ಜನ ಚಳವಳಿಗಳಿಗೆ ಈಗ ಸಂಕಟದ ಕಾಲ

Update: 2021-02-02 05:22 GMT

ಕಳೆದ ಐದು ದಶಕಗಳ ಕಾಲಾವಧಿಯಲ್ಲಿ ನಾನು ಅನೇಕ ಚಳವಳಿ, ಹೋರಾಟಗಳನ್ನು ಕಣ್ಣಾರೆ ಕಂಡಿದ್ದೇನೆ. ಇವುಗಳಲ್ಲಿ ಬಹುತೇಕ ಆಂದೋಲನಗಳಲ್ಲಿ ಪಾಲ್ಗೊಂಡಿದ್ದೇನೆ. ಜರ್ನಲಿಸ್ಟ್ ಆಗಿ ಮತ್ತು ಆ್ಯಕ್ಟಿವಿಸ್ಟ್ ಆಗಿ ಅನೇಕ ಸಂಘರ್ಷಗಳನ್ನು ಕಂಡು ಅನುಭವಿಸಿದ್ದೇನೆ. ನನ್ನದು ಸ್ವಾತಂತ್ರ್ಯ ಹೋರಾಟಗಾರರ ಮನೆತನದ ಹಿನ್ನೆಲೆಯಿರುವುದರಿಂದ ಬಾಲ್ಯದಿಂದಲೇ ಹೋರಾಟ ಬದುಕಿನ ಭಾಗವಾಗಿದೆ. ಈ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಇಂದಿನ ರೈತ ಚಳವಳಿ ಮತ್ತು ಸರಕಾರ ಅದನ್ನು ಹತ್ತಿಕ್ಕಲು ನಡೆಸಿದ ನಾನಾ ರೀತಿಯ ಹಿಕ್ಮತ್ತುಗಳನ್ನು ನಾನು ಹಿಂದೆಂದೂ ಕಂಡಿಲ್ಲ.

ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿಯನ್ನೇ ಬಹುದೊಡ್ಡ ದಮನ ಸತ್ರ ಎಂದು ಇಂದಿಗೂ ಮಾಧ್ಯಮಗಳು ವರ್ಣಿಸುತ್ತವೆ. ಆದರೆ ಆ ದುರಿತ ಕಾಲದಲ್ಲೂ ಕೂಡ ಬಂಧಿಸಲ್ಪಟ್ಟ ಮುರಾರ್ಜಿ ದೇಸಾಯಿ, ಮಧು ದಂಡವತೆ, ವಾಜಪೇಯಿ ಮತ್ತು ಅಡ್ವಾಣಿ ಸೇರಿದಂತೆ ಪ್ರತಿಪಕ್ಷ ನಾಯಕರ ಮೇಲೆ ದೇಶದ್ರೋಹದ ಆರೋಪ ಹೊರಿಸಿರಲಿಲ್ಲ. ಆಗ ಎಮರ್ಜೆನ್ಸಿಗೆ ಮೊದಲು ಜಯಪ್ರಕಾಶ್ ನಾರಾಯಣರ ನೇತೃತ್ವದ ಆಂದೋಲನದಲ್ಲಿ ಸರಕಾರದ ವಿರುದ್ಧ ಬಂಡೇಳುವಂತೆ ಸೇನೆ ಹಾಗೂ ಪೊಲೀಸರಿಗೆ ಬಹಿರಂಗವಾಗಿ ಪ್ರಚೋದನೆ ನೀಡಿದವರ ಮೇಲೂ ರಾಜದ್ರೋಹದ ಪ್ರಕರಣ ದಾಖಲಿಸಿರಲಿಲ್ಲ. ಅಂದಿನ ಜೆಪಿ ಚಳವಳಿಯಲ್ಲೇ ಅಂದಿನ ಜನಸಂಘ(ಇಂದಿನ ಬಿಜೆಪಿ) ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿತೆಂಬುದು ಇನ್ನೊಂದು ಕತೆ. ಈಗ ಅದರ ವಿಶ್ಲೇಷಣೆ ಬೇಡ.

