ಕಾಗೆ ಮುಟ್ಟಿದ ನೀರು: ಪುರುಷೋತ್ತಮ ಕಾರ್ಯೋತ್ತಮನಾದ ಯಶೋಗಾಥೆ

Update: 2021-01-23 19:30 GMT

ಅಮಾವಾಸ್ಯೆ ದಿನ ಹುಟ್ಟಿದ ರೋಯಿತ ಎಂಬ ಬಾಲಕನ ಜಾತಕ ಚೆನ್ನಾಗಿಲ್ಲ. ಆದರೆ ಅದನ್ನು ನಂಬದಿರುವ ಸಾಧ್ಯತೆಯೂ ಇಲ್ಲ. ಯಾಕೆಂದರೆ ಪರಿಸರವೇ ಅಂತಹದ್ದು. ಜಾತಕ ಫಲಾಪಲಗಳನ್ನು ಆರೋಪಿಸಿ ಹಣೆಗೆ ಅಂಟಿಸಿಕೊಂಡು ಮುನ್ನೆಡೆಯುವ ಯುವಕ ದೈವಶಾಸ್ತ್ರ ಬರೆದ ಶಾಸನವನ್ನು ‘ಜಲ-ಲಿಪಿ’ಯಾಗಿ ಮಾಡಿಕೊಳ್ಳಲು ಹೊರಡುತ್ತಾನೆ. ಬದುಕಿನುದ್ದಕ್ಕೂ ಹೋರಾಡುತ್ತಾನೆ. ಇದು ರೋಯಿತ ಪುರುಷೋತ್ತಮನಾದ, ಪುರುಷೋತ್ತಮ ಕಾರ್ಯೋತ್ತಮನಾದ ಯಶೋಗಾಥೆ.

ರೋಯಿತನ ಬಾಲ್ಯದ ನೆನಪುಗಳು ಬಹುತೇಕ ಹಳ್ಳಿ ಮಕ್ಕಳ ಜೀವನವೇ ಆಗಿರುವುದರಿಂದಲೋ ಏನೋ ಅಷ್ಟಾಗಿ ಓದುಗನನ್ನು ಕಾಡುವುದಿಲ್ಲ. ಆದರೆ ಆ ಬಾಲ್ಯದ ಕೆಲವು ಘಟನೆಗಳಾದ ಮನೆಯಿಂದ ಯಾವಾಗಲೂ ಹೊರಗೆ ಹೆಚ್ಚು ತಿರುಗುತ್ತಿದ್ದ ತಂದೆಯ ಅನುಪಸ್ಥಿತಿಯಲ್ಲೂ ಕಾಡೊಳಗಿನ ಗುಡಿಸಲಿನಲ್ಲಿ ಅಮ್ಮ ತನ್ನನ್ನು ತಾನು ರಕ್ಷಣೆಮಾಡುತ್ತಲೇ ಮಕ್ಕಳ ಪೋಷಣೆ ಜವಾಬ್ದಾರಿ ಮಾಡುವುದು, ಮತ್ತೊಂದು ಕಡೆಯಲ್ಲಿ ಹಣೆಯಲ್ಲಿ ಬರೆಯದ ವಿದ್ಯೆ ಕಲಿಯುವುದೇ ಬೇಡವೆಂದು ನಿರಾಕರಿಸುವ ಗಂಡನ ಮುಂದೆ ಬಡತನವನ್ನು ಹೇಗಾದರೂ ಮಾಡಿ ಮರೆತೇನು, ಆದರೆ ಮಕ್ಕಳಿಗೆ ವಿದ್ಯೆ ಕಲಿಸುವುದನ್ನು ಬಿಡೆನು ಎಂಬಂತೆ ಮಕ್ಕಳ ಹಣೆಬರಹವನ್ನೇ ಬದಲಾಯಿಸಲು ಅಮ್ಮ ನಡೆಸುವ ಹೋರಾಟ, ಅವಳ ಆಸೆ ನಿಜಕ್ಕೂ ಪ್ರತೀ ಭಾರತೀಯ ನಾರಿಯೂ ಅನುಸರಿಸಬೇಕಾದ ಮಾರ್ಗದಂತೆ ತೋರುತ್ತದೆ.

