ಹಕ್ಕುಗಳ ಉಳಿವಿಗಾಗಿ ಕಾರ್ಮಿಕ ವರ್ಗ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿ: ಡಾ.ಸಿದ್ದನಗೌಡ ಪಾಟೀಲ್

Update: 2021-01-31 16:22 GMT

ಬೆಂಗಳೂರು, ಜ. 31: ದೇಶದಲ್ಲಿ ಕಾರ್ಮಿಕ ಹಕ್ಕುಗಳು ಉಳಿಯಬೇಕಾದರೆ ಕಾರ್ಮಿಕ ವರ್ಗ ತನ್ನ ಚಾರಿತ್ರಿಕ ರಾಜಕೀಯ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕಾದ ಅನಿವಾರ್ಯತೆ ಇದೆ ಎಂದು ಚಿಂತಕ ಡಾ.ಸಿದ್ದನಗೌಡ ಪಾಟೀಲ ಅಭಿಪ್ರಾಯಿಸಿದ್ದಾರೆ.

ರವಿವಾರ ಮಲ್ಲೇಶ್ವರಂನ ಬಡಗನಾಡು ಭವನದಲ್ಲಿ ಆಯೋಜಿಸಿದ್ದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಶತಮಾನೋತ್ಸವ ಮತ್ತು 10ನೆ ಬೆಂಗಳೂರು ಜಿಲ್ಲಾ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಕೃಷಿ-ಕಾರ್ಮಿಕ ತಿದ್ದುಪಡಿ ಕಾಯ್ದೆಗಳು ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತಿವೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಸಂಘಟಿತ ಹೋರಾಟದಿಂದ ಮಾತ್ರ ಕಾರ್ಮಿಕರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯವೆಂದು ಹೇಳಿದರು.

ಕಾರ್ಮಿಕ ಮುಖಂಡ ಮಹದೇವನ್ ಮಾತನಾಡಿ, ಇಂದು ಕಾರ್ಮಿಕ ವರ್ಗ ಅತ್ಯಂತ ದೊಡ್ಡ ಸವಾಲಿನ ಸಂದರ್ಭ ಎದುರಿಸುತ್ತಿದ್ದು, ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ  ಬಲವಾದ ಹೋರಾಟ ರೂಪಿಸಬೇಕಾದ ಅಗತ್ಯವಿದೆ ಎಂದು ಇದೇ ವೇಳೆ ಕಾರ್ಮಿಕರಿಗೆ ಸಲಹೆ ನೀಡಿದರು.

ಸಮ್ಮೇಳನದಲ್ಲಿ ಬಿಡಿಎ ವಸತಿ ಯೋಜನೆ, ಉಚಿತ ಕೋವಿಡ್ ಲಸಿಕೆ, ತೈಲ ಬೆಲೆಗಳ ಅಮಾನವೀಯ ಏರಿಕೆ, ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧದ ರೈತ ಹೋರಾಟಕ್ಕೆ ಬೆಂಬಲ ನೀಡುವುದು ಸೇರಿದಂತೆ 9 ನಿರ್ಣಯಗಳನ್ನು ಅಂಗೀಕರಿಸಿ, ಮುಂದಿನ ಮೂರು ವರ್ಷಗಳ ಅವಧಿಗೆ 23ಜನ ನೂತನ ಪದಾಧಿಕಾರಿಗನ್ನೊಗೊಂಡ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು ಎಂದು ಎಐಟಿಯುಸಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಎಐಟಿಯುಸಿಯ ರಾಜ್ಯಾಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, ಬೆಂಗಳೂರು ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಜಯಮ್ಮ, ಹಿರಿಯ ಕಾರ್ಮಿಕ ಮುಖಂಡ ಡಿ.ಮರಿಲಿಂಗಯ್ಯ, ಎಐಟಿಯುಸಿ ಬೆಂಗಳೂರು ಜಿಲ್ಲಾ ಸಮಿತಿಯ ಅಧ್ಯಕ್ಷ ದೀಪಕ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ್, ವಿಜಯಭಾಸ್ಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News