ಆ ಚಳವಳಿ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಅದೇ ಕಾಲಕ್ಕೆ ಇಪ್ಪತ್ತು ಅಂಶಗಳ ಕಾರ್ಯಕ್ರಮ ಜಾರಿ ಮಾಡಿ ಬಡವರಿಗಾಗಿ ಅನೇಕ ಯೋಜನೆಗಳನ್ನು ಪ್ರಕಟಿಸಿದರು. ಜೀತದಾಳುಗಳು ಹಲವಾರು ವರ್ಷಗಳ ಜೀತದಿಂದ ಆಗ ಮುಕ್ತರಾದರು. ಹೀಗಾಗಿ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಉಸಿರುಗಟ್ಟಿಸುವಂತಹ ಸ್ಥಿತಿಯೇನೂ ಆಗ ಇರಲಿಲ್ಲ. ಆದರೂ ಪತ್ರಿಕೆಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದರಿಂದ ಅದನ್ನು ಇಡಿಯಾಗಿ ಸಮರ್ಥಿಸಲು ಆಗುವುದಿಲ್ಲ. ಅದೇನೇ ಇರಲಿ ಈ ದಮನ ನೀತಿಯ ಪರಿಣಾಮವಾಗಿ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅಧಿಕಾರ ಕಳೆದುಕೊಂಡರು. ದೇಶದಲ್ಲಿ ಮೊದಲ ಬಾರಿ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂತು.

ನರಗುಂದ ರೈತ ಹೋರಾಟ ನಡೆದದ್ದು ಎಂಭತ್ತರ ದಶಕದ ಆರಂಭದಲ್ಲಿ. ಅದರಲ್ಲೂ ನಾನು ಪಾಲ್ಗೊಂಡಿದ್ದೆ. ಆಗ ನರಗುಂದದಿಂದ ಬೆಂಗಳೂರು ವರೆಗೆ ಐದು ನೂರು ಕಿ. ಮೀ. ಪಾದಯಾತ್ರೆ ನಡೆಯಿತು. ಆ ಚಳವಳಿಯ ಪರಿಣಾಮವಾಗಿ ಕಾಂಗ್ರೆಸ್‌ನ ಮುಖ್ಯ ಮಂತ್ರಿ ಗುಂಡೂರಾವ್ ಅಧಿಕಾರ ಕಳೆದುಕೊಂಡರು. ನಂತರ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂತು. ಆಗ ಬಂಗಾರಪ್ಪಮುಖ್ಯ ಮಂತ್ರಿಯಾಗಬೇಕಾಗಿತ್ತು. ಅದೇನೋ ಕಸರತ್ತು ನಡೆದು ರಾಮಕೃಷ್ಣ ಹೆಗಡೆ ಮುಖ್ಯ ಮಂತ್ರಿಯಾದರು.

ಈಗ ಅದನ್ನೆಲ್ಲ ಉಲ್ಲೇಖಿಸಲು ಕಾರಣ ಜನ ಸರಕಾರದ ವಿರುದ್ಧ ಚಳವಳಿಗೆ ಇಳಿದಾಗೆಲ್ಲ ಅಧಿಕಾರದಲ್ಲಿರುವ ಪಕ್ಷಗಳು ಪರಾಭವಗೊಂಡಿವೆ. ಆದರೆ ಈಗ ಕಳೆದ ಆರು ವರ್ಷಗಳ ಕಾಲಾವಧಿಯಲ್ಲಿ ಈ ಸರಕಾರ ಎಷ್ಟೆಲ್ಲ ಜನವಿರೋಧಿ ದಮನ ನೀತಿಯನ್ನು ಅನುಸರಿಸಿತು. ಹೋರಾಟಗಾರರ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಜೈಲಿಗೆ ಅಟ್ಟಿತು. ಪೆಟ್ರೋಲ್-ಡಿಸೇಲ್ ದರ ನೂರರ ಗಡಿ ಸಮೀಪಿಸಿದೆ. ಗ್ಯಾಸ್ ಸಿಲಿಂಡರ್ ಎಂಟು ನೂರು ರೂಪಾಯಿ ತಲುಪಿದೆ. ಸಬ್ಸಿಡಿ ಗೋತಾ ಆಗಿದೆ. ಆದರೂ ಈ ಪಕ್ಷದ ಚುನಾವಣೆಯ ಗೆಲುವಿಗೆ ಧಕ್ಕೆ ಆಗಿಲ್ಲ. ಒಂದು ವೇಳೆ ಬಹುಮತ ಬರದಿದ್ದರೂ ಗೆದ್ದ ಪಕ್ಷಗಳನ್ನೇ ಇಡಿಯಾಗಿ ಖರೀದಿಸುವ ಅಗಾಧ ಸಾಮರ್ಥ್ಯ ಇವರಿಗಿದೆ.