ಶಾಲೆಗೆ ಹೊರಟ ಹುಡುಗನಿಗೆ ಮಳೆಗಾಲದಲ್ಲಿ ಕಿರುತೊರೆ ಪ್ರವಾಹದಿಂದ ಶಾಲೆಯಿಂದ ಮನೆಗೆ ಬರುವಾಗ ದಾಟಲಾಗದೆ ಮರದ ಪೊಟರೆಯಲ್ಲೇ ರಾತ್ರಿ ಪೂರ್ತಿ ಉಳಿಯಬೇಕಾದ ಪ್ರಸಂಗ, ಅಮ್ಮ ಬೆಳಗ್ಗೆ ಅವನನ್ನು ಹುಡುಕಿ ಬಂದು ಬಾಚಿತಬ್ಬಿಕೊಳ್ಳುವ ಸನ್ನಿವೇಶ, ಹೀಗೆ ಎದುರಾಗುವ ಅಡೆತಡೆಗಳನ್ನು ಲೆಕ್ಕಿಸದೆ ಶಾಲೆಗೆ ಹೋಗುವ ಉತ್ಸಾಹದ ಹುಡುಗನಾಗಿ ಕಾಣಿಸುವ ಬಿಳಿಮಲೆಯವರು ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತಿಗೆ ಅನ್ವರ್ಥವಾಗಿ ಕಾಣಿಸುತ್ತಾರೆ. ಇನ್ನು ಊರಿನ ವ್ಯಾಪಾರಿ ‘ಕುಟ್ಟಬ್ಯಾರಿ’ ಎಂಬವರು ತನಗೆ ಒಂದು ನೆಲೆ ಇಲ್ಲದಿದ್ದರೂ ಹಿಂದೂ ಹುಡುಗನನ್ನು ಎತ್ತರದ ಜಾಗದಲ್ಲಿ ಕೂರಿಸಿ ಆಟ ನೋಡುವ ಔದಾರ್ಯವು ಧರ್ಮದ ಹೆಸರಲ್ಲಿ ಸಮಾಜವನ್ನು ಸದಾ ಕಡ್ಡಿಯಾಡಿಸುತ್ತಲೇ ಇರುವವರಿಗೆ ನೀತಿಪಾಠದಂತಿದೆ. ಇನ್ನು ಅದೇ ಕುಟ್ಟಬ್ಯಾರಿ ಸರಕಾರ ಕೊಡುವ 5 ಸೆಂಟ್ಸ್ ಜಾಗಕ್ಕೆ ಕಾಯುತ್ತಲೇ ಇರುವುದು, ಬಡ ಭಾರತೀಯನೊಬ್ಬ ಭಾರತ ದೇಶದಲ್ಲಿ ನೆಲೆ ನಿಲ್ಲಲು ಕಡೆಗೂ 5 ಸೆಂಟ್ಸ್ ಸಿಗದೆ ತನ್ನ ಕನಸುಗಳೊಂದಿಗೆ ಸಮಾಧಿಯಾಗುವ ಸ್ಥಿತಿ ಇಂದಿನ ಅನೇಕ ಭಾರತೀಯರ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.
ಕೂತ್ಕುಂಜ ಶಾಲೆಯಿಂದ ಪಂಜ ಶಾಲೆಯಲ್ಲಿ ಪ್ರೌಢ ಶಾಲಾ ಶಿಕ್ಷಣ ಮುಗಿಸಿ, ಹೊಟೇಲ್‌ನಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿ ಹೊಟ್ಟೆ ತುಂಬಿಸಿಕೊಳ್ಳಲು ಹೆಣಗಾಡುವುದು, ಆನಂತರ ಮಗ ಮೇಷ್ಟ್ರ ಕೆಲಸಕ್ಕೆ ಸೇರಿಕೊಳ್ಳಲಿ ಎಂದು ಬಹುದೂರದ ಉಡುಪಿ ಹತ್ತಿರದ ಕೊಕ್ಕರ್ಣೆಯ ಶಿಕ್ಷಕ ತರಬೇತಿ ಶಾಲೆಗೆ ಅಪ್ಪಸೇರಿಸಿ ಹೋದರೆ, ರಾತ್ರೋರಾತ್ರಿ ಮನಸ್ಸು ಬದಲಾಯಿಸಿ ಅಲ್ಲಿಂದ ಬಿಡಿಸಿಕೊಂಡು ನಾನು ಮತ್ತೇನೋ ಓದಲೇಬೇಕೆಂದು ಮಳೆಯಲ್ಲೇ ಹೊರಡುವ ಬಿಳಿಮಲೆ, ಸುಬ್ರಹ್ಮಣ್ಯಕ್ಕೆ ತಲುಪಿ ಕಾಲೇಜು ಸೇರುವ ಸಾಹಸ ಮಾಡುವುದು ಸಾಧಾರಣ ಹುಡುಗರ ವ್ಯಕ್ತಿತ್ವಕ್ಕೆ ಒಗ್ಗದ ವಿಷಯವಾಗಿ ಕಾಣುತ್ತದೆ.

