‘ಜನಸೇವಕ' ಪುನರಾರಂಭಕ್ಕೆ ಸಚಿವ ಎಸ್.ಸುರೇಶ್ ಕುಮಾರ್ ಚಾಲನೆ

Update: 2021-01-19 12:33 GMT

ಬೆಂಗಳೂರು, ಜ.19: ಕೊರೋನ ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ‘ಜನಸೇವಕ' ಯೋಜನೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್, ಮಂಗಳವಾರ ನಡೆದಾಡಲು ಸಾಧ್ಯವಾಗದ ಇಂದಿರಾನಗರದ ವರಲಕ್ಷ್ಮಿ ಮತ್ತು 90 ವರ್ಷದ ಹಿರಿಯ ನಾಗರಿಕರಾದ ರಾಜಾಜಿನಗರ 3ನೇ ಬ್ಲಾಕ್ ನಾಗರತ್ನ ಎಂಬುವರ ಮನೆ ಬಾಗಿಲಿಗೆ ನಾಗರಿಕ ಯೋಜನೆ ಸೌಲಭ್ಯ ಒದಗಿಸುವ ಮೂಲಕ ಯೋಜನೆಗೆ ಮರುಚಾಲನೆ ನೀಡಿದರು.

ಈ ಹಿರಿಯ ನಾಗರಿಕರು ಆಧಾರ್ ಕಾರ್ಡ್ ನ್ಯೂನ್ಯತೆ ಸರಿಪಡಿಸಲು ಅರ್ಜಿ ಸಲ್ಲಿಸಿದ್ದರು. ಇಂದು ಯೋಜನೆ ಪುನರಾರಂಭದ ಅಂಗವಾಗಿ ಆಧಾರ್ ಕಾರ್ಡ್ ನ್ಯೂನ್ಯತೆ ಸರಿಪಡಿಸಿ ಅವರ ಮನೆ ಬಾಗಿಲಿಗೆ ಸೇವೆ ಒದಗಿಸಲಾಯಿತು. ಬೆಂಗಳೂರು ಮಹಾನಗರ ವ್ಯಾಪ್ತಿಯ ರಾಜಾಜಿನಗರ, ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನಸೇವಕ ಯೋಜನೆ ಪುನರಾರಂಭಗೊಂಡಿದೆ.

ರಾಜಾಜಿನಗರದಲ್ಲಿ ನಡೆದ ಸಮಾರಂಭದಲ್ಲಿ ಈ ಯೋಜನೆಯ ಪುನರಾರಂಭಕ್ಕೆ ಚಾಲನೆ ನೀಡಿದ ಸುರೇಶ್ ಕುಮಾರ್, ನಾಗರಿಕರ ಮನೆ ಬಾಗಿಲಿಗೆ ಸಾರ್ವಜನಿಕ ಸೌಲಭ್ಯಗಳನ್ನು ತಲುಪಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಸಾರ್ವಜನಿಕರು ಯೋಜನೆಯನ್ನು ಸದುಪಯೋಗ ಪಡೆಯಬೇಕೆಂದರು.

ಬಿಬಿಎಂಪಿ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ 55 ಸೇವೆಗಳನ್ನು ಜನಸೇವಕ ಯೋಜನೆ ಮೂಲಕ ನಾಗರಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ಸೇವೆಗಳಲ್ಲಿ ಆಧಾರ್ ಕಾರ್ಡ್ ನ್ಯೂನ್ಯತೆ ಸರಿಪಡಿಸುವುದು ಸೇರಿದೆ. ಹಿರಿಯ ನಾಗರಿಕರು ಮತ್ತು ಸರಕಾರಿ ಕೆಲಸಗಳಿಗಾಗಿ ಕರ್ತವ್ಯಕ್ಕೆ ರಜೆ ಹಾಕಿ ಕಚೇರಿಗಳಿಗೆ ಅಡ್ಡಾಡುವುದನ್ನು ತಪ್ಪಿಸಲು ಮತ್ತು ವಿಶೇಷವಾಗಿ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿಗೊಳಿಸಿ ನೇರವಾಗಿ ಫಲಾನುಭವಿಗಳಿಗೆ ಸರಕಾರಿ ಸೇವೆಗಳನ್ನು ಒದಗಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಸುರೇಶ್ ಕುಮಾರ್  ಹೇಳಿದರು.  

ಇನ್ನು ಕೆಲವೇ ತಿಂಗಳಲ್ಲಿ ಜನಸೇವಕ ಯೋಜನೆಯನ್ನು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ವಿಸ್ತರಿಸಲಾಗುವುದು. ಆ ನಂತರ ರಾಜ್ಯದೆಲ್ಲೆಡೆ ವಿಸ್ತರಿಸಲು ಚಿಂತನೆ ನಡೆಸಲಾಗಿದ್ದು, ಅದಕ್ಕಾಗಿ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಸಕಾಲ ಮಿಷನ್, ಜನಸೇವಕ ಯೋಜನೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News