ವಿಭಿನ್ನ ಪರಿಕಲ್ಪನೆಗಳು ಹೊಸ ಅನ್ವೇಷಣೆಗೆ ದಾರಿ: ಇಸ್ರೋ ಅಧ್ಯಕ್ಷ ಕೆ.ಶಿವನ್

Update: 2021-01-30 15:35 GMT

ಬೆಂಗಳೂರು, ಜ.30: ವಿಭಿನ್ನ ಪರಿಕಲ್ಪನೆಗಳಿಂದ ಹೊಸ ಅನ್ವೇಷಣೆ ಸಾಧ್ಯವಾಗುತ್ತದೆ. ಇದರಲ್ಲಿ ವಿಫಲತೆಯಾದಾಗ ಪರಿಶ್ರಮ ಇನ್ನಷ್ಟು ಕಠಿಣವಾಗಿರುತ್ತೆ. ಆದರೆ, ವಿಫಲತೆಯಿಂದಾಗಿ ಕೀಳರಿಮೆ ಅನುಭವಿಸಬಾರದೆಂದು ಕೇಂದ್ರ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಹಾಗೂ ಇಸ್ರೋ ಅಧ್ಯಕ್ಷ ಕೆ.ಶಿವನ್ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತರು ಹಾಗೂ ಪಿಎಚ್.ಡಿ ಪದವೀಧರರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ನಮಲ್ಲಿ ಮೂಡುವ ಐಡಿಯಾಗಳನ್ನು ಹೇಗೆ ಅನುಷ್ಠಾನಕ್ಕೆ ತರುತ್ತೇವೆ ಎಂಬುದೇ ಅನ್ವೇಷಣೆಯಾಗಿದೆ. ಈ ಅನ್ವೇಷಣೆಯಲ್ಲಿ ವಿಫಲತೆಯ ಸವಾಲು ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

ಒಮ್ಮೊಮ್ಮೆ ಅನ್ವೇಷಣೆ ಸಮರ್ಪಕ ಫಲಿತಾಂಶ ನೀಡದೇ ಇರಬಹುದು. ಆದರೆ, ಸತತ ವಿಫಲತೆಯ ಅರಿವಾದಾಗ ನಮ್ಮ ಪರಿಶ್ರಮ ಇನ್ನಷ್ಟು ಕಠಿಣವಾಗುತ್ತದೆ. ಆಗ ಸಾಧ್ಯತೆಗಳ ದಾರಿಗಳು ಒಂದೊಂದಾಗಿ ಗೋಚರವಾಗುತ್ತದೆ ಎಂದು ಅವರು ಪದವೀಧರರಿಗೆ ಕಿವಿ ಮಾತು ಹೇಳಿದ್ದಾರೆ.
ನಮ್ಮ ಪ್ರಯತ್ನಗಳು ಯಾವಾಗಲು ಚಂದ್ರನನ್ನು ಗುರಿಯಿಟ್ಟು ಹೊಡೆಯುವಂತಿರಬೇಕು. ಗುರಿ ತಪ್ಪಿದರೂ ಯಾವುದಾದರು ಒಂದು ನಕ್ಷತ್ರವನ್ನು ಮುಟ್ಟುತ್ತೇವೆ. ಹೀಗಾಗಿ ವಿಫಲತೆಯಲ್ಲಿ ಕೀಳರಿಮೆ ಬೇಡ. ಆಸಕ್ತಿದಾಯಕ, ವಿಭಿನ್ನ ಪರಿಕಲ್ಪನೆಯ, ವೈಭವ ಮತ್ತು ಅದ್ಭುತವಾದ ವಿಫಲತೆಗಳ ಮೂಲಕ ಜಗತ್ತನ್ನು ಇನ್ನಷ್ಟು ಆಸಕ್ತಿಕರವಾಗಿಸಲು ಸಾಧ್ಯವೆಂದು ಅವರು ಅಭಿಪ್ರಾಯಿಸಿದ್ದಾರೆ.

ಘಟಿಕೋತ್ಸವದಲ್ಲಿ 56,172 ವಿದ್ಯಾರ್ಥಿಗಳು ಪದವಿ ಪ್ರದಾನ ಮಾಡಲಾಯಿತು. 319 ಚಿನ್ನದ ಪದಕಗಳು, 90 ನಗದು ಬಹುಮಾನಗಳಿಗೆ ಒಟ್ಟು 196 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ವಿಷಯಗಳಲ್ಲಿ ಒಟ್ಟು 184 ಪಿಎಚ್‍ಡಿ ಪದವಿ ಪ್ರದಾನ ಮಾಡಲಾಯಿತು. 

ಹಸಿರು ತಂತ್ರಜ್ಞಾನ ಬಳಸುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಪ್ರವತ್ತರಾಗಬೇಕು. ಇದು ಪರಿಸರದ ಮೇಲೆ ಆಗಬಹುದಾದ ಹಾನಿಯನ್ನು ತಪ್ಪಿಸುತ್ತದೆ. ಈ ನಿಟ್ಟಿನಲ್ಲಿ ಇಸ್ಟ್ರೋ ತಂತ್ರಜ್ಞಾನದಲ್ಲಿ ಮಹತ್ತರವಾದ ಬದಲಾವಣೆ ತಂದುಕೊಂಡಿದೆ. ಇಸ್ರೋ ಭವಿಷ್ಯದಲ್ಲಿ ರಾಕೆಟ್ ಹಾಗೂ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಯಲ್ಲಿ ಹಸಿರು ಇಂಧನ ಬಳಸಲು ಕ್ರಮವಹಿಸುತ್ತಿದೆ.
ಶಿವನ್, ಇಸ್ರೋ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News