ಈ ವಾಮನ ಮೂರ್ತಿಗೆ ಅದೆಂತಹ ಭರವಸೆಯೋ ಏನೋ, ಅಥವಾ ಹುಚ್ಚು ಸಾಹಸವೋ ತಿಳಿಯದು. ಹೆಚ್ಚು ಆದಾಯ ಬರುವ ದೂರದ ಊರಿನ ಬದಲಿಗೆ ಹತ್ತಿರದಲ್ಲೇ ಕಡಿಮೆ ಆದಾಯವಾದರೂ ಸಾಕು ಎಂಬಂತೆ ಎಲ್ಲರೂ ಸ್ಥಳೀಯವಾಗಿ ನೆಲೆನಿಲ್ಲಲು ಯತ್ನಿಸುತ್ತೇವೆ. ಸಿಕ್ಕಿದ ಅವಕಾಶವನ್ನು ಗೆಬರಿಕೊಂಡು ಅದೇ ಸುಂದರ ಬದುಕು ಎನ್ನುವವರ ಮಧ್ಯೆ ಬಿಳಿಮಲೆ ವಿಚಿತ್ರವಾಗಿ ಕಾಣುತ್ತಾರೆ. ಬಾಲ್ಯದಿಂದ ಆರಂಭಿಸಿ ಬದುಕಿನುದ್ದಕ್ಕೂ ಬದುಕಿನ ಬಂಡಿಯನ್ನು ವಿಚಿತ್ರವಾಗಿಯೇ ತಿರುಗಿಸುತ್ತಾರೆ. ಹತ್ತಿರದ ಮೈಸೂರಿನಲ್ಲಿ ಅವಕಾಶವಿದ್ದರೂ ಪುತ್ತೂರಿನಿಂದ ಗೊತ್ತು ಗುರಿ ಇಲ್ಲದ ಮದ್ರಾಸಿಗೆ ಶಿಕ್ಷಣಕ್ಕಾಗಿ ಹೊರಡಲು ಬಯಸುತ್ತಾರೆ. ಸುಳ್ಯ ಕಾಲೇಜಿನಲ್ಲಿ ಆಗತಾನೇ ಕೆಲಸ ಖಾಯಂ ಆಗಿರುವುದನ್ನು ಬಿಟ್ಟು ಮಂಗಳೂರು ವಿ.ವಿ.ಯ ತಾತ್ಕಾಲಿಕವಾದ ಹುದ್ದೆಗೆ ಕೈ ಚಾಚುತ್ತಾರೆ. ಇನ್ನೇನು ಮಂಗಳೂರು ವಿ.ವಿ.ಯಲ್ಲಿ ನೆಲೆ ಸಿಕ್ಕಿತು ಎನ್ನುವಾಗ ಹೊಸಪೇಟೆಯ ಬಂಡೆಗಳ ನಡುವೆ ಅರಳಿದ ಹಂಪಿ ಕನ್ನಡ ವಿ.ವಿ.ಯಲ್ಲಿ ಕನ್ನಡದ ಆತ್ಮ ಶೋಧನೆಗೆ ಇಳಿಯುತ್ತಾರೆ.

