ಪಿಯು ಉತ್ತರಪತ್ರಿಕೆ ಮರುಎಣಿಕೆ ಲೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ

Update: 2021-01-25 06:40 GMT

ಬೆಂಗಳೂರು, ಜ.25: ಹೊಸನಗರ ತಾಲೂಕಿನ ಹನಿಯಾ ಗ್ರಾಮದ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬಳ ಉತ್ತರ ಪತ್ರಿಕೆಯ ಮರುಎಣಿಕೆಯಲ್ಲಿ ಕಡಿಮೆ ಅಂಕ ನೀಡಲಾದ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ತಕ್ಷಣವೇ ವರದಿ ಸಲ್ಲಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಹನಿಯ ಗ್ರಾಮದ  ಎಚ್.ಆರ್. ಧರಣಿ ಪಿಯು ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ ಬಂದಾಗ ತನಗೆ 100 ಅಂಕ ಬರಬೇಕಿತ್ತೆಂಬ ಉತ್ತರಪತ್ರಿಕೆ  ಛಾಯಾ ಪತ್ರಿಕೆ ತರಿಸಿ ನೋಡಿದಾಗ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿ ತನಗೆ ಒಂದು ಅಂಕ ಕಡಿಮೆ ಬಂದಿದ್ದು, ಈಹಿನ್ನೆಲೆಯಲ್ಲಿ ಮರುಎಣಿಕೆಗೆ ಅರ್ಜಿ ಸಲ್ಲಿಸಿದಾಗ 88 ಅಂಕಗಳು ಬಂದಿದ್ದವು. ಈ ಕುರಿತು ವಿದ್ಯಾರ್ಥಿನಿ ರಾಜ್ಯ ಹೈಕೋರ್ಟ್ ಮೊರೆ ಹೋದಾಗ ಹೈಕೋರ್ಟ್ ಮರುಎಣಿಕೆಗೆ ಆದೇಶಿಸಿದ್ದು, ಆ ನಂತರ 100 ಅಂಕಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮರು ಎಣಿಕೆಯಲ್ಲಿ ಲೋಪ ಎಸಗಿದ ಅಧಿಕಾರಿ, ಉಪನ್ಯಾಸಕರು ಮತ್ತು ಸಂಬಂಧಿಸಿದ ಸಿಬ್ಬಂದಿಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದವರ ವಿವರಗಳೊಂದಿಗೆ ಎರಡು ದಿನಗಳೊಳಗೆ ವರದಿ ಸಲ್ಲಿಸಬೇಕೆಂದು ಸಚಿವರು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ವಿದ್ಯಾರ್ಥಿನಿಗೆ ಕೊನೆಗಾದರೂ ನ್ಯಾಯ ದೊರೆತದ್ದು ಸಂತಸ ಸಂಗತಿಯಾಗಿದ್ದರೂ ಸಹ ಇಲಾಖೆ ಅಧಿಕಾರಿಗಳ ಕರ್ತವ್ಯ ಚ್ಯುತಿಯಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುವಂತಾಗಿದ್ದು, ವ್ಯವಸ್ಥೆ ಕುರಿತು ಭರವಸೆ ಕಳೆದುಕೊಳ್ಳುವಂತಾಗಿದೆ.  ಪ್ರತಿಭಾವಂತ ವಿದ್ಯಾರ್ಥಿನಿಯ ನೆರವಿಗೆ ಬರಬೇಕಾದ ಇಲಾಖೆ ಆಕೆಯ ಆತ್ಮ ವಿಶ್ವಾಸ ಕಸಿಯುವ ಕೆಲಸ ಮಾಡಿದ್ದು, ಇದಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದ್ದು, ತಕ್ಷಣವೇ ಈ ಕುರಿತು ವರದಿ ಸಲ್ಲಿಸಬೇಕೆಂದು ಸಚಿವರು ಟಿಪ್ಪಣಿಯಲ್ಲಿ ಪಿಯು ನಿರ್ದೇಶಕರಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಕಳೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೊಸನಗರ ತಾಲೂಕಿನ ಹನಿಯ ಗ್ರಾಮದ  ಎಚ್.ಆರ್. ಧರಣಿ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ  ಪಡೆದಿದ್ದಳು. ತನಗೆ 100 ಅಂಕಗಳು ಬರಬೇಕಿತ್ತೆಂಬ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಯ ಛಾಯಾಪ್ರತಿ ತರಿಸಿ ನೋಡಿದಾಗ ಅಂಕಗಳ ಎಣಿಕೆಯಲ್ಲಿ  ವ್ಯತ್ಯಾಸವಾಗಿದ್ದು ಕಂಡು ಬಂದ ನಂತರ ಮರು ಎಣಿಕೆಗೆ ಅರ್ಜಿ ಹಾಕಿದ್ದರು. ಆದರೆ ಮರುಎಣಿಕೆಯಲ್ಲಿ ವಿದ್ಯಾರ್ಥಿನಿಗೆ 88 ಅಂಕಗಳನ್ನು ನೀಡಲಾಗಿತ್ತು. ಈ ಕುರಿತು ವಿದ್ಯಾರ್ಥಿನಿ ರಾಜ್ಯ ಹೈಕೋರ್ಟ್ ಮೊರೆ ಹೋದಾಗ ಮರುಎಣಿಕೆಗೆ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ 100 ಅಂಕಗಳು ಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News