ನಿಮಗೆ ಪ್ರತಿಯೊಂದೂ ಎರಡಾಗಿ ತೋರುತ್ತಿದೆಯೇ? ಅದು ಡಿಪ್ಲೋಪಿಯಾ ಆಗಿರಬಹುದು

Update: 2021-01-30 13:29 GMT

 ಕೆಲವೊಮ್ಮೆ ತಲೆ ಸುತ್ತುತ್ತಿರುವಾಗ ಅಥವಾ ವಾಕರಿಕೆಯುಂಟಾದಾಗ ನಿಮ್ಮೆದುರಿನ ವಸ್ತುಗಳು ಎರಡಾಗಿ ಗೋಚರಿಸುತ್ತವೆ. ಆದರೆ ಒಂದೇ ವಸ್ತು ಎರಡಾಗಿ ಗೋಚರಿಸುವ ಈ ಡಬಲ್ ವಿಷನ್ ಅಥವಾ ದ್ವಂದ್ವ ದೃಷ್ಟಿಯು ನಿರಂತರವಾಗಿದ್ದರೆ ಅದು ಕಳವಳದ ವಿಷಯವಾಗುತ್ತದೆ. ಈ ಸಮಸ್ಯೆಯನ್ನು ವೈದ್ಯಕೀಯವಾಗಿ ಡಿಪ್ಲೋಪಿಯಾ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಯಾವುದಾದರೂ ದೈಹಿಕ ಅನಾರೋಗ್ಯ ಕಾರಣವಾಗಿರುತ್ತದೆ. ದ್ವಂದ್ವ ದೃಷ್ಟಿಯು ನಿಮಗೆ ಅನುಭವವಾದರೆ ಇತರ ಲಕ್ಷಣಗಳನ್ನು ತಡೆಯಲು ಮತ್ತು ಕಣ್ಣಿನ ದೃಷ್ಟಿಯನ್ನು ಸಹಜ ಸ್ಥಿತಿಗೆ ಮರಳಿಸಲು ನೇತ್ರತಜ್ಞರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ಡಿಪ್ಲೋಪಿಯಾದಲ್ಲಿ ಮಾನೊಕ್ಯುಲರ್ ಮತ್ತು ಬೈನೊಕ್ಯುಲರ್ ಡಿಪ್ಲೋಪಿಯಾ ಎಂದು ಎರಡು ವಿಧಗಳಿವೆ. ಮೊದಲನೆಯ ವಿಧದ ಡಿಪ್ಲೋಪಿಯಾ ಒಂದು ಕಣ್ಣಿನಲ್ಲಿ ಮಾತ್ರ ಉಂಟಾದರೆ ಎರಡನೆಯ ವಿಧವು ಎರಡೂ ಕಣ್ಣುಗಳಲ್ಲಿ ಉಂಟಾಗುತ್ತದೆ.

ಕಾರಣಗಳು

ಮಾನೊಕ್ಯುಲರ್ ಡಿಪ್ಲೋಪಿಯಾ: ಬೈನೊಕ್ಯುಲರ್ ಡಿಪ್ಲೋಪಿಯಾಕ್ಕೆ ಹೋಲಿಸಿದರೆ ಮಾನೊಕ್ಯುಲರ್ ಡಿಪ್ಲೋಪಿಯಾದ ಪ್ರಕರಣಗಳು ಸಾಮಾನ್ಯವಾಗಿ ಕಡಿಮೆಯಿದ್ದು,ಅದು ಒಂದು ಕಣ್ಣಿನಲ್ಲಿಯ ಸಮಸ್ಯೆಗೆ ಸಂಬಂಧಿಸಿರುತ್ತದೆ.