ಅಲ್ಲಿಯೂ ಮೂರೇ ವರ್ಷದಲ್ಲಿ ಅದು ‘ಸಿಂಗಾರವ್ವನ ಅರಮನೆ’ಯಲ್ಲ ನಂಜುಕಾರುವವರ ಸೆರೆಮನೆ ಎನ್ನಿಸತೊಡಗುತ್ತದೆ. ಹಂಪಿ ವಿ.ವಿ.ಯಲ್ಲಿ ದೊಡ್ಡವರೆನಿಸಿಕೊಂಡವರ ಸಣ್ಣತನಗಳು, ಮಾಡದ ಅಪರಾಧಗಳನ್ನು ತಲೆಗೆ ಕಟ್ಟುವ ಯೋಜನೆಯನ್ನು ರೂಪಿಸಿ ವ್ಯವಸ್ಥೆಯನ್ನೇ ಬಲಿ ಪಡೆಯಲು ಹವಣಿಸುವ, ದೊಡ್ಡ ಬರಹಗಾರರಲ್ಲಿಯೂ ಮಹಾ ಕ್ರೌರ್ಯ, ನೀಚತನ ಎದ್ದು ಕುಣಿಯಲು ಆರಂಭಿಸುತ್ತವೆ. ಅವರೇ ಹೇಳುವಂತೆ ‘‘ಕಲ್ಲು, ಬೆಟ್ಟ, ಕೆರೆಲ್, ಎದೆಯ ನಡುವೆ ಗೋರಿ ಕಟ್ಟುತ್ತಿರುವ ಅನುಭವವಾಗುತ್ತದೆ.’’ ಕೆಟ್ಟತನದಿಂದ ದೂರ ಸರಿಯಲು ರಜೆ ಕೇಳಿದರೆ ಅದನ್ನು ಕೊಡದೆ ತಿರಸ್ಕರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಬಿಳಿಮಲೆಯವರು ಯಾವ ಮುಲಾಜೂ ಇಲ್ಲದೆ ಕನ್ನಡ ವಿ.ವಿ.ಯ ಹುದ್ದೆ ತ್ಯಜಿಸಿ ದಿಲ್ಲಿಗೆ ಹೊರಡುತ್ತಾರೆ. ಇದನ್ನೆಲ್ಲ ನೆನೆಯುವಾಗ ನನಗೆ ಅನ್ನಿಸುವುದು ಈ ಪುಟ್ಟ ದೇಹದೊಳಗೆ ಅದೆಂತಹ ಅದಮ್ಯ ಚೈತನ್ಯ ಅಡಗಿರಬೇಕು.? ಇಲ್ಲವಾದರೆ ನಾಜೂಕಾಗಿ, ನೆಮ್ಮದಿಯಿಂದ ಹೋಗುತ್ತಿರುವ ಸಂಸಾರವನ್ನು ಆಗಾಗ್ಗೆ ನರಕಕ್ಕಿಳಿಸಿ ಪರೀಕ್ಷೆ ಮಾಡವುದು ಸಾಮಾನ್ಯರಿಂದ ಸಾಧ್ಯವೇ.? ಅಂತೂ ‘ಕೂತ್ಕುಂಜ’ದ ಈ ರೋಯಿತ ದಿಲ್ಲಿ ತಲುಪಿ ಕರ್ನಾಟಕ ಸಂಘದ ಕಚೇರಿಯಲ್ಲಿ ಮ್ಯಾನೇಜರ್ ರೂಮಲ್ಲೇ ವಾಸ್ತವ್ಯ ಪಡೆದು ಅಲ್ಲಿಂದಲೇ ಸಂಘದ ಚನಾವಣೆಯಲ್ಲಿ ಆಯ್ಕೆಯಾಗಿ ಸಂಘವನ್ನು ಮತ್ತು ಸಂಘದ ಕಟ್ಟಡವನ್ನು ಬೃಹದಾಕಾರಕ್ಕೆ ಬೆಳೆಸುವ ಯೋಜನೆಯ ಹಿಂದಿನ ಪರಿಶ್ರಮ ಮತ್ತು ಒಳಗೊಳಗೆ ಎದುರಾಗುವ ಒಳಸಂಚನ್ನು ಎದುರಿಸುತ್ತಾರೆ ಎಂದರೆ ಇವರಿಗೆ ಡಬ್ಬಲ್ ಗುಂಡಿಗೆಯೇ ಇದ್ದಿರಬೇಕು. ಅಐಐಖ ಸಂಸ್ಥೆಯಲ್ಲಿ ಕೆಲಸ, ಜೊತೆಗೆ ‘ಕರ್ನಾಟಕ ಸಂಘ’ದ ಕೆಲಸಗಳು ಬೆಂಗಳೂರು-ದಿಲ್ಲಿ ಎಂಬಂತೆ ಅವರ ಓಡಾಟ ದಣಿವಾರಿಸಿಕೊಳ್ಳಲು ಬಿಡದಂತೆ ದುಡಿಸಿಕೊಂಡವು. ಅದರ ಫಲವಾಗಿಯೇ ಇಂದು ದಿಲ್ಲಿಯಲ್ಲಿ ‘ಕರ್ನಾಟಕ ಭವನ’ ಭವ್ಯವಾಗಿ ನಿರ್ಮಾಣವಾದದ್ದು.

