×
Ad

ಸಿಎಂ ಬಿಎಸ್‍ವೈ- ಸಚಿವ ನಿರಾಣಿಯಿಂದ ನಿರಂತರ ಕಿರುಕುಳ: ಉದ್ಯಮಿ ಆಲಮ್ ಪಾಷಾ ಆರೋಪ

Update: 2021-01-25 19:13 IST

ಬೆಂಗಳೂರು, ಜ.25: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಕಳೆದ 10 ವರ್ಷಗಳಿಂದಲೂ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ನನ್ನ ಪೊಲೀಸರ ಮೂಲಕ ನನ್ನ ದೂರವಾಣಿಯನ್ನು ಜಪ್ತಿ ಮಾಡಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಆಲಮ್ ಪಾಷಾ ದೂರಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿರಾಣಿ ಗ್ರೂಪ್‍ನಿಂದ ನನ್ನ ಕಂಪೆನಿಯ ಯೋಜನೆಗಳು ಸ್ಥಗಿತಗೊಂಡು ಅಲ್ಲಿರುವ ಸಿಬ್ಬಂದಿಗಳು, ಕಾರ್ಮಿಕರು ನಿರುದ್ಯೋಗಿಗಳಾಗುವಂತಾಗಿದೆ. ಈವರೆಗೆ ನಾನು ನಿರಾಣಿಯನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ, ಆದರೂ ಅವರಿಗೆ ಯಾವುದೆ ಬಗೆಯ ಕಮಿಷನ್ ನೀಡದ ಕಾರಣಕ್ಕೆ ನನ್ನನ್ನೆ ವಂಚಕ ಎಂದು ಆರೋಪಿಸಿದ್ದಾರೆ ಎಂದರು.

ಯಡಿಯೂರಪ್ಪ ಹಾಗೂ ನಿರಾಣಿಗೆ ಹಣ ಪಾವತಿಸದ ಕಾರಣ ನಾನು ವಂಚಕನಾದೆನೆ? ಸುಳ್ಳು ಪೊಲೀಸ್ ಕೇಸ್‍ಗಳ ಮೂಲಕ ನಿರಾಣಿ ನನಗೆ ಬೆದರಿಕೆಯೊಡ್ಡುತ್ತಿದ್ದಾರೆ. ಇಂತಹವರ ಕೈಯಲ್ಲಿ ನಾನು ಜೈಲು ಸೇರಬೇಕೆ? ಹತ್ಯೆಯಾಗಬೇಕೆ? ಇವರು ಯಾವುದೇ ಕ್ಷಣದಲ್ಲಿ ನನ್ನನ್ನು ಬಂಧಿಸಬಹುದು, ಜೈಲಿಗೆ ಅಟ್ಟಬಹುದು ಎಂದು ಆಲಮ್ ಪಾಷ ಆತಂಕ ವ್ಯಕ್ತಪಡಿಸಿದರು.

ಈ ಇಬ್ಬರೂ ಪ್ರಭಾವಿ ನಾಯಕರು ನೀಡುತ್ತಿರುವ ಕಿರುಕುಳದಿಂದಾಗಿ, ನನ್ನ ಉದ್ದೇಶಿತ ಪ್ರಾಜೆಕ್ಟ್ ನಲ್ಲಿ ಯಾವುದೆ ಬೆಳವಣಿಗೆ ಆಗದೆ, ಕಾಫಿ ಡೇ ಗ್ರೂಪ್‍ನ ಸಿದ್ಧಾರ್ಥ ಅವರಂತೆ ನಾನೂ ಆತ್ಮಹತ್ಯೆಯ ಯೋಚನೆ ಮಾಡುವಂತಾಗಿದೆ. ಯಾವುದೇ ಉದ್ಯಮಿಗೂ ಈ ರೀತಿಯ ಕಿರುಕುಳ ನಡೆಯಬಾರದು. ಸ್ವಾರ್ಥಿ ಮತ್ತು ಭ್ರಷ್ಟಾಚಾರಿ ನಿರಾಣಿಯಂಥವರು ರೈತರ ಭೂಮಿ ಮತ್ತು ರಾಜ್ಯದ ಗಣಿ ಸಂಪತ್ತನ್ನು ಲೂಟಿ ಹೊಡೆದು ಯಾವುದೇ ಕೃತ್ಯ ಎಸಗಬಹುದು ಎಂದು ಅವರು ಹೇಳಿದರು.

ಪ್ರಧಾನಿ ಮೋದಿಗೆ ದೂರು ಸಲ್ಲಿಕೆ

ಇದೇ ಜ.23ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ಆರೋಪಗಳ ಕುರಿತು ಸತ್ಯ ವರದಿಯನ್ನು ಕಳುಹಿಸಿಕೊಟ್ಟಿದ್ದು, ಇವರಿಬ್ಬರನ್ನೂ ವಜಾಗೊಳಿಸುವಂತೆ ಮನವಿ ಮಾಡಿದ್ದೇನೆ. ಇವರನ್ನು ಸಂಪುಟದಿಂದ ಕಿತ್ತೊಗೆಯದಿದ್ದರೆ ನಾನು ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿ ಪ್ರಾಣ ಬಿಡಲು ಸಿದ್ಧನಿದ್ದೇನೆ.

-ಆಲಮ್ ಪಾಷಾ, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News