ಥಾಯ್ಲೆಂಡ್ ಓಪನ್: ಸಾತ್ವಿಕ್‌ ಸಾಯಿರಾಜ್ - ಅಶ್ವಿನಿ ಪೊನ್ನಪ್ಪ ಮಿಕ್ಸೆಡ್ ಡಬಲ್ಸ್ ಸೆಮಿ ಫೈನಲ್‌ಗೆ

Update: 2021-01-22 18:46 GMT

ಬ್ಯಾಂಕಾಕ್: ಭಾರತದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಮಲೇಶ್ಯದ ಐದನೇ ಶ್ರೇಯಾಂಕದ ಪೆಂಗ್ ಸೂನ್ ಚಾನ್ ಹಾಗೂ ಲಿಯು ಯಿಂಗ್ ಗೊಹ್ ಅವರನ್ನು ಮೂರು ಗೇಮ್‌ಗಳ ಅಂತರದಿಂದ ಮಣಿಸಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೇಯಾಂಕರಹಿತ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್-ಅಶ್ವಿನಿ ವಿಶ್ವದ ನಂ.6ನೇ ಮಲೇಶ್ಯದ ಎದುರಾಳಿ ಪೆಂಗ್ ಸೂನ್ ಚಾನ್ ಹಾಗೂ ಲಿಯು ಯಿಂಗ್‌ರನ್ನು 18-21, 24-22, 22-20 ಗೇಮ್‌ಗಳ ಅಂತರದಿಂದ ಮಣಿಸಿ ಆಘಾತ ನೀಡಿದರು.

ಸಿಂಧು, ಸಮೀರ್‌ಗೆ ಸೋಲು

ಇದೇ ವೇಳೆ, ಪಿ.ವಿ.ಸಿಂಧು ಹಾಗೂ ಸಮೀರ್ ವರ್ಮಾ ಥಾಯ್ಲೆಂಡ್ ಓಪನ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಸಾತ್ವಿಕ್ ಹಾಗೂ ಅಶ್ವಿನಿ ಸೂಪರ್-1000 ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ ಭಾರತದ ಮೊದಲ ಮಿಕ್ಸೆಡ್ ಡಬಲ್ಸ್ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದ್ದಾರೆ.

ಸಿಂಧು ಅವರು ಥಾಯ್ಲೆಂಡ್‌ನ ರಚನೊಕ್ ಇಂಟನಾನ್ ವಿರುದ್ಧ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ 13-21, 9-21 ಗೇಮ್‌ಗಳ ಅಂತರದಿಂದ ಶರಣಾಗಿ ನಿರಾಸೆಗೊಳಿಸಿದರು.

 ಮೊದಲೆರಡು ಸುತ್ತಿನಲ್ಲಿ ಕೆಳ ರ್ಯಾಂಕಿನ ಆಟಗಾರ್ತಿ ಯರನ್ನು ಮಣಿಸಿದ್ದ ಸಿಂಧು ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ರಚನೊಕ್ ಅವರಿಂದ ಸವಾಲು ಎದುರಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ಡೆನ್ಮಾರ್ಕ್ ನ ಆ್ಯಂಡರ್ಸ್ ಅಂಟೊನ್‌ಸೆನ್ ವಿರುದ್ಧ 13-21, 21-19, 20-22 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಅಶ್ವಿನಿಯೊಂದಿಗೆ ಸೆಮಿ ಫೈನಲ್ ಪ್ರವೇಶಿಸಿದ ಬಳಿಕ ಚಿರಾಗ್ ಶೆಟ್ಟಿಯೊಂದಿಗೆ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಿದ ಸಾತ್ವಿಕ್ ಮಲೇಶ್ಯಾದ ಒಂಗ್ ಯೀವ್ ಸಿನ್ ಹಾಗೂ ಟೆಯೊ ಈ ಯೀ ಅವರನ್ನು 21-19, 24-22 ಗೇಮ್‌ಗಳ ಅಂತರದಿಂದ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News