‘ಪಡಿತರ ಮೂಲಕ ಮಂಡ್ಯ ಆಲೆಮನೆ ಬೆಲ್ಲ ವಿತರಣೆ; ಮುಖ್ಯಮಂತ್ರಿ, ಆಹಾರ ಸಚಿವರಿಗೆ ಮನವಿ’

Update: 2021-01-28 17:46 GMT

ಬೆಂಗಳೂರು, ಜ.28: ಈಗಾಗಲೇ ವಿತರಣೆ ಮಾಡುತ್ತಿರುವ ಪಡಿತರ ಧಾನ್ಯಗಳ ಜೊತೆ ಮಂಡ್ಯ ಜಿಲ್ಲೆಯ ಆಲೆಮನೆ ಬೆಲ್ಲವನ್ನೂ ವಿತರಿಸುವ ಮೂಲಕ ಅವುಗಳ ಪುನಶ್ಚೇತನಕ್ಕೆ ಒತ್ತುಕೊಡಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಕೇಂದ್ರ ಸರಕಾರವು ಈ ಬಾರಿ ಆತ್ಮನಿರ್ಭರ ಭಾರತ ಯೊಜನೆಯಡಿ ಮಂಡ್ಯ ಜಿಲ್ಲೆಯ ಆಲೆಮನೆಗಳನ್ನು ಆಯ್ಕೆ ಮಾಡಿದೆ. ಆದರೆ, ಇದಕ್ಕೆ ಆತ್ಮನಿರ್ಭರ ಭಾರತ ಯೋಜನೆಯಡಿ ಸಾಲ ನೀಡುವ ಮೊದಲು ಇವುಗಳ ಪುನಶ್ಚೇತನ ಮಾಡಬೇಕಿದೆ. ಕೆಲವು ಮೂಲ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂಬ ಅಭಿಪ್ರಾಯಗಳು ಕಳೆದ 2 ದಿನಗಳ ಹಿಂದೆ ನಡೆದ ಸಭೆಯಲ್ಲಿ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಕೇರಳ ಹಾಗೂ ತಮಿಳುನಾಡು ಮಾದರಿಯಲ್ಲಿ ಪಡಿತರ ಚೀಟಿದಾರರಿಗೆ ಸರಕಾರದ ವತಿಯಿಂದ ತಲಾ 1 ಕೆ.ಜಿ. ಮಂಡ್ಯ ಆಲೆಮನೆ ಬೆಲ್ಲವನ್ನು ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಮುಖ್ಯಮಂತ್ರಿ ಹಾಗೂ ಆಹಾರ ಸಚಿವರಿಗೆ ಉಭಯ ಸಚಿವರು ಮನವಿ ಮಾಡಿದ್ದಾರೆ. 

ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆಯಾದ ಆತ್ಮನಿರ್ಭರ ಭಾರತ ಅಭಿಯಾನದಡಿ ಮಂಡ್ಯ ಜಿಲ್ಲೆಯ ಆಲೆಮನೆಗಳ ಪುನಶ್ಚೇತನ ಕೈಗೊಳ್ಳುವ ಸಂಬಂಧ ಮಂಡ್ಯದಲ್ಲಿ ಕಳೆದ 2 ದಿನಗಳ ಹಿಂದಷ್ಟೇ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಸಭೆ ನಡೆಸಿದ್ದರು. ಈ ವೇಳೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಆಲೆಮನೆ ಸಂಘಟನೆಯವರು, ಕಬ್ಬಿನ ಗಾಣದ ಮಾಲಕರ ಅಸೋಸಿಯೇಷನ್ ಹಾಗೂ ರೈತರು ‘ಪಡಿತರದಲ್ಲಿ ಬೆಲ್ಲವನ್ನು ವಿತರಣೆ ಮಾಡಬೇಕು’ ಎಂದು ಸಲಹೆ ನೀಡಿದ್ದರು.

ಹಿಂದಿನ ಸಭೆಯಲ್ಲಿ ಸಮಿತಿ ರಚಿಸಿ ವರದಿ ಕೊಡಲು ಸೂಚನೆ: ಮಂಡ್ಯದಲ್ಲಿ ನಡೆದಿದ್ದ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಆಲೆಮನೆಯ ಪುನಶ್ಚೇತನಕ್ಕೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರಕಾರದಿಂದ ಯಾವ ರೀತಿಯ ಸಹಾಯ ಬೇಕು? ರೈತರು ಹೇಗೆ ಬೆಳೆಯಬೇಕು? ಅದಕ್ಕೆ ಮಾರುಕಟ್ಟೆ ಸೇರಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಿ ಶೀಘ್ರದಲ್ಲಿ ವರದಿ ಕೊಡುವಂತೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸಚಿವರಾದ ಸೋಮಶೇಖರ್ ಹಾಗೂ ನಾರಾಯಣ ಗೌಡ ಸೂಚನೆ ನೀಡಿದ್ದರು.

ವರದಿ ಬಂದ ತಕ್ಷಣ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಅಲ್ಲದೆ, ಶೀಘ್ರದಲ್ಲಿ ವರದಿ ಕೊಟ್ಟರೆ ಮುಖ್ಯಮಂತ್ರಿಯ ಗಮನಕ್ಕೆ ತಂದು ಈ ಬಾರಿಯ ಬಜೆಟ್ ನಲ್ಲಿ ಸೇರಿಸುವ ಬಗ್ಗೆ ಪ್ರಯತ್ನಿಸುವುದಾಗಿ ಸಚಿವ ಸೋಮಶೇಖರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News