ಕಣ್ಣಿನ ಅಸಮ ವಕ್ರೀಕರಣ ಮತ್ತು ಆಕಾರ ಅಥವಾ ತೀವ್ರ ಅಸಮ ದೃಷ್ಟಿ,ಕೆರಾಟೊಕೋನಸ್ ಅಥವಾ ಅಕ್ಷಿಪಟಲದ ಆಕಾರದಲ್ಲಿ ಬದಲಾವಣೆಗಳು,ಟೆರಿಜಿಯಂ ಅಥವಾ ಕಣ್ಣುಗಳ ಒಳಮೂಲೆಯಲ್ಲಿ ಗುಲಾಬಿ ಬಣ್ಣದ ಅಂಗಾಂಶದ ಬೆಳವಣಿಗೆ,ಕಣ್ಣುಗಳು ಒಣಗಿರುವುದು,ಕಣ್ಣಿನ ಪೊರೆ ಇವು ಮಾನೊಕ್ಯುಲರ್ ಡಿಪ್ಲೋಪಿಯಾವನ್ನು ಉಂಟು ಮಾಡುವ ಕಾರಣಗಳಾಗಿವೆ.

ಬೈನೊಕ್ಯುಲರ್ ಡಿಪ್ಲೋಪಿಯಾ: ಈ ಸಮಸ್ಯೆಯು ಎರಡೂ ಕಣ್ಣುಗಳಲ್ಲಿ ಉಂಟಾಗುತ್ತದೆ. ನಿಮ್ಮ ಕಣ್ಣುಗಳು ಪರಸ್ಪರ ಮೇಳೈಕೆಯೊಂದಿಗೆ ಕೆಲಸ ಮಾಡದಿದ್ದಾಗ ವಸ್ತುಗಳು ಎರಡಾಗಿ ಗೋಚರಿಸುತ್ತವೆ. ಮಧುಮೇಹ,ನರಕ್ಕೆ ಹಾನಿ,ಕಣ್ಣಿನ ಸ್ನಾಯುಗಳನ್ನು ದುರ್ಬಲಗೊಳಿಸುವ ಮೈಸ್ತೇನಿಯಾ ಗ್ರೇವಿಸ್ ಎಂಬ ಕಾಯಿಲೆ,ಕಪಾಳದ ನರದ ಪಾರ್ಶ್ವವಾಯು,ಮೆಳ್ಳೆಗಣ್ಣು ಮತ್ತು ಗ್ರೇವ್ಸ್ ಕಾಯಿಲೆ ಇವು ಬೈನೊಕ್ಯುಲರ್ ಡಿಪ್ಲೋಪಿಯಾವನ್ನು ಉಂಟು ಮಾಡುವ ಕಾರಣಗಳಾಗಿವೆ.

ಡಿಪ್ಲೋಪಿಯಾದ ಲಕ್ಷಣಗಳು

ವಸ್ತುಗಳು ಎರಡಾಗಿ ಗೋಚರಿಸುವುದೇ ಡಿಪ್ಲೋಪಿಯಾದ ಲಕ್ಷಣವಾಗಿದ್ದರೂ ವ್ಯಕ್ತಿಗೆ ಈ ಕೆಳಗಿನ ಲಕ್ಷಣಗಳೂ ಅನುಭವವಾಗಬಹುದು.

 ಕಣ್ಣುಗಳನ್ನು ತಿರುಗಿಸಿದಾಗ ಅವುಗಳಲ್ಲಿ ನೋವು,ಹುಬ್ಬುಗಳು ಮತ್ತು ಕಣ್ತಲೆ ಅಥವಾ ಗಂಡಸ್ಥಲಗಳಲ್ಲಿ ನೋವು,ಮಾಲುಗಣ್ಣಿನಂತೆ ಕಂಡುಬರುವುದು,ಕಣ್ಣುಗಳ ನಿಶ್ಶಕ್ತಿ,ಜೋಲುಬಿದ್ದ ಕಣ್ಣುಗುಡ್ಡೆಗಳು,ತಲೆನೋವು ಮತ್ತು ವಾಕರಿಕೆ

