ಕ್ಲೇಮ್ ಕಮಿಷನರ್‍ಗೆ ಒದಗಿಸಿರುವ ಸೌಲಭ್ಯಗಳ ವಿವರ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2021-01-19 11:45 GMT

ಬೆಂಗಳೂರು, ಜ.19: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ನಷ್ಟ ವಸೂಲಿ ಮಾಡುವ ನಿಟ್ಟಿನಲ್ಲಿ ನೇಮಿಸಿರುವ ಕ್ಲೇಮ್ ಕಮಿಷನರ್‍ಗೆ ಸೂಕ್ತ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕುರಿತ ವಿವರಗಳನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಗಲಭೆ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರಕಾರದ ಪರ ವಾದಿಸಿದ ವಕೀಲರು, ನಿವೃತ್ತ ನ್ಯಾಯಮೂರ್ತಿ ಎಚ್.ಎಸ್ ಕೆಂಪಣ್ಣ ನೇತೃತ್ವದ ಕ್ಲೇಮ್ ಕಮಿಷನರ್‍ಗೆ ಅಗತ್ಯ ಸಿಬ್ಬಂದಿ ಹಾಗೂ ಕಚೇರಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಿಬ್ಬಂದಿ ಒದಗಿಸುವ ಸಂಬಂಧ ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲ. ಕಾರ್ಯದರ್ಶಿಯನ್ನು ನೇಮಕ ಮಾಡಿದ್ದೇವೆ ಎಂದಿದ್ದರೂ ಅವರಿಗೆ ಸೌಲಭ್ಯಗಳನ್ನು ನೀಡುವ ಕುರಿತು ವಿವರಣೆ ನೀಡಿಲ್ಲ. 

ಗಲಭೆ ನಡೆದು 6 ತಿಂಗಳು  ಕಳೆಯುತ್ತಾ ಬಂದಿದೆ. ಆದರೆ, ಅಪಾರ ನಷ್ಟ ಅನುಭವಿಸಿರುವ ಜನಕ್ಕೆ ಪರಿಹಾರ ಸಿಗಬೇಕಿದ್ದರೆ ಕ್ಲೇಮ್ ಕಮಿಷನ್ ತ್ವರಿತವಾಗಿ ಕೆಲಸ ಮಾಡಬೇಕು. ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ, ಸೌಲಭ್ಯ ನೀಡದೆ ಅವರು ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿತು. ಹಾಗೆಯೇ, ಈ ಸಂಬಂಧ ನ್ಯಾಯಾಲಯ ಆದೇಶ ಹೊರಡಿಸುವುದು ಕಷ್ಟವಲ್ಲ. ಆದರೆ, ಓರ್ವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ಸರಕಾರ ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಅಲ್ಲದೇ, ಕ್ಲೇಮ್ ಕಮಿಷನರ್‍ಗೆ ಕಾರ್ಯದರ್ಶಿ ಸೇರಿದಂತೆ ಅಗತ್ಯ ಸಿಬ್ಬಂದಿ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ನೋಡಲ್ ಅಧಿಕಾರಿ ಮುಂದಿನ ಒಂದು ವಾರದೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಜ.29ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News