವಾಗಿದ್ದು, ಒಂದೆಡೆ ನಾವು ಸಿ.ಎನ್.ಜಿ., ಎಲ್.ಎನ್.ಜಿ. ಮತ್ತು ಇತರ ಸ್ವರೂಪದ ಪರ್ಯಾಯ ಇಂಧನ ಮೂಲಗಳನ್ನು ಅಳವಡಿಸಿಕೊಳ್ಳಬೇಕು, ಮತ್ತೊಂದೆಡೆ ಪಳೆಯುಳಿಕೆ ಇಂಧನಗಳನ್ನು ಅತ್ಯಂತ ಕ್ಲುಪ್ತವಾಗಿ (ಕನಿಷ್ಠ) ಬಳಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್, ಬಿಪಿಸಿಎಲ್‍ನ ರಾಜ್ಯ ಮುಖ್ಯಸ್ಥ (ಚಿಲ್ಲರೆ ಮಾರಾಟ) ಸಂಜೀವ್ ಕುಮಾರ್, ಎಚ್.ಪಿ.ಸಿ.ಎಲ್.ನ ಡಿಜಿಎಂ(ಚಿಲ್ಲರೆ ಮಾರಾಟ) ನವೀನ್ ಕುಮಾರ್, ಜಿ.ಎ.ಐ.ಎಲ್.ನ ಜಿ.ಎಂ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News