ಜೆಎನ್‌ಯು ಅರವತ್ತು ತುಂಬಿದರೂ, ಆರೋಗ್ಯ ಕೈ ಕೊಡುವಂತಿದ್ದರೂ ನಿವೃತ್ತಿಯ ವಯಸ್ಸಲ್ಲೂ ಪ್ರವೃತ್ತಿಯನ್ನು ಜೀವ ಬಿಡಲೊಲ್ಲದು ಎಂಬಂತೆ ಕನ್ನಡ ಕಟ್ಟುವ ಕೆಲಸಕ್ಕೆ ಯಾವ ನೆಪಗಳೂ ಮುಖ್ಯವಾಗುವುದೇ ಇಲ್ಲ ಇವರಿಗೆ. ಮತ್ತೆ ಜೆಎನ್‌ಯುನಲ್ಲಿ ಕನ್ನಡಕ್ಕೆ ಅಸ್ತಿತ್ವವೇ ಇಲ್ಲದ ಅಸ್ತಿಪಂಜರದಲ್ಲಿ ಕನ್ನಡದ ಅಸ್ಮಿತೆಯನ್ನು ಸ್ಥಾಪಿಸಲು, ಜೀವತುಂಬಲು ಮುಂದಾಗುತ್ತಾರೆ.

