ಕೋಮಾ ಸ್ಥಿತಿಗೆ ಜಾರುವುದು ಎಂದರೇನು?

Update: 2021-02-03 13:37 GMT

 ಕೋಮಾ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ ಅದು ನಿಜವಾಗಿಯೂ ಏನು,ಎಷ್ಟು ಮಾರಣಾಂತಿಕವಾಗಬಹುದು ಎನ್ನುವುದರ ಮಾಹಿತಿಗಳು ಹೆಚ್ಚಿನವರಿಗೆ ಗೊತ್ತಿಲ್ಲದಿರಬಹುದು. ಅಚೇತನ ಅವಸ್ಥೆ ಎಂದೂ ಕರೆಯಬಹುದಾದ ಕೋಮಾ ದೀರ್ಘಾವಧಿಯ ಪ್ರಜ್ಞಾಶೂನ್ಯ ಸ್ಥಿತಿಯಾಗಿದ್ದು,ತಲೆಗೆ ಗಂಭೀರ ಪೆಟ್ಟು,ಆಘಾತ,ಮಿದುಳಿನ ಟ್ಯೂಮರ್,ಮಾದಕ ದ್ರವ್ಯ ಅಥವಾ ಮದ್ಯದ ನಶೆಯಂತಹ ವಿವಿಧ ಕಾರಣಗಳು ವ್ಯಕ್ತಿಯು ಕೋಮಾಕ್ಕೆ ಜಾರುವಂತೆ ಮಾಡಬಹುದು. ಮಧುಮೇಹ ಅಥವಾ ಸೋಂಕಿನಂತಹ ಶರೀರದಲ್ಲಿಯ ಸಮಸ್ಯೆಗಳೂ ಕೋಮಾವನ್ನುಂಟು ಮಾಡಬಹುದು.

ಕೋಮಾ ವೈದ್ಯಕೀಯ ತುರ್ತು ಸಂದರ್ಭವಾಗಿದೆ. ಈ ಸಮಯದಲ್ಲಿ ರೋಗಿಯ ಜೀವವನ್ನುಳಿಸಲು ಮತ್ತು ಮಿದುಳಿನ ಚಟುವಟಿಕೆ ಸ್ಥಗಿತಗೊಳ್ಳದಂತೆ ತುರ್ತು ಕ್ರಮ ಅಗತ್ಯವಾಗುತ್ತದೆ, ವೈದ್ಯರು ಸಾಮಾನ್ಯವಾಗಿ ಸೂಕ್ತ ಚಿಕಿತ್ಸೆಯನ್ನು ಆರಂಭಿಸುವ ನಿಟ್ಟಿನಲ್ಲಿ ಕೋಮಾಕ್ಕೆ ಕಾರಣವನ್ನು ನಿರ್ಧರಿಸುವ ಪ್ರಯತ್ನವಾಗಿ ಸರಣಿ ರಕ್ತಪರೀಕ್ಷೆಗಳಿಗೆ ಮತ್ತು ಮಿದುಳಿನ ಸ್ಕ್ಯಾನ್‌ಗೆ ಸೂಚಿಸುತ್ತಾರೆ.

ಕೋಮಾ ಸ್ಥಿತಿಯು ಹೆಚ್ಚಿನ ಪ್ರಕರಣಗಳಲ್ಲಿ ವಾರಗಳ ಕಾಲ ಮುಂದುವರಿಯುತ್ತದೆ. ದೀರ್ಘಾವಧಿಗೆ ಪ್ರಜ್ಞಾಹೀನರಾಗಿಯೇ ಉಳಿದವರು ಮಿದುಳು ಸಾವಿನ ಸ್ಥಿತಿಯನ್ನು ತಲುಪಬಹುದು. ಅಂದರೆ ಅವರ ಮಿದುಳು ಯಾವುದೇ ಚಟುವಟಿಕೆಯ ಸಂಕೇತವನ್ನು ನೀಡುವುದಿಲ್ಲ ಮತ್ತು ಔಷಧಿಗಳು ಹಾಗೂ ಯಂತ್ರಗಳ ನೆರವಿನಿಂದ ಅವರನ್ನು ಜೀವಂತವಾಗಿರಿಸಲಾಗುತ್ತದೆ. ಒಂದು ಅರ್ಥದಲ್ಲಿ ಅವರು ಜೀವಂತ ಶವಗಳೇ ಆಗಿರುತ್ತಾರೆ.

