ಶಿವಾಜಿನಗರ ಸ್ವಚ್ಛತೆಗಾಗಿ ಸಂಕಲ್ಪ: ರಿಝ್ವಾನ್ ಅರ್ಶದ್

Update: 2021-01-27 18:15 GMT

ಬೆಂಗಳೂರು, ಜ.27: ರಾಜಧಾನಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾದ ಶಿವಾಜಿನಗರ ವ್ಯಾಪ್ತಿಯಲ್ಲಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಲು ಪಣ ತೊಡಲಾಗಿದ್ದು, ಈ ಸಂಬಂಧ ಮೆಕ್ರೋ ಪ್ಲಾನ್ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ರಿಝ್ವಾನ್ ಆರ್ಶದ್ ತಿಳಿಸಿದರು.

ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಕುರಿತು ಬಿಬಿಎಂಪಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿವಾಜಿನಗರದಲ್ಲಿ ದಿನಕ್ಕೆ ನೂರಾರು ಕೋಟಿ ರೂ. ವ್ಯಾಪಾರ ವಾಹಿವಾಟು ನಡೆಯುತ್ತದೆ. ಜತೆಗೆ, ಅಲ್ಲಿಯೇ ಹೆಚ್ಚಾಗಿ ಗ್ರಾಹಕರು, ಸಾರ್ವಜನಿಕರು ಓಡಾಟ ನಡೆಸುತ್ತಾರೆ. ಆ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡಲು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ತ್ಯಾಜ್ಯ ಮುಕ್ತ ಪ್ರವೇಶವನ್ನಾಗಿಸಲು ಶ್ರಮಿಸಲಾಗುತ್ತಿದೆ ಎಂದರು.

ಈ ಭಾಗದ ವ್ಯಾಪ್ತಿಯಲ್ಲಿ ಜವಳಿ ಮಳಿಗೆಗಳು ಮಾತ್ರವಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್, ಮಾಂಸದಂಗಡಿ, ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಬಗೆಯ ಅಂಗಡಿಗಳಿವೆ. ಈ ಕಾರಣಕ್ಕಾಗಿ ಪ್ರತಿನಿತ್ಯ ರಸ್ತೆಗಳಲ್ಲಿ ತ್ಯಾಜ್ಯ ಕಂಡು ಬರುತ್ತದೆ. ಆದರೆ, ಮೆಕ್ರೋ ಪ್ಲಾನ್ ಯೋಜನೆ ಜಾರಿಯಾದಲ್ಲಿ, ಕಸ ಮುಕ್ತ ರಸ್ತೆ, ಪರಿಸರ ನಿರ್ಮಿಸಬಹುದಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಮೆಕ್ರೋ ಪ್ಲಾನ್ ಯೋಜನೆ ಅಡಿಯಲ್ಲಿ ಕಸದ ಬುಟ್ಟಿ, ಅಂಗಡಿ ಮಾಲಕರೊಂದಿಗೆ ಸಂವಾದ, ಕಸದ ನಿಯಮ ಉಲ್ಲಂಘಿಸಿದರೆ ಶುಲ್ಕ ವಿಧಿಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮುಖ್ಯವಾಗಿ ಈ ಯೋಜನೆ ಯಶಸ್ಸು ಕಾಣಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ರಿಝ್ವಾನ್ ಹೇಳಿದರು.

ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ(ಘನತ್ಯಾಜ್ಯ) ಡಿ.ರಂದೀಪ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News