ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಆರೋಪ: 7 ಕೋಟಿ ರೂ. ದಂಡ ವಸೂಲಿ

Update: 2021-01-29 17:21 GMT

ಬೆಂಗಳೂರು, ಜ.29: ಕೋವಿಡ್-19 ಸಂಬಂಧ ಮಾರ್ಗಸೂಚಿ ಉಲ್ಲಂಘನೆ ಆರೋಪದಡಿ ಬಿಬಿಎಂಪಿಯ ಮಾರ್ಷಲ್‍ಗಳು 7 ಕೋಟಿ ರೂ. ವಸೂಲಿ ಮಾಡಿದ್ದಾರೆ.

ಬಿಬಿಎಂಪಿಯ 8 ವ್ಯಾಪ್ತಿಯಲ್ಲಿ 2020ರ ಜೂನ್‍ನಿಂದ 2021 ನೇ ಸಾಲಿನ ಜನವರಿವರೆಗೆ 7 ಕೋಟಿ ರೂ.ಕ್ಕಿಂತ ಅಧಿಕ ದಂಡ ವಸೂಲಿ ಮಾಡಿದ್ದಾರೆ. ಈ ಪೈಕಿ 3 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದರಲ್ಲಿ 2 ಲಕ್ಷದ 84 ಸಾವಿರ ಮಾಸ್ಕ್ ಧರಿಸದ ಪ್ರಕರಣಗಳಿದ್ದರೆ, 86 ಸಾವಿರ ಸುರಕ್ಷಿತ ಅಂತರ ಕಾಯ್ದುಕೊಳ್ಳದ ಪ್ರಕರಣಗಳು ಸೇರಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಎಲ್ಲಿ, ಎಷ್ಟು?: ಪೂರ್ವ ವಲಯದಲ್ಲಿ ಒಟ್ಟು 69,360 ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ವಸೂಲಾದ ದಂಡ 1,59,97,906 ರೂ.ಆಗಿದೆ. ಪಶ್ಚಿಮ ವಲಯದಲ್ಲಿ ಒಟ್ಟು 67,360 ಪ್ರಕರಣ ದಾಖಲಾಗಿದ್ದರೆ, ವಸೂಲಾದ ದಂಡ 1,57,08,171 ರೂ. ದಕ್ಷಿಣ ವಲಯದಲ್ಲಿ ಒಟ್ಟು 81,139 ಪ್ರಕರಣ ದಾಖಲಾದರೆ, ವಸೂಲಾದ ದಂಡ 1,87,72,209 ರೂ.

ಅದೇ ರೀತಿ, ಮಹಾದೇವಪುರ ವಲಯದಲ್ಲೂ ಒಟ್ಟು 25,257 ಪ್ರಕರಣ ದಾಖಲಾಗಿದ್ದರೆ, ವಸೂಲಾದ ದಂಡವೂ 59,81,885. ಯಲಹಂಕ ವಲಯದಲ್ಲಿ ಒಟ್ಟು 15,084 ಪ್ರಕರಣ ಬೆಳಕಿಗೆ ಬಂದಿದ್ದು, ವಸೂಲಾದ ದಂಡ 35,12,226ರೂ. ದಾಸರಹಳ್ಳಿ ವಲಯ ಒಟ್ಟು 11,381 ಪ್ರಕರಣ ದಾಖಲಾಗಿದ್ದರೆ, ವಸೂಲಾದ ದಂಡ 27,14,834 ರೂ.

ಇನ್ನು ಆರ್‍ಆರ್ ನಗರ ವಲಯದಲ್ಲಿ ಒಟ್ಟು 16,399 ದಾಖಲಾಗಿದ್ದು, ವಸೂಲಾದ ದಂಡವೂ 37,31,615 ರೂ. ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 24,491 ಪ್ರಕರಣಗಳನ್ನು ದಾಖಲಿಸಿ 54,75,240 ರೂ. ದಂಡ ವಸೂಲಿ ಮಾಡಲಾಗಿದೆ.

ಹಲ್ಲೆ ಆರೋಪ: ದಂಡ ವಸೂಲಿ ಮಾಡುವ ಸಂದರ್ಭದಲ್ಲಿ ದಕ್ಷಿಣ ವಲಯದ ಎರಡು ಕಡೆ ಮಾರ್ಷಲ್‍ಗಳ ಮೇಲೆ ಹಲ್ಲೆಯೂ ಪ್ರಕರಣಗಳು ವರದಿಯಾಗಿದ್ದು, ಆಯಾ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News