ಬಿಳಿಮಲೆ ಅವರೇ ಹೇಳುವಂತೆ ಜೆಎನ್‌ಯುಗೆ ಕಾಲಿಟ್ಟಾಗ ಅಲ್ಲಿಯ ಕ್ಯಾಂಪಸ್‌ನಲ್ಲಿ ಹಿಂದಿ, ಉರ್ದು, ಭಾಷೆಗಳನ್ನು ಕಲಿಸಲು ಹತ್ತಾರು ವಿ.ವಿ.ಗಳು ಕೈಜೋಡಿಸಿದ್ದವು. ತಮಿಳು ಕಲಿಸಲು 27 ವಿ.ವಿ.ಗಳು ಟೊಂಕ ಕಟ್ಟಿ ನಿಂತಿದ್ದವು. ಆದರೆ ‘ಕನ್ನಡ ಪೀಠ’ದ ಹೆಸರಲ್ಲಿ ಹಣ ಮತ್ತು ಹುದ್ದೆ ಜಾರಿಯಾಗಿದ್ದು ಬಿಟ್ಟರೆ ಕನ್ನಡ ಮಾತ್ರ ಕಾಣೆಯಾಗಿತ್ತು. ಕನ್ನಡ ಪೀಠಕ್ಕೆ ಒಂದು ಕೊಠಡಿ ಎನ್ನುವುದಿರಲಿ, ಕನ್ನಡ ಅಧ್ಯಾಪಕ ಕೂರಲು ಕುರ್ಚಿ, ಬೆಂಚುಗಳೂ ಇರಲಿಲ್ಲ. ಕಡೆಗೂ ಇವರಿಗೆ ಸಿಕ್ಕಿದ್ದು 5 ವರ್ಷ ಬೀಗವೇ ತೆಗೆಯದ ಚೈನೀಸ್ ಭಾಷೆ ಕಲಿಸುವ ಕೊಠಡಿ ಎನ್ನುವುದನ್ನು ವಿಷಾದದಿಂದಲೇ ತಿಳಿಸುತ್ತಾರೆ.

ಆನಂತರದ ಕೆಲಸವೆಲ್ಲ ಕೈಯಿಂದಲೇ ಕಳೆದುಕೊಳ್ಳುವ ಖರ್ಚುಗಳೇ ಆಗಿತ್ತು. ಆದರೂ ಅದನ್ನು ‘‘ಕನ್ನಡ ಕಟ್ಟುವ ಕೆಲಸಕ್ಕೆ ಅಷ್ಟೂ ಮಾಡದಿದ್ದರೆ ಹೇಗೆ?’’ ಎಂದು ಹೆಮ್ಮೆಯಿಂದಲೇ ಅಭಿಮಾನದಿಂದ ನುಡಿಯುತ್ತಾರೆ. ಆನಂತರದ ಅವರ ಅವಿರತ ಶ್ರಮದಿಂದ ಅದಕ್ಕೊಂದು ರೂಪ ದೊರೆಯಿತು. ಎಂ.ಫಿಲ್., ಪಿಎಚ್.ಡಿ. ಅಧ್ಯಯನಕ್ಕೆ ಪಾಠಕ್ರಮಗಳನ್ನು ಸಿದ್ಧಮಾಡಿ ಶುರುಮಾಡುವ ಹೊತ್ತಿಗೆ ಉಂಟಾದ ಗಲಾಟೆಯ ಬಿಸಿ ಬಿಳಿಮಲೆ ಅವರಿಗೂ ತಟ್ಟಿತು. ಅದರ ನಡುವೆಯೂ ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ಜನ ಕನ್ನಡ ಕಲಿತರು, ಕೆಲವರು ಅಧ್ಯಯನಕ್ಕೆ ಕರ್ನಾಟಕವನ್ನೇ ವಿಷಯವಾಗಿ ಆಯ್ಕೆ ಮಾಡಿಕೊಂಡದ್ದನ್ನು ಸಾಧಿಸಿ ತೋರಿಸಿದ್ದಾರೆ. ಕನ್ನಡದ ಹೆಸರಾಂತ ಅಭಿಜಾತ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಲ್ಲದೆ ವಿಶ್ವದ ನಾನಾ ದೇಶಗಳಿಗೆ, ವಿದ್ವಾಂಸರಿಗೆ ಕೃತಿಗಳು ತಲುಪುವಂತೆ ಮಾಡಿದ್ದಾರೆ, ತುಳು ಕತೆಗಳನ್ನು ಅನುವಾದ ಮಾಡಿಸಿ ಹಂಚಿದ್ದಾರೆ. ಕರ್ನಾಟಕದ ಸಂಸ್ಕೃತಿಯನ್ನು ದಿಲ್ಲಿಯಲ್ಲಿ ಪಸರಿಸಿದ್ದಾರೆ. ಇಷ್ಟು ಸಾಕಲ್ಲವೇ ಕಣ್ಣಿರುವ ಯಾವ ಮನುಷ್ಯರಿಗೂ ವ್ಯಕ್ತಿಯ ಶ್ರಮ ಕಾಣಲು. ಆದರೇನು ಮಾಡುವುದು ಜೆಎನ್‌ಯು ದೇಶದ್ರೋಹಿ ವಿ.ವಿ. ಎಂಬಂತೆ, ಬಿಳಿಮಲೆ ಭ್ರಷ್ಟಾಚಾರಿ ಎಂಬಂತೆ ಕೆಲವು ಕನ್ನಡದ್ದೇ ಬಾಲಬುಡುಕರು, ಅಂಧ ಭಕ್ತರು ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸಿ ಮಸಿ ಬಳಿಯಲು ನೋಡಿದರು. ಆದರೆ ಅಷ್ಟೇ ಖಡಕ್ ಆಗಿ ಒಂದೊಂದು ಪೈಸೆಯನ್ನು ಲೆಕ್ಕ ಕೊಡುವಷ್ಟು ಶುದ್ಧಹಸ್ತರಾಗಿದ್ದರು ಎನ್ನುವುದು ಬೇರೆಯದೇ ಮಾತು.