ಡಿಪ್ಲೋಪಿಯಾದಿಂದ ತೊಂದರೆಗಳು

ಡಿಪ್ಲೋಪಿಯಾದ ವಿವಿಧ ಕಾರಣಗಳೊಂದಿಗೆ ಗುರುತಿಸಿಕೊಂಡಿರುವ ಸಂಭಾವ್ಯ ತೊಂದರೆಗಳಿದ್ದು,ಕಣ್ಣುಗಳ ಸ್ಥಿತಿಯನ್ನು ಅವಲಂಬಿಸಿ ಇವು ಸಾಮಾನ್ಯ ಅಥವಾ ತೀವ್ರ ಸ್ವರೂಪವನ್ನು ಹೊಂದಿರಬಹುದು. ಕಣ್ಣಿನಲ್ಲಿ ಬಿಗಿತ,ಬೆಳಕು ಅಥವಾ ಧ್ವನಿಗೆ ಸಂವೇದನಾಶೀಲತೆ, ವಾಕರಿಕೆಯಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಡಿಪ್ಲೋಪಿಯಾಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರ ಮಿದುಳಿನ ಟ್ಯೂಮರ್ ಅದರ ಗಂಭೀರ ಪರಿಣಾಮವಾಗಬಲ್ಲದು. ಅಪರೂಪದ ಪ್ರಕರಣಗಳಲ್ಲಿ ಸೋಂಕುಗಳಂತಹ ಮಾರಣಾಂತಿಕ ಕಾಯಿಲೆಗಳೂ ಕಾಣಿಸಿಕೊಳ್ಳಬಹುದು. ದ್ವಂದ್ವ ದೃಷ್ಟಿಯೊಂದಿಗೆ ತಲೆನೋವು ಮತ್ತು ತೀವ್ರ ಕಣ್ಣುನೋವಿದ್ದರೆ ಇದು ವರ್ಟಿಗೋದ ಎಚ್ಚರಿಕೆಯ ಸಂಕೇತವಾಗುತ್ತದೆ. ಈ ತೊಂದರೆಗಳಿಂದ ಪಾರಾಗಲು ಡಿಪ್ಲೋಪಿಯಾಕ್ಕೆ ತಕ್ಷಣ ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ.

ಕಣ್ಣುಗಳನ್ನು ಒಂದೊಂದಾಗಿ ಮುಚ್ಚುವ ಮೂಲಕ ಮಾನೊಕ್ಯುಲರ್ ಡಿಪ್ಲೋಪಿಯಾ ಅಥವಾ ಬೈನೊಕ್ಯುಲರ್ ಡಿಪ್ಲೋಪಿಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದು. ಆದರೆ ಡಿಪ್ಲೋಪಿಯಾಕ್ಕೆ ಮೂಲಕಾರಣವನ್ನು ಕಂಡುಕೊಳ್ಳುವುದು ಮುಖ್ಯವಾಗುತ್ತದೆ. ಲಕ್ಷಣಗಳನ್ನು ಆಧರಿಸಿ ವೈದ್ಯರು ಕೆಲವು ಪರೀಕ್ಷೆಗಳನ್ನು ಸೂಚಿಸಬಹುದು. ಕಾರಣವನ್ನು ತಿಳಿದುಕೊಂಡ ಬಳಿಕ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ ಮತ್ತು ದೃಷ್ಟಿಯು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಕಣ್ಣಿನ ವ್ಯಾಯಾಮಗಳು,ದೋಷವನ್ನು ಸರಿಪಡಿಸುವ ವಿಶೇಷ ಕನ್ನಡಕಗಳು, ತಾತ್ಕಾಲಿಕ ಪರಿಹಾರವಾಗಿ ಐ ಪ್ಯಾಚ್ ಇತ್ಯಾದಿಗಳನ್ನು ವೈದ್ಯರು ಶಿಫಾರಸು ಮಾಡಬಹುದು. ಸಮಸ್ಯೆ ಗಂಭೀರವಾಗಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News