ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳ ನಿರ್ಮಾಣ: 3 ದಿನಗಳಲ್ಲಿ ವರದಿ ನೀಡುವಂತೆ ಆಯುಕ್ತರ ಸೂಚನೆ

Update: 2021-01-20 17:51 GMT

ಬೆಂಗಳೂರು, ಜ.20: ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಆಟದ ಮೈದಾನ, ಸರಕಾರಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಧಾರ್ಮಿಕ ಕಟ್ಟಡಗಳನ್ನು 3 ದಿನಗಳಲ್ಲಿ ಸಮೀಕ್ಷೆ ಮಾಡಿ ಸಮಗ್ರ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.

ಬುಧವಾರ ಬಿಬಿಎಂಪಿಯ ವಾರ್ ರೂಂನಲ್ಲಿ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ 2009ರಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ಪಿ.ಐ.ಎಲ್ ದಾಖಲಿಸಲಾಗಿದ್ದು, ಇದು ಕೇವಲ ಬಿಬಿಎಂಪಿಗೆ ಮಾತ್ರವಲ್ಲದೆ ದೇಶಕ್ಕೆ ಅನ್ವಯವಾಗಲಿದೆ. ಈ ಪೈಕಿ 2009ರ ಸೆ.29ರಂದು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಬೇಕೆಂಬ ಆದೇಶವಾಗಿದೆ ಎಂದರು.

ಈ ಆದೇಶದಲ್ಲಿ 2009ರ ಮುನ್ನ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಬೇರೆಡೆ ಸ್ಥಳಾಂತರ/ತೆರವುಗೊಳಿಸುವ ಕಾರ್ಯ ಮಾಡಬೇಕು. 2009ರ ಸೆ.29ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂಬ ಆದೇಶವಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

ಸರಕಾರಿ ಹಾಗೂ ಖಾಸಗಿ ಜಾಗದಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿರುತ್ತದೆ. ಈ ಪೈಕಿ ಖಾಸಗಿ ಜಾಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಹೊರತುಪಡಿಸಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಈ ಸಂಬಂಧ 2009ರ ಮುನ್ನ ಹಾಗೂ 2009ರ ನಂತರ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ಎಲ್ಲ ವಾರ್ಡ್ ಇಂಜಿನಿಯರ್ ಹಾಗೂ ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ನಡೆಸಿ 3 ದಿನಗಳಲ್ಲಿ ನಿಖರವಾದ ಪಟ್ಟಿಯನ್ನು ಸಿದ್ಧಪಡಿಸಿ ವರದಿ ನೀಡಬೇಕು ಎಂದು ಅವರು ಸೂಚನೆ ನೀಡಿದರು.

ಇದೇ ಜ.28ರಂದು ಧಾರ್ಮಿಕ ಕಟ್ಟಡಗಳ ವಿಚಾರವಾಗಿ ಹೈಕೋರ್ಟ್‍ನಲ್ಲಿ ವಿಚಾರಣೆಯಿದ್ದು, ಈ ವಿಚಾರಣೆಯಲ್ಲಿ ನಿಖರವಾದ ಮಾಹಿತಿ ನೀಡಬೇಕು. ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಸಮೀಕ್ಷೆಯು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಆದುದರಿಂದ, ಯಾವ ಅಧಿಕಾರಿಯೂ ಇದನ್ನು ಕಡೆಗಣಿಸುವಂತಿಲ್ಲ. ಪಾಲಿಕೆಯ ಎಲ್ಲ 8 ವಲಯಗಳ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಮಾಡಿ ವರದಿ ನೀಡಬೇಕು. ಜೊತೆಗೆ 2009ರ ನಂತರ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳಿಗೆ 27ರೊಳಗೆ ನೋಟಿಸ್ ಜಾರಿ ಮಾಡಿ ಧಾರ್ಮಿಕ ಕಟ್ಟಡಗಳು ನಿರ್ಮಿಸಿರುವವರಿಂದ 1 ವಾರದಲ್ಲಿ ಆ ಬಗ್ಗೆ ಸಮಜಾಯಿಷಿ ಪಡೆಯಬೇಕು ಎಂದು ಅವರು ಸೂಚನೆ ನೀಡಿದರು.

ಧಾರ್ಮಿಕ ಕಟ್ಟಡಗಳ ಸಮೀಕ್ಷೆಯನ್ನು ಎಲ್ಲ ಅಧಿಕಾರಿಗಳು ಒಂದೇ ಮಾದರಿಯಲ್ಲಿ ಮಾಡಬೇಕು. ವಲಯದ ಹೆಸರು, ದೇವಸ್ಥಾನ/ಚರ್ಚ್/ಮಸೀದಿ/ಗುರುದ್ವಾರದ ಹೆಸರು, ಯಾವ ವಾರ್ಡ್ ಮತ್ತು ವಾರ್ಡ್ ಸಂಖ್ಯೆ, ವಿಳಾಸ, ಧಾರ್ಮಿಕ ಕಟ್ಟಡಗಳನ್ನು 2009ರ ಮುನ್ನ ಹಾಗೂ 2009ರ ನಂತರ ನಿರ್ಮಾಣ ಮಾಡಿರುವ ಬಗ್ಗೆ ಹಾಗೂ ಎಷ್ಟು ಅಳತೆಯಲ್ಲಿ ದೇವಸ್ಥಾನವಿದೆ ಎಂಬ ಜಾಗದ ಅಂದಾಜು ಮಾಹಿತಿಯನ್ನು ನೀಡಬೇಕು ಎಂದು ಅವರು ಹೇಳಿದರು.

ಈ ಸಂಬಂಧ ಒಂದು ಮಾದರಿ(ಫಾರ್ಮೆಟ್) ನೀಡಲಾಗುತ್ತದೆ. ಅದರಂತೆ ಸಮೀಕ್ಷೆ ನಡೆಸಿ ಸಮಗ್ರ ಮಾಹಿತಿಯನ್ನು ತ್ವರಿತವಾಗಿ ಸಿದ್ಧಪಡಿಸಿಕೊಡಬೇಕು. ಪಟ್ಟಿ ಮಾಡಿರುವ ಧಾರ್ಮಿಕ ಕಟ್ಟಡಗಳ ಛಾಯಾಚಿತ್ರಗಳನ್ನು ಕೂಡಾ ವರದಿಯಲ್ಲಿ ಲಗತ್ತಿಸಿರಬೇಕು. ಹೈಕೋರ್ಟ್‍ಗೆ ವರದಿ ಸಲ್ಲಿಸಿದ ನಂತರ ಪೊಲೀಸ್ ಇಲಾಖೆಯ ಭ್ರದತೆಯೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತರಾದ ಜೆ.ಮಂಜುನಾಥ್, ಬಸವರಾಜ್, ರಾಜೇಂದ್ರ ಚೋಳನ್, ರವೀಂದ್ರ, ತುಳಸಿ ಮದ್ದಿನೇನಿ ಉಪಸ್ಥಿತರಿದ್ದರು. ಹಾಗೂ ಎಲ್ಲ ವಲಯಗಳ ಜಂಟಿ ಆಯುಕ್ತರುು, ಮುಖ್ಯ ಇಂಜಿನಿಯರ್‍ಗಳು, ಕಾರ್ಯಪಾಲಕ ಇಂಜಿನಿಯರ್‍ಗಳು, ಸಹಾಯಕ ಕಾರ್ಯಪಾಲಕ/ಸಹಾಯಕ ಇಂಜಿನಿಯರ್‍ಗಳು, ಕಂದಾಯ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News