ಈಗ ಚಳವಳಿಗಳನ್ನು ಮಾಡುವುದೂ ಸುಲಭವಲ್ಲ. ಯಾವುದೇ ಹೋರಾಟವಿರಲಿ ಅದನ್ನು ಹೇಗೆ ಮುಗಿಸಬೇಕೆಂಬ ಹಿಟ್ಲರ್ ವಿದ್ಯೆ ಈ ಸರಕಾರಕ್ಕೆ ಗೊತ್ತಿದೆ. ದಿಲ್ಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಚಳವಳಿಯಲ್ಲಿ ತಮ್ಮವರನ್ನು ನುಸುಳಿಸಿ, ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿ ಅದನ್ನು ರೈತ ನಾಯಕರ ತಲೆಗೆ ಹೇಗೆ ಎಫ್‌ಐಆರ್ ಹಾಕಿದರೆಂಬುದು ಎಲ್ಲರಿಗೂ ಗೊತ್ತಿದೆ. ಮಾಡಿದವರು ಯಾರೋ, ಆದರೆ ರೈತ ನಾಯಕರಾದ ಯೋಗೇಂದ್ರ ಯಾದವ್, ದರ್ಶನ್ ಪಾಲ್, ರಾಕೇಶ್ ಟಿಕಾಯತ್, ಮೇಧಾ ಪಾಟ್ಕರ್, ಗುರ್ನಾಮ ಸಿಂಗ್ ಮುಂತಾದ 37 ಮಂದಿಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

ಮಹಾರಾಷ್ಟ್ರದ ಪುಣೆ ಹತ್ತಿರದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲೂ ಗಲಭೆಗೆ ಪ್ರಚೋದಿಸಿದವರನ್ನು ಬಿಟ್ಟು ದೂರದ ಹೈದರಾಬಾದ್ ನ ಕವಿ ವರವರರಾವ್, ಚಿಂತಕ ಆನಂದ ತೇಲ್ತುಂಬ್ಡೆ, ಪತ್ರಕರ್ತ ಗೌತಮ್ ನವ್ಲಾಖಾ, ನ್ಯಾಯವಾದಿ ಸುಧಾ ಭಾರದ್ವಾಜ್ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಬುದ್ಧಿಜೀವಿಗಳ ಮೇಲೆ ಇದೇ ರಾಜದ್ರೋಹ ಮತ್ತು ಭಯೋತ್ಪಾದನೆ ತಡೆ ಕಾಯ್ದೆಯ(ಯುಎಪಿಎ)ಮೇಲೆ ಬಂಧಿಸಿ ಜೈಲಿಗೆ ತಳ್ಳಿ ಒಂದೂವರೆ ವರ್ಷ ದಾಟಿತು.

ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವಿದ್ದಾಗ ಅದನ್ನು ಉರುಳಿಸಲು ದಿಲ್ಲಿಯಲ್ಲಿ ದೊಡ್ಡ ಚಳವಳಿ ನಡೆಯಿತು. ಬಾಬಾ ರಾಮದೇವ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಾಗಪುರ ನಿರ್ದೇಶಿತ ಈ ಷಢ್ಯಂತ್ರ ಫಲಿಸಿ ಯುಪಿಎ ಸೋತು 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. 2019 ರಲ್ಲಿ ಮತ್ತೆ ಬಿಜೆಪಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಯಶಾಲಿಯಾಯಿತು. ಜನರಲ್ಲಿ ಅದರಲ್ಲೂ ನವ ಮಧ್ಯಮ ವರ್ಗದಲ್ಲಿ ಅದಕ್ಕೆ ಬಹುದೊಡ್ಡ ಬೆಂಬಲದ ನೆಲೆಯಿದೆ. ಅನೇಕ ಎಡಪಂಥೀಯ ನೌಕರ ಸಂಘಟನೆಗಳ ಸದಸ್ಯರೂ ಮೋದಿಯವರ ಬಗ್ಗೆ ಅಭಿಮಾನದಿಂದ ಮಾತಾಡುವುದನ್ನು ಕೇಳಿದ್ದೇನೆ. ಕೊರೋನ ಕಾಲದಲ್ಲೂ, ನಂತರವೂ ತನ್ನ ವಿಭಜನಕಾರಿ ಅಜೆಂಡಾದ ಪರವಾಗಿ ಜನಾಭಿಪ್ರಾಯ ರೂಪಿಸುವಲ್ಲಿ ಬಿಜೆಪಿ ಯಶಸ್ವಿಯಾಗಲು ಕಾರಣ ಅದಕ್ಕಿರುವ ಆರೆಸ್ಸೆಸ್‌ನ ಬಹುದೊಡ್ಡ ಸಂಘಟನಾ ಜಾಲ. ಅವರಂತೆ ಮನೆ ಮನೆಗೆ ರಸ್ತೆ, ರಸ್ತೆಯಲ್ಲಿ ತಮ್ಮ ಕಾರ್ಯಸೂಚಿಯನ್ನು ಕೊಂಡೊಯ್ಯಬಲ್ಲ ಕಾರ್ಯಕರ್ತರ ಜಾಲ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಇಲ್ಲ ಎಂಬುದು ಕಟುಸತ್ಯ.

ಯಾವುದೇ ಸರಕಾರ ವಿರೋಧಿಗಳನ್ನು ಪೊಲೀಸ್ ಬಲ ಬಳಸಿ ಹತ್ತಿಕ್ಕುವುದು ಸಾಮಾನ್ಯ. ಆದರೆ ಫ್ಯಾಶಿಸ್ಟ್ ಸಿದ್ಧಾಂತ ಹೊಂದಿರುವ ಪಕ್ಷ ಮತ್ತು ಸಂಘಟನೆಗಳು ತಮ್ಮದೇ ಪಡೆಗಳನ್ನು ಕಟ್ಟಿಕೊಂಡು ಒಂದೆಡೆ ಪೊಲೀಸರ ಮೂಲಕ ದಾಳಿ ಮಾಡಿಸುವ ಜೊತೆಗೆ ನೇರವಾಗಿ ತಮ್ಮ ಪಡೆಗಳನ್ನೇ ಛೂ ಬಿಡುತ್ತವೆ. ಎನ್.ಆರ್.ಸಿ. ವಿರುದ್ಧ ಶಾಹೀನ್‌ಬಾಗ್‌ನಲ್ಲಿ ಜನಸಾಮಾನ್ಯರು ಶಾಂತಿಯುತ ಹೋರಾಟ ನಡೆಸಿದಾಗ ಅವರ ಮೇಲೆ ಗೂಂಡಾಪಡೆಗಳ ಮೂಲಕ ದಾಳಿ ಮಾಡಿಸಿ ಹತ್ತಿಕ್ಕುವ ಯತ್ನ ನಡೆಯಿತು. ಈಗ ರೈತರು ಕಳೆದೆರಡು ತಿಂಗಳುಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ದಿಲ್ಲಿಯ ಸಮೀಪದ ಸಿಂಘು ಗಡಿಯಲ್ಲಿ ಸ್ಥಳೀಯರ ಸೋಗು ಹಾಕಿ ಫ್ಯಾಶಿಸ್ಟ್ ಪಡೆಯ ಗೂಂಡಾಗಳು ರೈತರ ಮೇಲೆ ಕಲ್ಲು ತೂರಾಟ ಮತ್ತು ಗೂಂಡಾಗಿರಿ ನಡೆಸಿದ್ದಾರೆ.

ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಸಾಮಾನ್ಯರಲ್ಲ. ಎಂತಹದನ್ನಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲವರು. ಅವರನ್ನು ಇಂದಿಗೂ ಬೆಂಬಲಿಸಿ ಸಮರ್ಥಿಸುವ ದೊಡ್ಡ ಜನ ಸಮೂಹವೇ ಇದೆ.ಮಾಧ್ಯಮಗಳು ಸಂಪೂರ್ಣವಾಗಿ ಅವರ ತುತ್ತೂರಿಗಳಾಗಿವೆ. ಯಾವಾಗಲೂ ಸರ್ಪಗಾವಲು ಇರುವ (ಗಣರಾಜ್ಯ ದಿನ ಇಪ್ಪತ್ತು ಸಾವಿರ ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿ) ಕೆಂಪುಕೋಟೆಯ ಮೇಲೆ ಯಾರೋ ಹೋಗಿ ಧ್ವಜ ಹಾರಿಸಿದರೆಂದರೆ ನಗು ಬರುತ್ತದೆ. ನಮ್ಮ ಟಿವಿ ಸುದ್ದಿಗಳಲ್ಲೂ ಇದನ್ನೇ ಪದೇ ಪದೇ ತೋರಿಸಲಾಯಿತು. ಇನ್ನೊಂದೆಡೆ ರೈತರು ಪೊಲೀಸರು ನಿಗದಿ ಪಡಿಸಿದ ದಾರಿಯಲ್ಲಿ ನಡೆಸಿದ ಶಾಂತಿಯುತ ಟ್ರ್ಯಾಕ್ಟರ್ ಮೆರವಣಿಗೆಯನ್ನು ತೋರಿಸಲೇ ಇಲ್ಲ.

ಇವೆಲ್ಲ ಇವರು ನಾಗಪುರ ಒಟಿಸಿಯಲ್ಲಿ ಕಲಿತ ಪಾಠಗಳು. ಅವರಿಗೆ ಜರ್ಮನಿಯ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮಾದರಿ. ಕಳೆದ ಶತಮಾನದ ನಲವತ್ತರ ದಶಕದಲ್ಲಿ ಹಿಟ್ಲರ್ ಜರ್ಮನ್ ಪಾರ್ಲಿಮೆಂಟ್‌ಗೆ ತಾನೇ ಬೆಂಕಿ ಹಚ್ಚಿ ಕಮ್ಯುನಿಸ್ಟರ ತಲೆಗೆ ಕಟ್ಟಿದ್ದ. ಈಗ ಕೆಂಪುಕೋಟೆಯಲ್ಲಿ ನಡೆದುದು ಅದೇ ಮಾದರಿಯದು.