ಕೋಮಾ ಸ್ಥಿತಿಯ ಲಕ್ಷಣಗಳು

 ಮುಚ್ಚಿದ ಕಣ್ಣುಗಳು,ಕಣ್ಣಿನ ಗೊಂಬೆಯು ಬೆಳಕಿಗೆ ಸ್ಪಂದಿಸದಂತಹ ಕುಗ್ಗಿದ ಮಿದುಳುಕಾಂಡದ ಪ್ರತಿವರ್ತನೆಗಳು,ಪ್ರತಿಫಲಿತ ಚಲನೆಯನ್ನು ಹೊರತುಪಡಿಸಿ ಇತರ ಯಾವುದಕ್ಕೂ ಕೈಕಾಲುಗಳು ಸ್ಪಂದಿಸದಿರುವುದು,ನೋವನ್ನುಂಟು ಮಾಡುವ ಪ್ರಚೋದಕ ಕ್ರಮಗಳಿಗೆ ಯಾವುದೇ ಸ್ಪಂದನವಿಲ್ಲದಿರುವುದು,ಅನಿಯಮಿತ ಉಸಿರಾಟ ಇವು ಕೋಮಾದ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಕೋಮಾ ತುರ್ತು ವೈದ್ಯಕೀಯ ಸ್ಥಿತಿಯಾಗಿದೆ. ಹೀಗಾಗಿ ರೋಗಿಯು ಕೋಮಾಕ್ಕೆ ಜಾರಿದರೆ ತಕ್ಷಣ ವೈದ್ಯಕೀಯ ನೆರವನ್ನು ಪಡೆಯಬೇಕಾಗುತ್ತದೆ.

ಕಾರಣಗಳು

ಹಲವು ವಿಧಗಳ ಸಮಸ್ಯೆಗಳು ಕೋಮಾ ಸ್ಥಿತಿಯನ್ನುಂಟು ಮಾಡುತ್ತವೆ.

ಆಘಾತಕಾರಿ ಮಿದುಳು ಪೆಟ್ಟುಗಳು: ಸಾಮಾನ್ಯವಾಗಿ ಅಪಘಾತ ಅಥವಾ ಹಿಂಸಾಚಾರದ ಕೃತ್ಯಗಳ ವೇಳೆ ಮಿದುಳಿಗೆ ಆಘಾತವನ್ನುಂಟು ಮಾಡುವ ಗಾಯಗಳು ಉಂಟಾಗುತ್ತವೆ ಅಥವಾ ಪೆಟ್ಟುಗಳು ಬೀಳುತ್ತವೆ.

ಮೆದುಳಿನ ಆಘಾತ: ಅಪಧಮನಿಗಳಲ್ಲಿ ತಡೆಗಳಿಂದಾಗಿ ಅಥವಾ ರಕ್ತನಾಳ ಒಡೆದು ಮಿದುಳಿಗೆ ರಕ್ತಪೂರೈಕೆ ಕಡಿಮೆಯಾಗುವ ಅಥವಾ ವ್ಯತ್ಯಯಗೊಳ್ಳುವ ಸ್ಥಿತಿ

ಟ್ಯೂಮರ್‌ಗಳು: ಮಿದುಳು ಅಥವಾ ಮಿದುಳುಕಾಂಡಗಳಲ್ಲಿ ಉಂಟಾಗುವ ಟ್ಯೂಮರ್‌ಗಳು ಅಥವಾ ಗಡ್ಡೆಗಳು

ಮಧುಮೇಹ: ರಕ್ತದಲ್ಲಿಯ ಸಕ್ಕರೆ ಮಟ್ಟ ಅಧಿಕಗೊಳ್ಳುವುದು (ಹೈಪರ್‌ಗ್ಲೈಸಿಮಿಯಾ) ಅಥವಾ ಅತಿಯಾಗಿ ಕುಸಿಯುವುದು (ಹೈಪೊಗ್ಲೈಸಿಮಿಯಾ)

ಆಮ್ಲಜನಕದ ಕೊರತೆ: ನೀರಿನಲ್ಲಿ ಮುಳುಗುವುದರಿಂದ ರಕ್ಷಿಸಲ್ಪಟ್ಟವರು ಅಥವಾ ಹೃದಯಾಘಾತದಿಂದ ಬದುಕುಳಿದವರು ಮಿದುಳಿಗೆ ಆಮ್ಲಜನಕ ಪೂರೈಕೆಯ ಕೊರತೆಯಿಂದಾಗಿ ಎಚ್ಚರಗೊಳ್ಳದೆ ಕೋಮಾ ಸ್ಥಿತಿಗೆ ಜಾರಬಹುದು.

