ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಆರೋಪಿಗೆ ಗುಂಡೇಟು

Update: 2021-01-19 18:10 GMT

ಬೆಂಗಳೂರು, ಜ.19: ಪ್ರಕರಣವೊಂದರ ಸಂಬಂಧ ವಶಕ್ಕೆ ಪಡೆಯಲು ಮುಂದಾಗಿದ್ದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ ಆರೋಪಿ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಇಲ್ಲಿನ ಪೀಣ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂದ್ರಹಳ್ಳಿಯ ರಾಘವೇಂದ್ರ ನಗರದ ನಿವಾಸಿ ಪ್ರವೀಣ್(22) ಎಂಬಾತ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಎಂದು ತಿಳಿದುಬಂದಿದೆ.

ಮಂಗಳವಾರ ಮುಂಜಾನೆ ಡಕಾಯಿತಿ ಹಾಗೂ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಪ್ರವೀಣ್‍ನನ್ನು ಖಚಿತ ಮಾಹಿತಿ ಆಧರಿಸಿ ಬಂಧಿಸಲು ಪೊಲೀಸರು ತೆರಳಿದ್ದರು. ತಿಪ್ಪೇನಹಳ್ಳಿಯ ಬಳಿ ಪೊಲೀಸರ ವಾಹನ ಬಂದಿರುವುದನ್ನು ಕಂಡ ಪ್ರವೀಣ್ ಓಡಿ ಹೋಗಿದ್ದು, ಆತನನ್ನು ಬೆನ್ನಟ್ಟಿ ಬಂಧಿಸಲು ತೆರಳಿದಾಗ ಮುಖ್ಯ ಪೇದೆ ರಂಗಸ್ವಾಮಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದ ಎನ್ನಲಾಗಿದೆ.

ತದನಂತರ, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಮತ್ತೆ ಹಲ್ಲೆಗೆ ಮುಂದಾದ ಪ್ರವೀಣ್ ಮೇಲೆ ಆತ್ಮರಕ್ಷಣೆಗಾಗಿ ಸಬ್‍ಇನ್‍ಸ್ಪೆಕ್ಟರ್ ಗುಂಡು ಹಾರಿಸಿದ್ದು ಅದು ಆರೋಪಿಯ ಎಡಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ರಾಜಗೋಪಾಲನಗರ, ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ವಿರುದ್ಧ ಹಲ್ಲೆ, ಡಕಾಯಿತಿ ಪ್ರಕರಣಗಳು ದಾಖಲಾಗಿವೆ. ರೌಡಿಶೀಟರ್ ಅನಿಲ್ ಜೊತೆ ಗುರುತಿಸಿಕೊಂಡಿದ್ದ ಆರೋಪಿಯು ಆತನ ಜೊತೆಗೆ ಹಲವು ಅಪರಾಧ ಕೃತ್ಯಗಳಲ್ಲಿ ಕೈಜೋಡಿಸಿರುವ ಮಾಹಿತಿಯಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News