ನಾವು ಪ್ರಗತಿಪರರು, ಸೆಕ್ಯುಲರ್‌ಗಳು ಎಂದು ಕರೆದುಕೊಳ್ಳುವವರು ಬರೀ ಸಂಘ ಪರಿವಾರದವರನ್ನು ಬೈದರೆ ಪ್ರಯೋಜನವಿಲ್ಲ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತಮ್ಮದೇ ಬಲಿಷ್ಠ ಯುವ ಕಾರ್ಯಕರ್ತರ ಪಡೆ ಕಟ್ಟಿ ಅವರ ಮೆದುಳಿಗೆ ಜೀವಪರ, ಜನಪರ ಸಿದ್ಧಾಂತಗಳನ್ನು ಹಾಕಿ ಜನರ ಬಳಿಗೆ ಕಳಿಸಬೇಕು.ಕೋಮುವಾದದ ವಿರುದ್ಧ ಕಾಟಾಚಾರದ ಸಭೆ, ಪ್ರತಿಭಟನೆ ಮಾಡಿದರೆ ಸಾಲದು. ಪ್ರತಿ ಊರಿನ, ಹಳ್ಳಿಯ ಮನೆ ಮನೆಗೆ ಹೋಗಿ ಮನೆಯ ಮನದ ಬಾಗಿಲು ತಟ್ಟಿ ದೇಶ ಇಂದು ಎದುರಿಸುತ್ತಿರುವ ಅಪಾಯ, ಬಹುತ್ವ ಭಾರತದ ಮಹತ್ವದ ಬಗ್ಗೆ ತಿಳಿಸಿ ಹೇಳಬೇಕು. ಇದಕ್ಕೆ ಪ್ರಗತಿಪರ ಎಂದು ಹೇಳಿಕೊಂಡು ಜಾತಿ ರಾಜಕೀಯ ಮಾಡುವ, ಅನುದಾನಕ್ಕಾಗಿ ಸರಕಾರದಲ್ಲಿರುವವರ ಎದುರು ಹಲ್ಲು ಗಿಂಜುವ ಮಠಾಧೀಶರು, ಸ್ವಾಮಿಗಳನ್ನು ನಂಬಿ ಉಪಯೋಗವಿಲ್ಲ. ಮುಖ್ಯವಾಗಿ ಇಪ್ಪತ್ತರ ಸುತ್ತ ಮುತ್ತಲಿನ ಯುವಕರನ್ನು ಮಾತಾಡಿಸಿ ಅವರಿಗೆ ಬೆಳಕಿನ ಹೊಸ ದಾರಿಯನ್ನು ತೋರಿಸಬೇಕಾಗಿದೆ.

ರೈತರ ಹೋರಾಟದ ನಿಜವಾದ ಕಾರಣವನ್ನು ಜನರ ಮನೆ ಬಾಗಿಲಿಗೆ ಹೋಗಿ ತಿಳಿಸಿಹೇಳಬೇಕಾಗಿದೆ. ಸರಕಾರ ತರಲಿರುವ ಮೂರು ಕೃಷಿ ಕಾಯ್ದೆಗಳು ಜಾರಿಯಾದರೆ ಮೊದಲೇ ಸಂಕಷ್ಟದ ಸುಳಿಯಲ್ಲಿರುವ ರೈತರ ಪರಿಸ್ಥಿತಿ ಇನ್ನಷ್ಟು ದಾರುಣವಾಗಲಿದೆ. ಇನ್ನು 4-5 ವರ್ಷಗಳಲ್ಲಿ ರೈತರು ಕಾರ್ಪೊರೇಟ್ ಕಂಪೆನಿಗಳ ಗುಲಾಮರಾಗಬೇಕಾಗುತ್ತದೆ. ಈಗಿರುವ ಎಪಿಎಂಸಿಗಳಿಂದ ರೈತರ ಉತ್ಪನ್ನಗಳಿಗೆ ಅಷ್ಟಿಷ್ಟು ಧಾರಣೆ ಸಿಗುತ್ತಿದೆ. ಈ ಕಾಯ್ದೆಗಳು ಜಾರಿಯಾದರೆ ಎಪಿಎಂಸಿಗಳೆಲ್ಲ ಮುಚ್ಚಿ ಹೋಗುತ್ತವೆ. ದೈತ್ಯ ಕಾರ್ಪೊರೇಟ್ ಕಂಪೆನಿಗಳು ಕೃಷಿ ಮಾರುಕಟ್ಟೆಯನ್ನು ಆಕ್ರಮಿಸುತ್ತವೆ. ಆಗ ಕಾರ್ಪೊರೇಟ್ ರೈತರಿಗೆ ಚೌಕಾಸಿಯ ಹಕ್ಕಿರುವುದಿಲ್ಲ. ಕಂಪೆನಿಗಳು ಹೇಳಿದ ಅಗ್ಗದ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ. ಕಾರ್ಪೊರೇಟ್ ಕಂಪೆನಿಗಳು ರೈತರಿಂದ ಅಗ್ಗದ ಬೆಲೆಗೆ ಖರೀದಿಸಿದ ಕೃಷಿ ಉತ್ಪನ್ನಗಳನ್ನು ತಮ್ಮ ಗೋದಾಮುಗಳಲ್ಲಿ ಸಂಗ್ರಹ ಮಾಡಿಟ್ಟುಕೊಂಡು ಕೃತಕ ಅಭಾವವನ್ನು ಉಂಟು ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತವೆ. ಇದರಿಂದ ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಇಬ್ಬರಿಗೂ ವಂಚನೆಯಾಗುತ್ತದೆ ಎಂದು ಜನ ಸಾಮಾನ್ಯರಿಗೆ ತಿಳಿಸಿ ಹೇಳಬೇಕಾಗಿದೆ.