ಸೋಂಕುಗಳು: ಎನ್‌ಸಿಫಾಲಿಟಿಸ್ ಅಥವಾ ಮಿದುಳಿನ ಉರಿಯೂತ ಮತ್ತು ಮೆನಿಂಜೈಟಿಸ್ ಅಥವಾ ಮಿದುಳಿನ ಪೊರೆಯ ಊತದಂತಹ ಸೋಂಕುಗಳು ಮಿದುಳು,ಮಿದುಳು ಬಳ್ಳಿ ಅಥವಾ ಮಿದುಳನ್ನು ಸುತ್ತುವರಿದಿರುವ ಅಂಗಾಂಶಗಳ ಊತವನ್ನುಂಟು ಮಾಡುತ್ತವೆ. ಇಂತಹ ಸೋಂಕುಗಳ ಗಂಭೀರ ಪ್ರಕರಣಗಳಲ್ಲಿ ಮಿದುಳಿಗೆ ಹಾನಿಯಾಗುತ್ತದೆ ಅಥವಾ ರೋಗಿಯು ಕೋಮಾ ಸ್ಥಿತಿಗೆ ಜಾರಬಹುದು.

ಸೆಳವುಗಳು: ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಸೆಳವುಗಳು ಕೋಮಾ ಸ್ಥಿತಿಯನ್ನುಂಟು ಮಾಡಬಲ್ಲವು.

ವಿಷಕಾರಕಗಳು: ಕಾರ್ಬನ್ ಮಾನೊಕ್ಸೈಡ್ ಅಥವಾ ಸೀಸದಂತಹ ವಿಷಕಾರಕಗಳಿಗೆ ತೆರೆದುಕೊಳ್ಳುವುದು ಮಿದುಳಿಗೆ ಹಾನಿ ಮತ್ತು ಕೋಮಾ ಸ್ಥಿತಿಯನ್ನುಂಟು ಮಾಡುತ್ತದೆ.

ಮಾದಕ ದ್ರವ್ಯಗಳು ಮತ್ತು ಮದ್ಯ: ಅತಿಯಾದ ಪ್ರಮಾಣದಲ್ಲಿ ಮಾದಕ ದ್ರವ್ಯಗಳು ಮತ್ತು ಮದ್ಯ ಸೇವನೆಯು ವ್ಯಕ್ತಿಯನ್ನು ಕೋಮಾ ಸ್ಥಿತಿಗೆ ತಳ್ಳಬಹುದು.

ತೊಂದರೆಗಳು

 ಹೆಚ್ಚಿನ ಜನರು ಕೋಮಾ ಸ್ಥಿತಿಯಿಂದ ಕ್ರಮೇಣ ಚೇತರಿಸಿಕೊಳ್ಳುತ್ತಾರಾದರೂ ಇತರರು ಮಿದುಳು ಸಾವಿಗೀಡಾಗಿ ಜೀವಂತ ಶವಗಳ ಸ್ಥಿತಿಯನ್ನು ತಲುಪುತ್ತಾರೆ ಅಥವಾ ಸಾವನ್ನಪ್ಪುತ್ತಾರೆ. ಕೋಮಾ ಸ್ಥಿತಿಯಿಂದ ಚೇತರಿಸಿಕೊಂಡ ಕೆಲವರಲ್ಲಿ ದೊಡ್ಡ ಅಥವಾ ಸಣ್ಣ ವೈಕಲ್ಯವುಂಟಾಗಬಹುದು.

 ಬೆಡ್ ಸೋರ್ಸ್‌ ಅಥವಾ ಹಾಸಿಗೆ ಹುಣ್ಣುಗಳು,ಮೂತ್ರನಾಳ ಸೋಂಕುಗಳು,ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಇತರ ಕೆಲವು ಸಮಸ್ಯೆಗಳು ಕೋಮಾ ಸ್ಥಿತಿಯಲ್ಲಿರುವವರಲ್ಲಿ ಕಾಣಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News