ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಟೂರ್ನಿ ಭಾರತದಲ್ಲೇ ಆಯೋಜಿಸಲು ಬಿಸಿಸಿಐ ಸಿದ್ಧತೆ

Update: 2021-01-31 18:39 GMT

 ಹೊಸದಿಲ್ಲಿ: ರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯನ್ನು ಜೈವಿಕ ಸುರಕ್ಷಿತ ವಾತಾವರಣ ದಲ್ಲಿ ಭಾರತದಲ್ಲೇ ಆಯೋಜಿಸಲು ತಯಾರಿ ನಡೆಸಿದೆ.

ಕಳೆದ ಬಾರಿ ಯುಎಇಯಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 53 ಪಂದ್ಯಗಳು ನಡೆದಿದ್ದವು. ಐಪಿಎಲ್ 2021 ಟೂರ್ನಿಯಲ್ಲೂ 50ಕ್ಕಿಂತಲೂ ಹೆಚ್ಚು ಪಂದ್ಯಗಳು ಜರುಗಲಿವೆ. ಆದರೆ ಕೊರೋನ ವೈರಸ್ ಸೋಂಕು ತಡೆ ಶಿಷ್ಟಾಚಾರದಂತೆ ಪದೆ ಪದೇ ಆಟಗಾರರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಬೇಕಾಗಿರುವುದು ಬಿಸಿಸಿಐಗೆ ದೊಡ್ಡ ತಲೆನೋವು ತಂದಿದೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿ ಯನ್ನು ಭಾರತದಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ. ಭಾರತದಲ್ಲಿ ಕೋವಿಡ್-19 ಸೋಂಕಿನ ಸಂಖ್ಯೆ ಕಡಿಮೆಯಾದರೆ ಟೂರ್ನಿಯನ್ನು ಇಲ್ಲೇ ಆಯೋಜಿಸುವುದು ಉತ್ತಮ ಎಂದು ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ಅಭಿಪ್ರಾಯಪಟ್ಟಿದ್ದಾರೆ.

  ಐಪಿಎಲ್ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ನಡೆಸುತ್ತಿರುವ ಟೂರ್ನಿ. ಹೀಗಾಗಿ ಇಲ್ಲಿಯೇ ಆಯೋಜಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪರಿಸ್ಥಿತಿ ಇದೇ ರೀತಿ ನಿಯಂತ್ರಣದಲಿದ್ದರೆ ಭಾರತದಲ್ಲಿ ಟೂರ್ನಿ ಆಯೋಜಿಸಲು ಹೆಚ್ಚು ಕಷ್ಟವಾಗದು ಟೂರ್ನಿಗೆ ಆತಿಥ್ಯ ವಹಿಸುವ 8 ನಗರಗಳು ಎಷ್ಟು ಸುರಕ್ಷಿತ ಎಂಬುದನ್ನು ನಾವು ನೋಡಬೇಕಾಗಿದೆ. ಪರಿಸ್ಥಿತಿಗಳಿಗೆ ತಕ್ಕಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳ ಲಾಗುವುದು ಎಂದು ದುಮಾಲ್ ವಿವರಿಸಿದ್ದಾರೆ.

  ಸರಕಾರ ಅನುಮತಿ ನೀಡಿದರೆ ಆಟಗಾರರಿಗೆ ಕೋವಿಡ್ -19 ವ್ಯಾಕ್ಸಿನ್ ಕೊಡಿಸಲಾಗುವುದು. ವ್ಯಾಕ್ಸಿನ್ ಇಲ್ಲವಾದರೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳೊಂದಿಗೆ ಟೂರ್ನಿಯನ್ನು ನಡೆಸಲಾಗುವುದು. ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ನಡೆಯಬೇಕು. ಒಂದು ವೇಳೆ ಇಲ್ಲಿ ನಡೆಸಲು ಬೇರೆ ಯಾವುದೇ ದಾರಿ ಇಲ್ಲದಿದ್ದರೆ ವಿದೇಶದಲ್ಲಿ ನಡೆಸಬೇಕು ಎಂದು ದುಮಾಲ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News