ಈಗ ಬಿಹಾರದಲ್ಲಿ ಎಪಿಎಂಸಿಗಳಿಲ್ಲ ಹೀಗಾಗಿ ಅಲ್ಲಿ ರೈತರು ಖಾಸಗಿ ಕಂಪೆನಿಗಳಿಗೆ ಅಗ್ಗದ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಭಾರತದಲ್ಲಿ ಕೇವಲ ಐದಾರು ಎಕರೆ ಜಮೀನು ಹೊಂದಿರುವ ಸಣ್ಣ ಪುಟ್ಟ ರೈತರ ಸಂಖ್ಯೆ ಶೇಕಡಾ 81ರಷ್ಟಿದೆ. ಈ ಕರಾಳ ಕಾಯ್ದೆ ಜಾರಿಗೆ ಬಂದರೆ ಇಂತಹ ರೈತರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಈ ಕಾಯ್ದೆ ಜಾರಿಗೆ ಬಂದೇ ಬರುತ್ತದೆ ಎಂದು ಕಾರ್ಪೊರೇಟ್ ಧಣಿ ಅದಾನಿಗೆ ಎಷ್ಟು ಗ್ಯಾರಂಟಿ ಇದೆ ಅಂದರೆ ರೈತರಿಂದ ಕೊಳ್ಳುವ ಆಹಾರ ಧಾನ್ಯ ಸಂಗ್ರಹಿಸಿಡಲು ಈಗಾಗಲೇ ದೇಶಾದ್ಯಂತ ಎಲ್ಲ ಕಡೆ ಗೋದಾಮುಗಳನ್ನು, ಕೋಲ್ಡ್ ಸ್ಟೋರೆಜ್‌ಗಳನ್ನು ನಿರ್ಮಾಣ ಮಾಡಿಯಾಗಿದೆ. ಅಂತಲೇ ಪಂಜಾಬ್, ಹರ್ಯಾಣ, ರಾಜಸ್ಥಾನಗಳ ರೈತರು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲವಾಗಿ ಅನೇಕ ವಿಜ್ಞಾನಿಗಳು, ಕ್ರೀಡಾಪಟುಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್‌ಮಾಡಿದ್ದಾರೆ. ಪಂಜಾಬಿನ ಡಿಐಜಿ ಲಕ್ವಿಂದರ್‌ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಾವಿರಾರು ಸೈನಿಕರು ತಮ್ಮ ಪದಕಗಳನ್ನು ವಾಪಸು ಮಾಡುತ್ತಿದ್ದಾರೆ.

ಈಗ ನಡೆದಿರುವ ರೈತರ ಹೋರಾಟ ವಿಫಲಗೊಂಡರೆ, ಸೋತರೆ ನಾಳೆ ದೇಶದಲ್ಲಿ ನಡೆಯುವ ಕಾರ್ಮಿಕರ, ವಿದ್ಯಾರ್ಥಿಗಳ, ಮಹಿಳೆಯರ ಹೀಗೆ ಎಲ್ಲ ಜನ ಸಮುದಾಯಗಳ ಜನತಾಂತ್ರಿಕ ಹೋರಾಟಗಳು ವಿಫಲಗೊಳ್ಳುತ್ತವೆ. ಕಾರ್ಪೊರೇಟ್, ಫ್ಯಾಶಿಸ್ಟ್ ಸರ್ವಾಧಿಕಾರದ ಕೈಯಲ್ಲಿ ಸಿಕ್ಕು ದೇಶ ನಾಶವಾಗಿ ಹೋಗುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News