ಬೆಂಗಳೂರು: ಮೀಸಾ ಅವಧಿ ಮುಗಿದರೂ ವಾಸ; ಸೌದಿ ಪ್ರಜೆ ಸೆರೆ

Update: 2021-01-27 16:46 GMT

ಬೆಂಗಳೂರು, ಜ.27: ವೀಸಾ ಅವಧಿ ಮುಗಿದರೂ ಹಲವು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಸೌದಿ ಅರೇಬಿಯಾ ಮೂಲದ ವ್ಯಕ್ತಿಯನ್ನು ಇಲ್ಲಿನ ಸಂಪಿಗೆಹಳ್ಳಿ ಠಾಣಾ ಪೊಲೀಸರು ಪೊಲೀಸರು ಬಂಧಿಸಿದ್ದಾರೆ.

ಆರ್.ಕೆ. ಹೆಗ್ಗಡೆ ನಗರದ ಸೌದಿ ಅರೇಬಿಯಾ ಮೂಲದ ಒಸಮಾ ಮುಹಮ್ಮದ್ ದೀಬ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಒಸಮಾ ಸಂಪಿಗೆಹಳ್ಳಿಯ ಆರ್.ಕೆ ಹೆಗ್ಗಡೆ ನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿರುವ ಬಗ್ಗೆ ಪೊಲೀಸರಿಗೆ ಸುಳಿವು ದೊರೆತು ಜ.23ರಂದು ಸಂಜೆ ಪೊಲೀಸರು ಆತನ ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಆತ ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ 2013ರಲ್ಲಿ ವಾಸದ ಅವಧಿ ಮುಕ್ತಾಯಗೊಂಡಿರುವುದು ಗೊತ್ತಾಗಿದೆ.

ಈ ಬಗ್ಗೆ ಪ್ರಶ್ನಿಸಿದಾಗ ಒಸಮಾ ಗೊಂದಲದ ಹೇಳಿಕೆ ನೀಡಿದ್ದ. ತದನಂತರ, ಕೂಲಂಕಷವಾಗಿ ಪರಿಶೀಲಿಸಿದಾಗ ಆರೋಪಿಯು ತಾನು ಭಾರತೀಯನೆಂದು ಗುರುತಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿ ತನ್ನ ಹೆಸರಿನಲ್ಲಿಯೇ ಪಾಸ್‍ಪೋರ್ಟ್, ಆಧಾರ್ ಕಾರ್ಡ್, ಗುರುತಿನಚೀಟಿ, ಚಾಲನಾ ಪರವಾನಗಿ, ಭಾರತೀಯ ಅಂಚೆ ಕಚೇರಿಯಿಂದ ಇಲಾಖೆಯ ವಿಳಾಸ ಮಾಡಿಸಿಕೊಂಡು ಅಕ್ರಮವಾಗಿ ದೇಶದಲ್ಲಿ ನೆಲೆಸಿರುವುದು ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯಿಂದ ವಿದೇಶಿ ಪಾಸ್‍ ಪೋರ್ಟ್, 1 ಭಾರತೀಯ ಪಾಸ್‍ಪೋರ್ಟ್, ಇತರೆ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News