ದರೋಡೆ ಪ್ರಕರಣದ ಆರೋಪಿಗೆ ಗುಂಡಿಕ್ಕಿ ಬಂಧನ

Update: 2021-01-21 13:53 GMT

ಬೆಂಗಳೂರು, ಜ.21: ದರೋಡೆ ಪ್ರಕರಣದ ಆರೋಪಿಯೋರ್ವನ ಕಾಲಿಗೆ ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಕೆಂಗೇರಿ ನಿವಾಸಿ ರಾಜೇಶ್(20) ಬಂಧಿತ ಆರೋಪಿಯಾಗಿದ್ದು, ಗುಂಡೇಟಿನಿಂದ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಆರೋಪಿ ರಾಜೇಶ್ ಅನ್ನು ಸೆರೆಹಿಡಿಯಲು ಹೋಗಿದ್ದ ಮುಖ್ಯ ಪೇದೆ ಶ್ರೀನಿವಾಸ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಆರೋಪಿ ರಾಜೇಶ್ ಸೇರಿ ಮೂವರು ಆರೋಪಿಗಳು ಜ.17ರಂದು ಬ್ಯಾಡರಹಳ್ಳಿಯಲ್ಲಿರುವ ತರಕಾರಿ ಸರಬರಾಜು ಮಾಡುವ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಎರಡು ಮೊಬೈಲ್, 6.5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇನ್‍ಸ್ಪೆಕ್ಟರ್ ರಾಜೀವ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತಂಡವು ಕೃತ್ಯ ನಡೆಸಿದವರ ಪತ್ತೆಗೆ ಶೋಧ ಕೈಗೊಂಡಿದ್ದಾಗ, ಗುರುವಾರ ದಾಸರಹಳ್ಳಿಯ ಬ್ರಹ್ಮದೇವರಗುಡ್ಡದ ಬಳಿ ಆರೋಪಿ ರಾಜೇಶ್, ಅಡಗಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಪೊಲೀಸರ ಜೀಪ್ ಬಂದಿರುವುದನ್ನು ಕಂಡ ರಾಜೇಶ್ ಓಡಿ ಹೋಗಿದ್ದು, ಆತನನ್ನು ಬೆನ್ನಟ್ಟಿ ಬಂಧಿಸಲು ತೆರಳಿದಾಗ ಮುಖ್ಯ ಪೇದೆ ಶ್ರೀನಿವಾಸ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಈ ಸಂದರ್ಭದಲ್ಲಿ ಚಾಕು ಎಸೆದು ಶರಣಾಗುವಂತೆ ಸೂಚಿಸಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಲಾಗಿದೆ. ಆದರೂ ಮತ್ತೆ ಹಲ್ಲೆಗೆ ಮುಂದಾದ ರಾಜೇಶ್ ಮೇಲೆ ಆತ್ಮರಕ್ಷಣೆಗೆ ಇನ್‍ಸ್ಪೆಕ್ಟರ್ ಹಾರಿಸಿದ ಗುಂಡು ರಾಜೀವ್ ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News