24.50 ಲಕ್ಷ ರೈತರಿಗೆ 15,300 ಕೋಟಿ ರೂ. ಸಾಲ ವಿತರಣೆ ಗುರಿ: ಎಸ್.ಟಿ.ಸೋಮಶೇಖರ್

Update: 2021-01-21 15:51 GMT

ಬೆಂಗಳೂರು, ಜ.21: ನಮ್ಮದು ಜನಪರ, ರೈತಪರ ಸರಕಾರ. ನನ್ನದು ಸಹಕಾರ ಕೊಡುವ ಇಲಾಖೆ. ಹೀಗಾಗಿ ಕೊಟ್ಟ ಮಾತಿಗೆ ತಪ್ಪುವ ಪ್ರಶ್ನೆಯೇ ಇಲ್ಲ. ಪ್ರಸಕ್ತ ಸಾಲಿನಲ್ಲಿ ರೈತರಿಗೆ ನೀಡಬೇಕೆಂದಿರುವ ಬೆಳೆ ಸಾಲದ ಗುರಿಯನ್ನು ತಲುಪಲೇಬೇಕು ಎಂಬ ನಿಟ್ಟಿನಲ್ಲಿ ‘ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ’ ಎಂಬ ರೀತಿಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ದೇವನಹಳ್ಳಿಯಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕ್‍ಗಳ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೊರೋನ ಸಂಕಷ್ಟದ ಕಾಲದಲ್ಲಿ ಸಾಲ ಕೊಡುವುದೇ ಕಷ್ಟ ಎಂಬ ಸ್ಥಿತಿಯಲ್ಲಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಚ್ಛೆಯಂತೆ ಕಳೆದ ವರ್ಷಕ್ಕಿಂತ ಒಂದೂವರೆ ಸಾವಿರ ಕೋಟಿಗೂ ಅಧಿಕ ಅಂದರೆ 15,300 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಹಾಕಿಕೊಂಡಿದ್ದೆವು. ಒಟ್ಟು 24.50 ಲಕ್ಷ ರೈತರಿಗೆ ಸಾಲ ವಿತರಣೆ ಮಾಡುವ ಹೊಣೆಯನ್ನು ಅಪೆಕ್ಸ್, 21 ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಿಗೆ ವಹಿಸಲಾಗಿತ್ತು. ಈಗಾಗಲೇ 19,17,334 ರೈತರಿಗೆ 12,420.10 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.

19.17 ಲಕ್ಷ ರೈತರಿಗೆ 12,420 ಕೋಟಿ ರೂಪಾಯಿ ಸಾಲವನ್ನು ನೀಡುವಲ್ಲಿ ಡಿಸಿಸಿ ಬ್ಯಾಂಕ್‍ಗಳ ಸಹಿತ ಸಹಕಾರಿ ಸಂಸ್ಥೆಗಳ ಪಾತ್ರ ಬಹಳವೇ ಇದೆ. ಆದರೆ, ಒಟ್ಟಾರೆ 24.50 ಲಕ್ಷ ರೈತರಲ್ಲಿ ಇನ್ನು 5.33 ಲಕ್ಷ ರೈತರಿಗೆ 2,880 ಕೋಟಿ ರೂಪಾಯಿ ಮಾತ್ರ ಸಾಲ ವಿತರಣೆ ಬಾಕಿ ಇದ್ದು, ಇದನ್ನೂ ಇದೇ ಫೆಬ್ರವರಿ ಮಾಸಾಂತ್ಯದೊಳಗೆ ಮುಟ್ಟಬೇಕೆಂಬ ಗುರಿಯನ್ನು ಹಾಕಿಕೊಂಡಿದ್ದೇನೆ ಎಂದು ಸೋಮಶೇಖರ್ ತಿಳಿಸಿದರು.

ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಇದರ ಭಾಗವಾಗಿ ಈಗಾಗಲೇ ಮಂಡ್ಯದ ಪಾಂಡವಪುರ, ನಾಗಮಂಗಲ, ಮೈಸೂರಿನ ಟಿ.ನರಸೀಪುರ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ, ಸಭೆ ನಡೆಸಿದ್ದೇನೆ. ಇಂದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ದೇವನಹಳ್ಳಿ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ, ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಮಾರ್ಗದರ್ಶನ, ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ರೈತರಿಗೆ ಎಷ್ಟು ಪ್ರಮಾಣದಲ್ಲಿ, ಯಾವ ಯಾವ ವಿಭಾಗದಲ್ಲಿ ಸಾಲ ನೀಡಲಾಗಿದೆ. ಬಡವರ ಬಂಧು, ಕಾಯಕ, ಎಸ್ಸಿ, ಎಸ್ಟಿ ಯೋಜನೆಗಳಿಗೆ ಸಾಲ ನೀಡಿಕೆ ಪ್ರಮಾಣ ಹೇಗಿದೆ ಎಂಬಿತ್ಯಾದಿ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಈ ಸಂದರ್ಭದಲ್ಲಿ ಮಾಹಿತಿ ಪಡೆಯುತ್ತಿದ್ದೇನೆ. ಜೊತೆಗೆ ಶೀಘ್ರದಲ್ಲಿ ಗುರಿಯನ್ನು ತಲುಪುವಂತೆಯೂ ಸೂಚನೆ ನೀಡುತ್ತಾ ಬರುತ್ತಿದ್ದೇನೆ. ನೂರಕ್ಕೆ ನೂರು ಗುರಿ ಮುಟ್ಟುವ ವಿಶ್ವಾಸ ನನಗಿದೆ ಎಂದು ಸೋಮಶೇಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News