ಮಾಸ್ಕ್ ಕಡ್ಡಾಯ,ನಿರೋಧಕತೆ ಮತ್ತು ವಾತಾವರಣ ಭಾರತದಲ್ಲಿ ಕೋವಿಡ್ ನಿಯಂತ್ರಣಕ್ಕೆ ನೆರವಾದವು:ವರದಿ

Update: 2021-01-23 18:11 GMT

ಹೊಸದಿಲ್ಲಿ,ಜ.23: ನಾಲ್ಕು ತಿಂಗಳುಗಳ ಹಿಂದಷ್ಟೇ ಪ್ರತಿದಿನ 90,000ಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ದಾಖಲಾಗುವುದರೊಂದಿಗೆ ಕೋವಿಡ್-19 ‘ಹಾಟ್ ಸ್ಪಾಟ್’ ಆಗಿದ್ದ ಭಾರತದಲ್ಲೀಗ ಹೊಸ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಇಳಿಮುಖಗೊಳ್ಳುತ್ತಿರುವುದು ಕೊರೋನವೈರಸ್ ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ದೇಶದ ಯಶಸ್ಸನ್ನು ತೋರಿಸುತ್ತಿದೆ.

 ಸರಕಾರವು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು,ದೇಶದ ಜನಸಂಖ್ಯಾ ಸ್ವರೂಪ,ಮಲೇರಿಯಾ,ಟೈಫಾಯ್ಡ್ ಮತ್ತು ಡೆಂಗ್‌ನಂತಹ ಕಾಯಿಲೆಗಳ ವಿರುದ್ಧ ಹೋರಾಡಿರುವ ಜನರಲ್ಲಿ ಅಂತರ್ಗತವಾಗಿರುವ ಪ್ರಬಲ ರೋಗ ನಿರೋಧಕ ಶಕ್ತಿ ಮತ್ತು ತುಲನಾತ್ಮಕವಾಗಿ ಉಷ್ಣ ವಾತಾವರಣ ಇವು ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣಗಳಾಗಿವೆ ಎಂದು ತಜ್ಞರನ್ನು ಉಲ್ಲೇಖಿಸಿ ಎನ್‌ಪಿಆರ್ ಡಾಟ್ ಆರ್ಗ್ ವರದಿ ಮಾಡಿದೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸುವಲ್ಲಿ ಮಾಸ್ಕ್ ಧರಿಸುವಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು ಒಂದು ಕಾರಣವಾಗಿರಬಹುದು ಎಂದು ಆರೋಗ್ಯನೀತಿ ತಜ್ಞೆ ಜೆನಿವಿ ಫರ್ನಾಂಡಿಸ್ ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ.

ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ವಿಶ್ವದಲ್ಲಿಯ ಎಲ್ಲ ದೇಶಗಳಿಗಿಂತ ಹೆಚ್ಚಿನ ಹೊಸ ಕೋವಿಡ್ ಪ್ರಕರಣಗಳು ಭಾರತದಲ್ಲಿ ವರದಿಯಾಗಿದ್ದವು. ಸೆಪ್ಟೆಂಬರ್‌ನಲ್ಲಿ ಸಾವುಗಳ ಸಂಖ್ಯೆಯೂ ಭಾರತದಲ್ಲಿಯೇ ಗರಿಷ್ಠವಾಗಿತ್ತು.

 ಭಾರತದಲ್ಲಿಯ ಆರ್ದ್ರತೆಯಿಂದ ಕೂಡಿದ ಉಷ್ಣ ವಾತಾವರಣವೂ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನೆರವಾಗಿರಬಹುದು. ದೇಶದಲ್ಲಿ ಅತಿಯಾದ ಚಳಿಯ ವಾತಾವರಣವಿಲ್ಲ. ಹಲವಾರು ವೈರಸ್‌ಗಳು ಅತ್ಯಂತ ಶೀತ ಪ್ರದೇಶಗಳಲ್ಲಿ ವೃದ್ಧಿಗೊಳ್ಳುತ್ತವೆ ಎಂದು ಹೇಳಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಡಾ.ದಕ್ಷಾ ಶಾ ಅವರು,ಭಾರತೀಯರಲ್ಲಿ ಅಂತರ್ಗತವಾಗಿರುವ ಪ್ರಬಲ ರೋಗ ನಿರೋಧಕ ಶಕ್ತಿಯೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮೇಲುಗೈ ಸಾಧಿಸಲು ನೆರವಾಗಿರಬಹುದು. ಅಲ್ಲದೆ ದೇಶದ ಶೇ.50ಕ್ಕೂ ಅಧಿಕ ಜನಸಂಖ್ಯೆ ಯುವಜನತೆಯೇ ಆಗಿದ್ದು,ಕೋವಿಡ್‌ನಿಂದಾಗಿ ಸಾಯುವ ಸಾಧ್ಯತೆ ಕಡಿಮೆ ಮತ್ತು ಲಕ್ಷಣರಹಿತ ಸಾಂಕ್ರಾಮಿಕಕ್ಕೆ ಗುರಿಯಾಗುವ ಸಾಧ್ಯತೆಯು ಅವರಲ್ಲಿ ಹೆಚ್ಚು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News