ಶಿಕ್ಷಣ ವಂಚಿತ ಮಕ್ಕಳ ಮನೆ ಬಾಗಿಲಿಗೆ ಶಾಲೆ: ಮಂಜುನಾಥ ಪ್ರಸಾದ್

Update: 2021-01-19 18:24 GMT

ಬೆಂಗಳೂರು, ಜ.19: ಸಮಾಜದಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ಹಾಗೂ ಶಾಲೆ ತೊರೆದಿರುವ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಉದ್ದೇಶದಿಂದಾಗಿ ಬಿಬಿಎಂಪಿ 'ಮನೆಬಾಗಿಲಿಗೆ ಶಾಲೆಯೆಂಬ' ವಿನೂತನ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ಮಂಗಳವಾರ ನಗರದ ಪುರಭವನದ ಸಭಾಂಗಣದಲ್ಲಿ ಬಿಬಿಎಂಪಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಸಮಾಜಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ, ಮಕ್ಕಳಿಂದ ಭಿಕ್ಷಾಟನೆ ಹಾಗೂ ಬೀದಿಗಳಲ್ಲಿ ವ್ಯಾಪಾರ ತಡೆಯುವ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ, ಬಿಎಂಟಿಸಿ ಸಹಯೋಗದೊಂದಿಗೆ 10 ಬಸ್‍ಗಳನ್ನು ಪಡೆದು, ಶಾಲೆಯಂತೆ ಅಭಿವೃದ್ಧಿಪಡಿಸಲಾಗಿದ್ದು, ಚಿಣ್ಣರ ಗಮನವೂ ಇತ್ತ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಇದರಿಂದ ನಗರದ ಕೊಳಗೇರಿ ಪ್ರದೇಶದಲ್ಲಿನ ಮಕ್ಕಳ, ವಿವಿಧ ಕಾರಣಗಳಿಂದ ಶಾಲೆ ಕಡೆ ಮುಖ ಮಾಡದ ಮಕ್ಕಳು, ಈ ಯೋಜನೆಯ ಫಲಾನುಭವಿಗಳಾಗಿದ್ದು, ಈ ಮಕ್ಕಳ ಬಳಿಯೇ ಶಾಲೆ ಬರಲಿದೆ ಎಂದರು.

ರಾಜ್ಯದ ನಾನಾ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಂದ ಬದುಕು ಕಟ್ಟಿಕೊಳ್ಳಲು ನಗರಕ್ಕೆ ವಲಸೆ ಬಂದಿರುವ ಕೂಲಿಕಾರ್ಮಿಕರ ಮಕ್ಕಳು ಕಲಿಕೆಯಿಂದ ದೂರ ಉಳಿಯಬಾರದು. ಇನ್ನು, ಭಿಕ್ಷಾಟನೆ, ಬಡತನ, ಶಾಲೆ ದೂರ ಇದೆ ಎಂಬ ಕಾರಣಗಳಿಂದ ಯಾರು ಸಹ ಶಿಕ್ಷಣದಿಂದ ವಂಚಿತರಾಗುವುದು ಸರಿಯಲ್ಲ. ಹೀಗಾಗಿ ಈ ವಿನೂತನ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದು ಯಶಸ್ಸು ಸಿಗುವ ನಿರೀಕ್ಷೆಯಿದೆ ಎಂದು ಆಯುಕ್ತರು ಹೇಳಿದರು.

ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಮಕ್ಕಳ ಭಿಕ್ಷಾಟನೆ ಮೇಲೆ ಗಂಭೀರ ನಿಗಾ ಇಡಲಾಗಿದ್ದು, ಈ ಸಂಬಂಧ ಅಧಿಕಾರಿಗಳು, ಸಿಬ್ಬಂದಿಗಳು ಸಮೀಕ್ಷೆ ನಡೆಸುವಾಗ ಮಾಹಿತಿ ಸಂಗ್ರಹಿಸಬೇಕು. ಆಗ ಮಾತ್ರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂದು ಮಂಜುನಾಥ ಪ್ರಸಾದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News