ಫೆ.3ರಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಸಂಭವನೀಯ ಅವಘಡ ತಡೆಗೆ ವಿಪತ್ತು ನಿರ್ವಹಣಾ ಮಾರ್ಗಸೂಚಿ

Update: 2021-01-21 15:45 GMT

ಬೆಂಗಳೂರು, ಜ. 21: ಏರೋ ಇಂಡಿಯಾ 13ನೆ ಆವೃತ್ತಿ ‘ವೈಮಾನಿಕ ಪ್ರದರ್ಶನ-2021'ರಲ್ಲಿ ಅಗ್ನಿ ಅವಘಡ, ವಿಮಾನ ಅಪಘಾತ, ಭಯೋತ್ಪಾದನೆ ಸೇರಿ ಸಂಭವನೀಯ ಅವಘಡಗಳನ್ನು ತಡೆಗಟ್ಟಲು ಮುನ್ನಚ್ಚರಿಕೆ ವಹಿಸಲು ವಿಪತ್ತು ನಿರ್ವಹಣಾ ಇಲಾಖೆ ಸುರಕ್ಷತಾ ಮಾರ್ಗಸೂಚಿಯನ್ನು ಕಂದಾಯ ಇಲಾಖೆ ಬಿಡುಗಡೆ ಮಾಡಿದೆ.

ಗುರುವಾರ ವಿಧಾನಸೌಧದಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕಂದಾಯ ಸಚಿವ ಆರ್.ಅಶೋಕ್, ಕಳೆದ ವರ್ಷ ಏರೋ ಶೋ ವೇಳೆ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಮೊದಲ ಬಾರಿಗೆ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಪರಿಹಾರ, ವಿಮೆ ಸೌಲಭ್ಯ ಕಲ್ಪಿಸಲು ಸಮಸ್ಯೆ ಉಂಟಾಗಿತ್ತು. ಹೀಗಾಗಿ ಅಂತಹ ಘಟನೆಗಳ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ವೈಮಾನಿಕ ಪ್ರದರ್ಶನ ವಿಪತ್ತು ನಿರ್ವಹಣೆಗೆ ಮಾರ್ಗಸೂಚಿ, ಆ್ಯಪ್ ಬಿಡುಗಡೆ ಮಾಡಲಾಗಿದೆ. ಕೋವಿಡ್, ಬೆಂಕಿ ಅವಘಡ, ಕಟ್ಟಡ ಕುಸಿತ, ಕಾಲ್ತುಳಿತ, ವಿಮಾನ ಅಪಘಾತ, ಅಣುವಿಕಿರಣ ಅಪಾಯ, ಭಯೋತ್ಪಾದನೆ, ಡ್ರೋಣ್ ದಾಳಿ, ಹವಾಮಾನ ವೈಫರೀತ್ಯ ಸೇರಿದಂತೆ ಇನ್ನಿತರ ವಿಪತ್ತುಗಳನ್ನು ಗುರುತಿಸಲಾಗಿದೆ.

ವಿಪತ್ತು ನಿರ್ವಹಣೆಗಾಗಿ ಒಬ್ಬ ಪ್ರತ್ಯೇಕ ಅಧಿಕಾರಿಯನ್ನೇ ನಿಯೋಜಿಸಿದ್ದೇವೆ. ಇದೇ ಮೊದಲ ಬಾರಿಗೆ ವಿಶೇಷ ಭೌಗೋಳಿಕ ಮಾಹಿತಿ ವ್ಯವಸ್ಥೆ (ಭೂ ವೈಜ್ಞಾನಿಕ ಮಾಹಿತಿ ವ್ಯವಸ್ಥೆ) ಅಂತರ್ಜಾಲ ತಾಣವನ್ನು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ವೈಮಾನಿಕ ಪುದರ್ಶನ-2021ಕ್ಕಾಗಿ http://dev.ksrsac.in/aeroshow/ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಒಳಾಂಗಣ ಹಾಗೂ ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆಗಳ ಎಲ್ಲ ಅಂಶಗಳನ್ನು ಪ್ರಸ್ತುತಪಡಿಸಲಾಗಿದೆ ಎಂದರು.

2021ರ ಫೆ.3ರಿಂದ 5ರವರೆಗೆ ಏರ್ ಶೋ ನಡೆಯಲಿದೆ. ಒಟ್ಟು 14 ರಾಷ್ಟ್ರಗಳ 541 ಪ್ರದರ್ಶಕರು ಭಾಗವಹಿಸಲಿದ್ದು, 463 ಭಾರತೀಯ, 78 ವಿದೇಶಿ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಒಟ್ಟು 61 ವಿಮಾನಗಳು ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.

ವಿಪತ್ತು ಹಾಗೂ ತುರ್ತು ಪರಿಸ್ಥಿತಿಯ ವರದಿ ಮಾಡಲು ಹಾಗೂ ಅವಶ್ಯವಿರುವ ಸಂಪನ್ಮೂಲಗಳನ್ನು ಗುರುತಿಸಿ ನೆರವಾಗಲು ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಏರೋ ಶೋ ಭೇಟಿ ನೀಡುವ ಸಂದರ್ಶಕರಿಗೆ ಪ್ರದರ್ಶನದ ಸ್ಥಳದಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಗುರುತಿಸಲು ಆಪ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಗೃಹ, ಮೂಲಸೌಲಭ್ಯ, ಸಾರಿಗೆ, ಆರೋಗ್ಯ, ಲೋಕೋಪಯೋಗಿ, ಇಂಧನ, ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್‍ಎಸ್‍ಬಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಪತ್ತು ನಿರ್ವಹಣೆಗೆ ಕ್ರಮ ವಹಿಸಿದ್ದು, ಅವಘಡಗಳ ತಡೆಗಟ್ಟಲು ಮುನ್ನಚ್ಚರಿಕೆ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ವೇಳೆ ಸಂಸದ ಪಿ.ಸಿ.ಮೋಹನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News