ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವಂತಹ ಬಜೆಟ್: ಜಗದೀಶ್ ಶೆಟ್ಟರ್

Update: 2021-02-01 14:28 GMT

ಬೆಂಗಳೂರು, ಫೆ. 1: ಹೊಸ ದಶಕದಲ್ಲಿ ಹೊಸ ಯುಗ ಸೃಷ್ಟಿಸುವ ಬಜೆಟ್ ಇದಾಗಿದ್ದು, ಕೇಂದ್ರ ಸರಕಾರ ಕೋವಿಡ್ ನಂತರದ ಆರ್ಥಿಕತೆಗೆ ಉತ್ತೇಜನ ನೀಡಲು ಎಲ್ಲ್ಲ ಕ್ರಮಗಳನ್ನು ಕೈಗೊಂಡಿರುವುದು ಇಂದಿನ ಕೇಂದ್ರ ಬಜೆಟ್‍ನಲ್ಲಿ ಕಾಣಬಹುದಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

ಆರೋಗ್ಯ, ಎಂಎಸ್‍ಎಂಇ, ಸ್ಟಾರ್ಟ್‍ಅಪ್ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ದಿಗೆ ಕೇಂದ್ರ ಆಯವ್ಯಯ ಮುನ್ನಡಿ ಬರೆದಿದೆ. ಎಂಎಸ್‍ಎಂಇಗಳಿಗೆ 15,700 ಕೋಟಿ ರೂ.ಅನುದಾನ ನೀಡಲಾಗಿದ್ದು, 2 ಪಟ್ಟು ಹೆಚ್ಚು ನೀಡಲಾಗಿದೆ. ಈ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯವನ್ನು ನೀಡಲು ಕೇಂದ್ರ ಸರಕಾರ ಮುಂದಾಗಿದೆ.

ಸಣ್ಣ ಕಂಪೆನಿಗಳ ವ್ಯಾಖ್ಯಾನ ಬದಲು ಮಾಡುವ ಮೂಲಕ ಸುಮಾರು 2 ಲಕ್ಷ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಏಕವ್ಯಕ್ತಿ ಕಂಪೆನಿಗಳ ಸ್ಥಾಪನೆಗೂ ಪ್ರೋತ್ಸಾಹ ನೀಡಲಾಗಿದೆ. ಕನಿಷ್ಠ ಕೂಲಿಯನ್ನು ಎಲ್ಲ ವಿಭಾಗದ ಕೂಲಿ ಕಾರ್ಮಿಕರಿಗೂ ಅನ್ವಯ ಮಾಡಿರುವುದು ಹಾಗೂ ಮಹಿಳೆಯರು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಸ್ಟಾರ್ಟ್ ಅಪ್ ಉದ್ದಿಮೆಗಳಿಗೆ ಇನ್ನು 1 ವರ್ಷ ರಿಲೀಪ್ ನೀಡಲಾಗಿದ್ದು, ಬಂಡವಾಳದ ಮೇಲಿನ ಲಾಭಕ್ಕೆ ತೆರಿಗೆ ವಿಧಿಸುವುದಿಲ್ಲ ಎಂದು ಕೇಂದ್ರ ಬಜೆಟ್‍ನಲ್ಲಿ ತಿಳಿಸಲಾಗಿದೆ. ಇದು ದೇಶದಲ್ಲಿ ಸ್ಟಾರ್ಟ್ ಅಪ್ ಕಂಪೆನಿಗಳ ಬೆಳವಣಿಗೆ ಬಹಳ ಸಹಾಯಕವಾಗಲಿದೆ. ಒಟ್ಟಾರೆಯಾಗಿ ಪ್ರಗತಿಪರ ಹಾಗೂ ಕೋವಿಡ್ ಸಂಕಷ್ಟದಿಂದ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಉತ್ತಮ ಹಾದಿಯನ್ನು ಈ ಬಾರಿಯ ಬಜೆಟ್‍ನಲ್ಲಿ ಕೇಂದ್ರ ವಿತ್ತೀಯ ಸಚಿವರು ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News