ವರ್ಲ್ಡ್ ಟೂರ್ ಫೈನಲ್‌ಗೆ ಪಿ.ವಿ ಸಿಂಧು , ಶ್ರೀಕಾಂತ್ ಸಜ್ಜು

Update: 2021-01-26 18:50 GMT

 ಬ್ಯಾಂಕಾಕ್, ಜ.26: ವಿಶ್ವಚಾಂಪಿಯನ್ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್ ಅವರು ಬುಧವಾರ ಇಲ್ಲಿ ಪ್ರಾರಂಭವಾಗಲಿರುವ ಎಚ್‌ಎಸ್‌ಬಿಸಿ ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್‌ಗೆ ಸಜ್ಜಾ ಗಿದ್ದಾರೆ.

2018 ರಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂಧು ಅವರು ಗ್ರೂಪ್ ‘ಬಿ’ ಯಲ್ಲಿ ಅಗ್ರ ಶ್ರೇಯಾಂಕಿತ ಚೀನಾ ತೈಪೆಯ ತೈ ಝು ಯಿಂಗ್ ಮತ್ತು ರಚನಾಕ್ ಇಂಟನಾನ್ ಮತ್ತು ಪೋರ್ನ್‌ಪಾವಿ ಚೊಚುವಾಂಗ್ ಅವರೊಂದಿಗೆ ಸೇರಿದ್ದಾರೆ.

 ಕೊರೋನ ವೈರಸ್ ಪ್ರೇರಿತ ವಿರಾಮದ ನಂತರ ಸಿಂಧು ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಮರಳಿದ್ದರೂ, ಅವರಿಂದ ಪ್ರದರ್ಶನ ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲ. ಏಶ್ಯದ ಮೊದಲ ಟೂರ್ನಿ ಥಾಯ್ಲೆಂಡ್ ಓಪನ್‌ನ ಆರಂಭಿಕ ಪಂದ್ಯವನ್ನು ಕಳೆದುಕೊಂಡ ನಂತರ ಅವರಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ.

ಕಳೆದ ವಾರ ನಡೆದ ಎರಡನೇ ಈವೆಂಟ್‌ನಲ್ಲಿ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ರಚನಾಕ್ ವಿರುದ್ಧ ಸೋಲು ಅನುಭವಿಸಿದ್ದರು.

 ಸಿಂಧು ಲಂಡನ್‌ನಲ್ಲಿ ಹಲವು ತಿಂಗಳುಗಳ ಕಾಲ ಫಿಟ್‌ನೆಸ್ ತರಬೇತಿ ಪಡೆದು ಥಾಯ್ಲೆಂಡ್ ತಲುಪಿದ್ದರು. ಥಾಯ್ಲೆಂಡ್ ಓಪನ್ಸ್ ಎರಡರಲ್ಲೂ ಫೈನಲ್ ತಲುಪಿದ್ದ ಝು ಯಿಂಗ್ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದ್ದಾರೆ.

ಮತ್ತೊಂದೆಡೆ ಮಾಜಿ ವಿಶ್ವ ನಂ.1 ಶ್ರೀಕಾಂತ್ ಅವರು ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸೆನ್, ಚೀನಾ ತೈಪೆಯ ವಾಂಗ್ ಝು ವೀ ಮತ್ತು ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ಅವರೊಂದಿಗೆ ಗುಂಪು ‘ಬಿ’ ಯಲ್ಲಿ ಸ್ಥಾನ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

2014ರಲ್ಲಿ ಬಿಡಬ್ಲುಎಫ್ ಸೂಪರ್ ಸೀರೀಸ್ ಮಾಸ್ಟರ್ಸ್ ಫೈನಲ್ಸ್‌ನ ಸೆಮಿಫೈನಲ್ ತಲುಪಿದ ಶ್ರೀಕಾಂತ್ ಅವರಿಗೆ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಗಾಯದಿಂದಾಗಿ ಅವರು ಎರಡನೇ ಸುತ್ತಿಗೆ ಮುಂಚಿತವಾಗಿ ಮೊದಲ ಥಾಯ್ಲೆಂಡ್ ಓಪನ್‌ನಿಂದ ಹೊರ ನಡೆದಿದ್ದರು. ಆದರೆ ಕಳೆದ ವಾರ ಆರಂಭಿಕ ಸುತ್ತಿನ ನಂತರ ಅವರ ಸಹ ಆಟಗಾರ ಬಿ.ಸಾಯಿ ಪ್ರಣೀತ್ ಅವರಿಗೆ ಕೋವಿಡ್ -19 ಸೋಂಕು ತಗಲಿರುವುದು ದೃಢಪಟ್ಟ ನಂತರ ಕೂಟದಿಂದ ಹಿಂದೆ ಸರಿಯಬೇಕಾಯಿತು.

