ಬೆಂಗಳೂರು: ಗಣರಾಜ್ಯೋತ್ಸವ ಸಂಭ್ರಮಕ್ಕೆ ಮಾಣೆಕ್ ಷಾ ಪರೇಡ್ ಮೈದಾನ ಸಂಪೂರ್ಣ ಸಜ್ಜು

Update: 2021-01-24 13:08 GMT

ಬೆಂಗಳೂರು, ಜ.24: 72ನೆ ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಜಧಾನಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ ಸಂಪೂರ್ಣ ಸಜ್ಜುಗೊಂಡಿದ್ದು, ಈ ಬಾರಿ ಕೋವಿಡ್ ಮಾರ್ಗಸೂಚಿ ಅನ್ವಯ ಸರಳವಾಗಿ ಆಚರಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದರು.

ರವಿವಾರ ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಕೋವಿಡ್ ಮಾರ್ಗಸೂಚಿ ಅನ್ವಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಅದೇ ರೀತಿ, ಕಾರ್ಯಕ್ರಮದಲ್ಲಿ ಕೇವಲ 500 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಇಡೀ ಕಾರ್ಯಕ್ರಮ 40 ನಿಮಿಷದಲ್ಲಿ ಮುಗಿಯಲಿದೆ ಎಂದು ಅವರು ತಿಳಿಸಿದರು.

ಕೋವಿಡ್-19 ಮಹಾಮಾರಿಯ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಶಾಲಾ ಮಕ್ಕಳಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು  ಇರುವುದಿಲ್ಲ. ಗಾಯಕ ಜೋಗಿಲಸಿದ್ದರಾಜು ಮತ್ತು ತಂಡದವರು ನಾಡಗೀತೆ ಮತ್ತು ರೈತ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.

ಜ.26ರ ಗಣರಾಜ್ಯೋತ್ಸವ ದಿನದಂದು ಬೆಳಗ್ಗೆ 8:50ಕ್ಕೆ ರಾಜ್ಯಪಾಲರು ಆಗಮಿಸಲಿದ್ದು, ಭಾರತೀಯ ರಕ್ಷಣಾ ಸೇವೆಯ ಗೌರವ ವಂದನೆಯನ್ನು ಸ್ವೀಕರಿಸಿ, ನಂತರ 9 ಗಂಟೆಗೆ ಧ್ವಜಾರೋಹಣ ನೆರವೇರಿಸುವರು ಎಂದು ವಿವರಿಸಿದರು.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಕೋವಿಡ್ ಮಾರ್ಗಸೂಚಿ ಪಾಲನೆಯ ಅನ್ವಯ ಗಣ್ಯರು ಮತ್ತು ಪಾಸುಗಳನ್ನು ಹೊಂದಿದ ಇತರ ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಭದ್ರತೆಗಾಗಿ 7 ಡಿಸಿಪಿ, 16 ಎಸಿಪಿ ಸೇರಿದಂತೆ 1,100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ನಾಳೆಯಿಂದ ಗರುಡಾ ಪೋರ್ಸ್ ನಿಯೋಜನೆಗೊಳಿಸಲಾಗುತ್ತಿದೆ. ಸಿಗರೇಟ್, ಕರಪತ್ರ, ಬಣ್ಣದ ದ್ರಾವಣ, ಕ್ಯಾಮರಾ, ನೀರಿನ ಬಾಟಲ್, ಶಸ್ತ್ರಾಸ್ತ್ರಗಳನ್ನು  ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.

ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಆಂಬ್ಯುಲೆನ್ಸ್ ಗಳನ್ನು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಭಾಯಿಸಲು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಗಣರಾಜ್ಯೋತ್ಸವ ದಿನದಂದು ಬೆಳಗ್ಗೆ 8:30 ಗಂಟೆಯಿಂದ ಬೆಳಗ್ಗೆ 10:30 ರವರೆಗೆ ಕಬ್ಬನ್ ರಸ್ತೆಯಲ್ಲಿರುವ ಬಿಆರ್‌ವಿ ಜಂಕ್ಷನ್ ನಿಂದ ಕಾಮರಾಜ ಜಂಕ್ಷನ್ ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಲಾಗುವುದು ಹಾಗೂ ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ವರೆಗೆ, ಕಬ್ಬನ್ ರಸ್ತೆಯ ಸಿ.ಟಿ.ಓ. ವೃತ್ತದಿಂದ ಕೆ.ಆರ್. ರಸ್ತೆ ಜಂಕ್ಷನ್ ವರೆಗೆ ಮತ್ತು ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಅಪರ ಜಿಲ್ಲಾಧಿಕಾರಿ ಅನಿತಾ ಲಕ್ಷ್ಮೀ,  ಹೆಚ್ಚುವರಿ ಪೊಲೀಸ್ ಆಯುಕ್ತ  ಸೋಮೇಂದ್ರ, ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇ ಗೌಡ, ನಗರದ ಸಶಸ್ತ್ರ ಮೀಸಲುಪಡೆಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಬೆಂಗಳೂರು ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News