ಮತ್ತೆ ಸುಪ್ರೀಂ ಕದತಟ್ಟಿದ ಮಹಿಳಾ ಸೇನಾಧಿಕಾರಿಗಳು

Update: 2021-01-24 04:44 GMT

ಹೊಸದಿಲ್ಲಿ, ಜ.24: ಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಖಾಯಂ ನಿಯೋಜನೆ, ಭಡ್ತಿ ಮತ್ತು ಇತರ ಲಾಭಗಳ ಸಂಬಂಧ ಕಳೆದ ವರ್ಷದ ಫೆಬ್ರವರಿಯಲ್ಲಿ ನೀಡಿದ್ದ ನಿರ್ದೇಶನಕ್ಕೆ ಕೇಂದ್ರ ಸರಕಾರ ಬದ್ಧವಾಗುವಂತೆ ಸೂಚಿಸಬೇಕು ಎಂದು ಕೋರಿ ಹನ್ನೊಂದು ಮಹಿಳಾ ಸೇನಾಧಿಕಾರಿಗಳು ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದಾರೆ.

ಎಲ್ಲರನ್ನೂ ಒಳಗೊಂಡ, ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ತಾರ್ಕಿಕ ವಿಧಾನದಲ್ಲಿ ಈ ಸೌಲಭ್ಯಗಳು ಮಹಿಳಾ ಅಧಿಕಾರಿಗಳಿಗೂ ಲಭ್ಯವಾಗಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ಆಶು ಯಾದವ್ ಮತ್ತು ಇತರ 10 ಮಹಿಳಾ ಅಧಿಕಾರಿಗಳು ಕೋರಿದ್ದಾರೆ. ವಾಸ್ತವವಾಗಿ ಸುಪ್ರೀಂಕೋರ್ಟ್ ನಿರ್ದೇಶನಕ್ಕೆ ಸರಕಾರ ಬದ್ಧವಾಗಿಲ್ಲ ಎಂದು ಅವರು ಆಪಾದಿಸಿದ್ದಾರೆ.

ಮಹಿಳಾ ಅಧಿಕಾರಿಗಳ ಖಾಯಂ ನಿಯೋಜನೆಯನ್ನು ಮಂಜೂರು ಮಾಡುವ ಪ್ರಕ್ರಿಯೆ ಯರ್ರಾಬಿರ್ರಿ, ಪಕ್ಷಪಾತ ಮತ್ತು ಅತಾರ್ಕಿಕ ಅಂಶಗಳಿಂದ ಚಂಚಲವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ನ್ಯಾಯಮೂರ್ತಿ ವೈ.ಡಿ.ಚಂದ್ರಚೂಡ್ ನೇತೃತ್ವದ ಪೀಠ ಈ ಅರ್ಜಿಯನ್ನು ಜನವರಿ 27ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

"ಪ್ರತಿವಾದಿ ಸಂಸ್ಥೆಯು ಮಹಿಳಾ ಅಧಿಕಾರಿಗಳನ್ನು ಅಸಮಾನವಾಗಿ ಪರಿಗಣಿಸುವ ತನ್ನ ನಿಲುವಿಗೆ ಒತ್ತು ನೀಡುವ ಯಾವುದೇ ಸಾಧ್ಯತೆಯನ್ನು ತಪ್ಪಿಸಿಕೊಳ್ಳುತ್ತಿಲ್ಲ. ಈ ಮೂಲಕ ಪರೋಕ್ಷವಾಗಿ ತಾಂತ್ರಿಕ ಮತ್ತು ಪ್ರಕ್ರಿಯಾತ್ಮಕ ವಿಧಿವಿಧಾನಗಳ ಮೂಲಕ ಮಹಿಳಾ ಅಧಿಕಾರಿಗಳನ್ನು ಬಲೆಗೆ ಬೀಳಿಸುತ್ತಿದೆ. ಈ ಮೂಲಕ ತಮ್ಮ ಹಕ್ಕುಗಳನ್ನು ನಿರಾಕರಿಸುತ್ತಿದೆ" ಎಂದು ದೂರಿದೆ.

ಕೇಂದ್ರ ಸರಕಾರದ ಕ್ರಮವು ಮಹಿಳಾ ಅಧಿಕಾರಿಗಳ ಜತೆ ಮಾನಸಿಕ ಸಮರ ಸಾರಿದ್ದು, ಖಾಯಂ ನಿಯೋಜನೆ, ಭಡ್ತಿ ಮತ್ತು ಇತರ ಲಾಭಗಳನ್ನು ಮಂಜೂರು ಮಾಡುವ ಸಾಧ್ಯತೆಯನ್ನು ತಪ್ಪಿಸುವುದನ್ನು ಸೂಚಿಸುತ್ತದೆ. ಇದು ಸುಪ್ರೀಂಕೋರ್ಟ್ 2020ರ ಫೆಬ್ರವರಿ 17ರಂದು ನೀಡಿದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News