ಮೊದಲ ಈವೆಂಟ್‌ನ ನಂತರ ಬ್ಯಾಂಕಾಕ್ ಫೈನಲ್ ಶ್ರೇಯಾಂಕದಲ್ಲಿ 17ನೇ ಸ್ಥಾನದಲ್ಲಿದ್ದ ಸಿಂಧು ಕಳೆದ ವಾರ ಕ್ವಾರ್ಟರ್ ಫೈನಲ್ ಮುಗಿದ ನಂತರ 10ನೇ ಸ್ಥಾನಕ್ಕೇರಿದ್ದರು. ಆನಂತರ ಅಂತಿಮ ಹಂತಕ್ಕೆ ಅರ್ಹತೆ ಪಡೆದರು.

ಮೊದಲನೆಯದಾಗಿ, ಒಂದು ರಾಷ್ಟ್ರದ ಇಬ್ಬರು ಆಟಗಾರರು ಮಾತ್ರ ಸಿಂಗಲ್ಸ್ ಡ್ರಾದಲ್ಲಿ ಸ್ಥಾನ ಪಡೆಯಬಹುದು. ಉನ್ನತ ಶ್ರೇಯಾಂಕಿತ ರಚನಾಕ್ ಮತ್ತು ಪೋರ್ನ್‌ಪಾವಿ ಅವರ ಕಾರಣದಿಂದಾಗಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ಅವರಿಗೆ ಅವಕಾಶ ಸಿಗಲಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಡೆನ್ಮಾರ್ಕ್ ಓಪನ್ ಸೂಪರ್-750ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಹಿನ್ನೆಲೆಯಲ್ಲಿ ಅವಕಾಶ ಒಲಿದು ಬಂದಿದೆ. ಕೊನೆಯ ಎರಡು ಈವೆಂಟ್‌ಗಳಲ್ಲಿ ಮೊದಲ ಸುತ್ತನ್ನು ಆಡಿದ್ದರೂ ಶ್ರೀಕಾಂತ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ತಮ್ಮ ಕೊನೆಯ ಎರಡು ಮುಖಾಮುಖಿಯಲ್ಲಿ ಸಿಂಧು ಅವರು ಝು ಯಿಂಗ್ ವಿರುದ್ಧ ಸೋಲು ಅನುಭವಿಸಿದ್ದರು. ಸಿಂಧು ಅವರು ಯಿಂಗ್ ವಿರುದ್ಧ 5-15ರ ಕೆಟ್ಟ ದಾಖಲೆಯನ್ನು ಹೊಂದಿದ್ದಾರೆ. ಗುಂಪಿನಲ್ಲಿ ತನ್ನ ಮೂರನೇ ಎದುರಾಳಿಯಾದ ಪೋರ್ನ್‌ಪಾವಿ ವಿರುದ್ಧ ಸಿಂಧು 3-1 ಯಶಸ್ಸಿನ ದಾಖಲೆಯನ್ನು ಹೊಂದಿದ್ದಾರೆ. ಹೀಗಿದ್ದರೂ ಥಾಯ್ಲ್ಲೆಂಡ್ ಓಪನ್ 2019ರಲ್ಲಿ ನಡೆದ ಕೊನೆಯ ಹಣಾಹಣಿಯಲ್ಲಿ ಸಿಂಧು ಸೋಲು ಅನುಭವಿಸಿದ್ದರು.

 2017ರಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ತಮ್ಮ ಮೊದಲ ಸುತ್ತಿನ ಎದುರಾಳಿ ಆ್ಯಂಡರ್ಸನ್ ಅವರನ್ನು ಸೋಲಿಸಿದ್ದರು. ಆದರೆ ಆ್ಯಂಡರ್ಸನ್ ಈಗ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ 3 ನೇ ಸ್ಥಾನವನ್ನು ತಲುಪಿದ ನಂತರ ತುಂಬಾ ಸುಧಾರಣೆ ಕಂಡಿದ್ದಾರೆ. ಆದರೆ ವಾಂಗ್ ವಿರುದ್ಧ ಶ್ರೀಕಾಂತ್ 3-0 ಮತ್ತು ಆಂಗಸ್ ವಿರುದ್ಧ 2-2 ಯಶಸ್ಸು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News