ಪುಸ್ತಕದ ಕೊನೆಯಲ್ಲಿ ಅವರ ಪ್ರವಾಸ ಮಾಡಿದ, ದೇಶ ತಿರುಗಿ ಸ್ನೇಹ ಸಂಪಾದಿಸಿದ, ಗೆಳೆಯರ ಒಡನಾಟದ ಚರಿತ್ರೆಗಳಿವೆ. ಹಾಗಾಗಿ ಇಡೀ ಕೃತಿ ಆರಂಭದಲ್ಲಿ ಪಡೆಯುವ ವೇಗವನ್ನು ಕೊನೆಕೊನೆಗೆ ಉಳಿಸಿಕೊಳ್ಳುವುದಿಲ್ಲವಾದರೂ ಆತ್ಮಕಥನ ಓದುಗರಿಗೆ ಇದೊಂದು ಉತ್ತಮ ಕೃತಿ ಎನಿಸುತ್ತದೆ..

ಕೊನೆಯ ಮಾತು
ಬಹುತೇಕ ಆತ್ಮಕಥನಗಳು ಓದುವ ಕುತೂಹಲ ಹಿಡಿದಿಟ್ಟುಕೊಂಡಿರುತ್ತವೆ. ಈ ಆತ್ಮಕಥನ ಓದುಗನಲ್ಲಿ ಕನ್ನಡ ಪ್ರೀತಿ ಹುಟ್ಟುಹಾಕುವುದು ಮಾತ್ರವಲ್ಲ, ಪ್ರತಿ ಓದುಗನಿಗೂ ಕನ್ನಡದ ಬಗ್ಗೆ ಹೆಮ್ಮೆ ಮೂಡಿಸುತ್ತದೆ. ಜತೆಗೆ ಕನ್ನಡಕ್ಕಾಗಿ ತಾನು ಏನಾದರೂ ಸೇವೆ ಸಲ್ಲಿಸಬೇಕೆಂಬ ಹಂಬಲವನ್ನುಂಟುಮಾಡುತ್ತದೆ. ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಬೆಳೆಸಲು ಹೊರಡುವ ಹಾದಿಯಲ್ಲಿ ಏನೆಲ್ಲ ಅಡೆತಡೆಗಳು ಎದುರಾಗುತ್ತವೆ. ಕೆಲವು ಅಧ್ಯಾಪಕರಾದವರ ಅಪರಾವತಾರಗಳು ಎಂತಹವು ಎಂಬುದಕ್ಕೆ ಇದೊಂದು ಸಾಕ್ಷಿಪ್ರಮಾಣಿತ ಕೃತಿ ಎನಿಸುತ್ತದೆ.

Writer - ಡಾ.ಚಿನ್ನಸ್ವಾಮಿ ಎನ್.

contributor

Editor - ಡಾ.ಚಿನ್ನಸ್ವಾಮಿ ಎನ್.

contributor

Similar News