ಭವಿಷ್ಯದ ಪೀಳಿಗೆಗಾಗಿ ಜನಪದ ಸಂಶೋಧನೆ ಅಗತ್ಯ: ಅಗ್ರಹಾರ ಕೃಷ್ಣಮೂರ್ತಿ

Update: 2021-01-24 17:13 GMT

ಬೆಂಗಳೂರು, ಜ.24: ಭವಿಷ್ಯದ ಪೀಳಿಗೆ ದೇಶದ ಚರಿತ್ರೆ, ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಪರಂಪರೆಯನ್ನು ಅರ್ಥ ಮಾಡಿಕೊಳ್ಳಬೇಕಾರೆ ಜಾನಪದ ಕ್ಷೇತ್ರದಲ್ಲಿ ಸಂಶೋಧನೆ ನಡೆದು, ಅಲ್ಲಿ ಸಿಕ್ಕ ಅಮೂಲ್ಯವಾದ ಮಾಹಿತಿಗಳನ್ನು ಸಂಗ್ರಹಿಸುವುದು ಅಗತ್ಯವಿದೆ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ರವೀಂದ್ರಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಲೇಖಕ ಕುರುವ ಬಸವರಾಜ್‍ರವರ ಜಾನಪದ ಸಂವೇದನೆ ಮತ್ತು ಕೋಳಿ ಅಂಕ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಅತ್ಯಂತ ಅಮೂಲ್ಯವಾದ ಕೊಡುಗೆಯೆಂದರೆ ಜಾನಪದದ ಸಂಗ್ರಹವೇ ಆಗಿದೆ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕೈದು ದಶಕಗಳ ಹಿಂದೆ ಜಾನಪದ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಹೆಚ್ಚಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಸಂಶೋಧಕರ ಸಂಖ್ಯೆ ಕಡಿಮೆ ಆಗುತ್ತಿದೆ. ಆಸಕ್ತಿ ಮತ್ತು ಅತೀವ ಶ್ರದ್ದೆಯಿದ್ದರೆ ಮಾತ್ರ ಜಾನಪದ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಲು ಸಾಧ್ಯ. ಹೀಗಾಗಿ ಪ್ರಾರಂಭದಲ್ಲಿ ಜಾನಪದದಲ್ಲಿ ಆಸಕ್ತಿಯಿದ್ದವರು, ಬಹುಬೇಗನೇ ಬೇರೆ ಕ್ಷೇತ್ರಗಳತ್ತ ಹೋಗಿಬಿಡುತ್ತಾರೆ. ಇದು ಜಾನಪದ ಕ್ಷೇತ್ರಕ್ಕೆ ಶಕ್ತಿಯೂ ಹೌದು, ಶಾಪವೂ ಹೌದು ಎಂದು ಅವರು ಹೇಳಿದ್ದಾರೆ.

ಲೇಖಕ ಕುರುವ ಬಸವರಾಜ್‍ರವರು ಜಾನಪದ ಸಂವೇದನೆ ಕೃತಿಯು ಹಲವು ದೃಷ್ಟಿಕೋನದಿಂದ ಮುಖ್ಯವಾದುದ್ದಾಗಿದೆ. ಮುಖ್ಯವಾಗಿ ಜಾನಪದ ಸಂಗೀತದ ಕುರಿತು ಮಾಹಿತಿ ನೀಡಿದ್ದಾರೆ. ಇದು ಅಪರೂಪದ ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವೇಳೆ ವಿಮರ್ಶಕ ಶಿವಾನಂದ ಸಾಸ್ವೆಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News