ಹಂಚಿಕೆಯಾದ ಎರಡೇ ದಿನದಲ್ಲಿ ಖಾತೆ ಮರು ಹಂಚಿಕೆ: ಮಾಧುಸ್ವಾಮಿಗೆ ಹೆಚ್ಚುವರಿಯಾಗಿ ಹಜ್ ಮತ್ತು ವಕ್ಫ್ ಹೊಣೆ

Update: 2021-01-22 11:53 GMT

ಬೆಂಗಳೂರು, ಜ. 22: ತಮಗೆ ನಿರೀಕ್ಷಿಸಿದ ಖಾತೆ ಸಿಗದ ಕಾರಣಕ್ಕೆ ಅತೀವ ಬೇಸರಗೊಂಡು ಸಂಪುಟ ಸಭೆಗೂ ಗೈರುಹಾಜರಾಗಿದ್ದ ಸಚಿವರಾದ ಎಂಟಿಬಿ ನಾಗರಾಜ್, ಕೆ.ಗೋಪಾಲಯ್ಯ ಸೇರಿದಂತೆ ಕೆಲ ಸಚಿವರ ಖಾತೆ ಅದಲು-ಬದಲು ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ಶಮನಕ್ಕೆ ಪ್ರಯತ್ನ ನಡೆಸಿದ್ದಾರೆ.

ಹಂಚಿಕೆಯಾದ ಎರಡೇ ದಿನದೊಳಗೆ ಖಾತೆ ಮರು ಹಂಚಿಕೆ ಮಾಡಿರುವುದು ವಿಶೇಷವಾಗಿದೆ. ಈ ಹಿಂದೆಯೂ ‘ವಲಸಿಗ ಸಚಿವರಿಗೆ' ನಿರೀಕ್ಷಿತ ಖಾತೆಗಳು ಸಿಕ್ಕಿರಲಿಲ್ಲ ಎಂಬ ಕಾರಣಕ್ಕೆ ಆ ಸಂದರ್ಭದಲ್ಲಿಯೂ ಖಾತೆ ಬದಲಾವಣೆ ಮಾಡಲಾಗಿತ್ತು. ಇದೀಗ ಕೆಲವು ಸಚಿವ ಖಾತೆಗಳನ್ನು ಪರಿಷ್ಕೃತಗೊಳಿಸಲಾಗಿದ್ದು, ಸಿಎಂ ಮನವಿ ಮೇರೆಗೆ ರಾಜ್ಯಪಾಲ ವಜೂಭಾಯಿ ವಾಲಾ ಸಹಿ ಹಾಕಿದ್ದಾರೆ.

ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಖಾತೆಯನ್ನು ವಾಪಸ್ ಪಡೆದಿದ್ದರಿಂದ ಮುನಿಸಿಕೊಂಡಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ಜೊತೆಗೆ ಹೆಚ್ಚುವರಿಯಾಗಿ ಹಜ್ ಮತ್ತು ವಕ್ಫ್ ಖಾತೆ ಹೊಣೆಯನ್ನು ನೀಡಲಾಗಿದೆ. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಣೆಯನ್ನು ವಹಿಸಲಾಗಿದೆ.

‘ಅಬಕಾರಿ ಖಾತೆ ತನಗೆ ಯಾವುದೇ ಕಾರಣಕ್ಕೂ ಬೇಡ' ಎಂದು ಪಟ್ಟು ಹಿಡಿದಿದ್ದ ಎಂಟಿಬಿ ನಾಗರಾಜ್‍ಗೆ ಪೌರಾಡಳಿತ ಹಾಗೂ ಸಕ್ಕರೆ ಖಾತೆ ಜವಾಬ್ದಾರಿ ನೀಡಿದ್ದು, ಕೆ.ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆಯನ್ನು ನೀಡಲಾಗಿದೆ. ಆರ್.ಶಂಕರ್ ಗೆ ತೋಟಗಾರಿಕೆ ಜೊತೆಗೆ ರೇಶ್ಮೆ ಹಾಗೂ ಕೆ.ಸಿ.ನಾರಾಯಣಗೌಡ ಅವರಿಗೆ ಹೆಚ್ಚುವರಿಯಾಗಿ ಯುವ ಸಬಲೀಕರಣ, ಕ್ರೀಡೆ, ಹೆಚ್ಚುವರಿಯಾಗಿ ಯೋಜನೆ ಕಾರ್ಯಕ್ರಮ ಉಸ್ತುವಾರಿ ಹಾಗೂ ಅಂಕಿ-ಸಂಖ್ಯೆ ಖಾತೆ ನೀಡಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಸಂಸದೀಯ ವ್ಯವಹಾರ, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ, ಮೂಲಭೂತ ಅಭಿವೃದ್ಧಿ ಸೇರಿದಂತೆ ಹಂಚಿಕೆಯಾಗದ ಇಲಾಖೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಉಳಿದಂತೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದಿರುವುದಕ್ಕೆ ಮುನಿಸಿಕೊಂಡಿರುವ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಮುಂದುವರಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News