×
Ad

ಸ್ಥಳಕ್ಕೆ ತೆರಳಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಪತ್ತೆ ಹಚ್ಚಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

Update: 2021-01-29 23:17 IST

ಬೆಂಗಳೂರು, ಜ.29: ನಗರದಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಸ್ಥಳಕ್ಕೆ ತೆರಳಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಪತ್ತೆ ಹಚ್ಚಿ ಎಂದು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ರಾಜ್ಯದಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಪೀಠಕ್ಕೆ ವಿವರಣೆ ನೀಡಿದರು. ಪಾಲಿಕೆ ಅಧಿಕಾರಿಗಳು ಇದೇ ಜನವರಿ 21ರಿಂದ 23ರ ನಡುವೆ ಸರ್ವೇ ನಡೆಸಿ, ನಗರದಲ್ಲಿ 1,588 ಧಾರ್ಮಿಕ ಕಟ್ಟಡಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ 1,533 ಕಟ್ಟಡಗಳನ್ನು 2009ಕ್ಕಿಂತ ಮುಂಚೆ ನಿರ್ಮಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಪಾಲಿಕೆ ಸಲ್ಲಿಸಿದ್ದ ವರದಿ ಹಾಗೂ ಆಯುಕ್ತರು ನೀಡಿದ ವಿವರಣೆ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಪೀಠ ಆಯುಕ್ತರನ್ನು ಪ್ರಶ್ನಿಸಿ, ಸರ್ವೇ ಕಾರ್ಯವನ್ನು ಹೇಗೆ ನಡೆಸಿದಿರಿ, ಯಾವ ಕ್ರಮಗಳನ್ನು ಅನುಸರಿಸಿದಿರಿ, ಅಧಿಕಾರಿಗಳಿಗೆ ಯಾವ ಕಾರಣಕ್ಕಾಗಿ ಸರ್ವೇ ನಡೆಸಲಾಗುತ್ತಿದೆ ಎಂಬ ಕುರಿತು ಮಾಹಿತಿ ನೀಡಿದ್ದೀರಾ, ಈ ಸಂಬಂಧ ಯಾವುದಾದರೂ ಆದೇಶ ಹೊರಡಿಸಿದ್ದೀರಾ ಎಂದು ಪ್ರಶ್ನಿಸಿತು. ಇದಕ್ಕೆ ಸೂಕ್ತ ಉತ್ತರ ನೀಡಲು ವಿಫಲರಾದ ಆಯುಕ್ತರು ನಿಖರ ವರದಿ ಸಲ್ಲಿಸಲು 2 ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಪದೇ ಪದೇ ನೀಡುತ್ತಿರುವ ತೀರ್ಪು, ನಿರ್ದೇಶನಗಳೇ ಅರ್ಥವಾಗಿಲ್ಲ. ಪಾಲಿಕೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸರ್ವೇ ಮಾಡುವುದಲ್ಲ. ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸಲು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಧಾರ್ಮಿಕ ಕಟ್ಟಡಕ್ಕೆ ಅಧಿಕಾರಿಗಳು ಖುದ್ದು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸದಿದ್ದರೆ ಸಮೀಕ್ಷೆ ನಿಖರ ಹಾಗೂ ಪೂರ್ಣ ಆಗುವುದಿಲ್ಲ. ಹೀಗಾಗಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಸರ್ವೇ ನಡೆಸಬೇಕು. ಈ ಕುರಿತ ವರದಿಯನ್ನು ಫೆ.26ರ ಒಳಗೆ ವಿವರವಾದ ಪ್ರಮಾಣಪತ್ರದ ಜೊತೆ ಸಲ್ಲಿಸಬೇಕು ಎಂದು ಆಯುಕ್ತರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಫೆ.5ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News