ಗ್ರಾಮ ರಾಜ್ಯದ ಮೂಲಕ ರಾಮರಾಜ್ಯ ಸ್ಥಾಪಿಸುವ ಗುರಿ: ಸಿಎಂ ಯಡಿಯೂರಪ್ಪ

Update: 2021-01-20 16:45 GMT

ಬೆಂಗಳೂರು, ಜ. 20: ‘ರಾಜ್ಯದ ಎಲ್ಲ ಜಿಲ್ಲಾಡಳಿತಗಳು ಗ್ರಾಮಮುಖಿಯಾಗಿರಬೇಕು. ಗ್ರಾಮ ರಾಜ್ಯದ ಮೂಲಕ ರಾಮರಾಜ್ಯ ಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಎಲ್ಲ ಸಮಸ್ಯೆ ಇತ್ಯರ್ಥವಾದರೆ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಆ ನಿಟ್ಟಿನಲ್ಲಿ ಆಡಳಿತ ಯಂತ್ರ ಸದಾ ಸ್ಪಂದನಶೀಲವಾಗಿರುವಂತೆ ನೋಡಿಕೊಳ್ಳುವುದು ಅಧಿಕಾರಗಳ ಹೊಣೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳ ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿದ ಅವರು, ಕೊವಿಡ್-19ಸೋಂಕಿನ ಕಾರಣ ಅಭಿವೃದ್ಧಿಗಳ ವೇಗ ಕುಂಠಿತವಾಗಿದ್ದು, ಆಡಳಿತ ಯಂತ್ರಾಂಗ ಮತ್ತಷ್ಟು ಚುರುಕುಗೊಳ್ಳಬೇಕು ಎಂದು ಸೂಚಿಸಿದರು.

ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಿ: ಹತ್ತು ತಿಂಗಳಿಂದ ಬರ, ಪ್ರವಾಹ, ಕೊವಿಡ್ ಸೋಂಕಿನ ಸಮಸ್ಯೆ ಇತ್ತು. ಸಂಕಷ್ಟದ ಸಮಯದಲ್ಲಿ ಎಲ್ಲವನ್ನೂ ನಿಭಾಯಿಸಿದ್ದೀರಿ ಅಭಿನಂದನೆಗಳು. ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವಂತೆ ಪ್ರಧಾನಿ ಮೋದಿ ಕರೆ ನೀಡಿರುವಂತೆ ಅಭಿವೃದ್ಧಿ ಕಾರ್ಯಗಳಿಗೆ ಆಸ್ಥೆವಹಿಸಬೇಕು ಎಂದರು.

ಅಧಿಕಾರಿಗಳು ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು. ಗ್ರಾಮಗಳ ಅಭಿವೃದ್ಧಿಯಿಂದಲೇ ನಾಡಿನ ಅಭಿವೃದ್ಧಿ ಸಾಧ್ಯ. ಕುಡಿಯುವ ನೀರು, ಜಮೀನು ಸಮಸ್ಯೆ, ಸ್ವಚ್ಛತೆ ಸೇರಿದಂತೆ ಮತ್ತಿತ್ತರ ಸಮಸ್ಯೆಗಳನ್ನು ಬಗೆಹರಿಸಬೇಕು. ಜನ ನೆಮ್ಮದಿಯಿಂದ ಜೀವನ ನಡೆಸಲು ಕ್ರಮವಹಿಸಬೇಕು. ಈಗಾಗಲೇ ಶಾಲೆ ಆರಂಭವಾಗಿದೆ ವಿದ್ಯಾರ್ಥಿಗಳು, ಪೋಷಕರ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಶಾಲೆಗಳ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಉದ್ಬವಾಗದಂತೆ ಕ್ರಮ ವಹಿಸಿ. ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ವಿದ್ಯಾರ್ಥಿಗಳ ನಿಲಯಗಳಲ್ಲಿ ಮಕ್ಕಳ ಆರೋಗ್ಯಕ್ಕೆ ಗಮನಹರಿಸಬೇಕು. ಉತ್ತಮ ಗುಣಮಟ್ಟದ, ಶುಚಿಯಾದ ಆಹಾರ ಒದಗಿಸಲು ಕ್ರಮವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ಶಾಲೆಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಬರುವಂತೆ ಆಗಬೇಕು. ಶಾಲೆ ನಡೆಯದ ಕಾರಣ ಬಾಲ್ಯ ವಿವಾಹ ಪ್ರಕರಣ ಹೆಚ್ಚಿವೆ. ಈ ಕುರಿತು ಎಚ್ಚರಿಕೆ ವಹಿಸಬೇಕು. ಇದರ ಜತೆಗೆ ಕೊರೋನ ಲಸಿಕೆ ಅಭಿಯಾನ ಯಶಸ್ವಿಗೊಳಿಸುವ ಹೊಣೆಗಾರಿಕೆ ನಿಮ್ಮದಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಬೇಸಿಗೆ ಬರಲಿದೆ: ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆ ಆರಂಭವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು. ಹೀಗಾಗಿ ಅಂತಹ ಗ್ರಾಮಗಳನ್ನು ಗುರುತಿಸಿ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಿಯಾಯೋಜನೆ ರೂಪಿಸಬೇಕು. ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ಬಿಎಸ್‍ವೈ ಸೂಚಿಸಿದರು.

ಕಾಯ್ದೆ ಅನುಷ್ಠಾನಕ್ಕೆ ಕ್ರಮ ವಹಿಸಿ: ರಾಜ್ಯದಲ್ಲಿಅಧ್ಯಾದೇಶದ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿ: ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಬೇಕು. ಜಿಲ್ಲೆಯಲ್ಲಿ ನೀವೇ ಸರಕಾರದ ಮುಖವಾಣಿ ಇದ್ದಂತೆ. ನೀವು ಆಸಕ್ತಿವಹಿಸಿ, ಜನಪರ ಕಾಳಜಿ ವಹಿಸಬೇಕು. ಇದರಿಂದ ನಿಮಗೂ ಗೌರವ, ಸರಕಾರಕ್ಕೂ ಒಳ್ಳೆಯ ಹೆಸರು ಬರಲಿದೆ. ಸರಕಾರದ ಆಶಯ ಕಾರ್ಯಕ್ರಮಗಳು ಕೆಳಹಂತದ ನಾಗರಿಕನಿಗೂ ತಲುಪಿಸುವ ಜವಾಬ್ದಾರಿ ನಿಮ್ಮದು. ಕೊರೋನೋತ್ತರ ಕಾಲದಲ್ಲಿ ಮೊದಲು ನಿಮ್ಮಿಂದ ಹೆಚ್ಚು ನಿರೀಕ್ಷೆ ಇರಿಸಿಕೊಂಡಿದ್ದೇನೆ. ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ, ಸರಕಾರಕ್ಕೆ ಒಳ್ಳೆ ಹೆಸರು ತನ್ನಿ. ಸರಕಾರ ಸದಾ ನಿಮ್ಮ ಬೆಂಬಲಕ್ಕೆ ಇರಲಿದೆ ಎಂದು ಯಡಿಯೂರಪ್ಪ ಅಭಯ ನೀಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News