ದೇಶಾದ್ಯಂತ ಎನ್ಆರ್ ಸಿ ನಡೆಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ: ಕೇಂದ್ರ ಸರಕಾರ

Update: 2021-02-02 11:44 GMT

ಹೊಸದಿಲ್ಲಿ,ಫೆ.2: ದೇಶವ್ಯಾಪಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (NRC) ನಡೆಸುವ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಸರಕಾರ ಪುನರುಚ್ಛರಿಸಲಿದೆ. ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್ (NPR) ಹಾಗೂ ಜನಗಣತಿ ಕುರಿತಂತೆ ಇರುವ ಕೆಲವೊಂದು ಆತಂಕಗಳ ಕುರಿತಂತೆ ಸಂಸದೀಯ ಸ್ಥಾಯಿ ಸಮಿತಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಮಾಡಿರುವ  ಶಿಫಾರಸುಗಳಿಗೆ  ನೀಡಿದ ಉತ್ತರದಲ್ಲಿ ಕೇಂದ್ರ ಸರಕಾರ ಮೇಲಿನಂತೆ ಹೇಳಿದೆ.

"ಜನಗಣತಿಯಲ್ಲಿ ಸಂಗ್ರಹಿಸಲಾಗುವ ಎಲ್ಲಾ ಮಾಹಿತಿ ಗೌಪ್ಯವಾಗಿಡಲಾಗುತ್ತದೆ. ಆಡಳಿತಾತ್ಮಕ ಮಟ್ಟದಲ್ಲಿ ಒಟ್ಟಾರೆ ಅಂಕಿಅಂಶಗಳನ್ನು ಮಾತ್ರ  ಬಿಡುಗಡೆ ಮಾಡಲಾಗುತ್ತದೆ. ಜನಗಣತಿ 2021 ಅನ್ನು ಯಶಸ್ವಿಯಾಗಿ ನಡೆಸಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜನಗಣತಿ ಹಾಗೂ ಎನ್‍ಪಿಆರ್‍ಗೆ ಪ್ರಶ್ನಾವಳಿಗಳನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಅದೇ ಸಮಯ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್  ರಚಿಸುವ ಕುರಿತಂತೆ ಇಲ್ಲಿಯ ತನಕ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು  ಸರಕಾರ ಈಗಾಗಲೇ ಹಲವಾರು ಬಾರಿ ಸ್ಪಷ್ಟ ಪಡಿಸಿದೆ" ಎಂದು ಸರಕಾರ ತನ್ನ ಉತ್ತರದಲ್ಲಿ ತಿಳಿಸಿದೆ.

ಜನಗಣತಿ ಹಾಗೂ ಎನ್‍ಪಿಆರ್ ಕುರಿತು ಜನರಿಗಿರುವ ಆತಂಕ ಕುರಿತಂತೆ ಕಾಂಗ್ರೆಸ್ ಸಂಸದ ಆನಂದ್ ಶರ್ಮ ಅವರ ನೇತೃತ್ವದ ಸಮಿತಿ ಕಳೆದ ಫೆಬ್ರವರಿಯಲ್ಲಿ  ಸರಕಾರದ ಗಮನ ಸೆಳೆದಿತ್ತು. ಈ ಕುರಿತಂತೆ ಕ್ರಮ ಕೈಗೊಂಡ ವರದಿಯನ್ನು ಮಂಗಳವಾರ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News