ಮೂಗಿನಲ್ಲಿ ಗಡ್ಡೆ ಉಂಟಾದರೆ ಏನಾಗುತ್ತದೆ? ಮೂಗಿನಲ್ಲಿಯೂ ಗಡ್ಡೆ ಉಂಟಾಗುತ್ತದೆ ಎನ್ನುವುದು ನಿಮಗೆ ಗೊತ್ತೇ?

Update: 2021-02-05 06:33 GMT

ಇಂತಹ ಗಡ್ಡೆಗಳನ್ನು ನೇಸಲ್ ಮತ್ತು ಪಾರಾನೇಸಲ್ ಟ್ಯೂಮರ್‌ಗಳೆಂದು ಕರೆಯಲಾಗುತ್ತದೆ. ಇವು ಮೂಗಿನೊಳಗಿನ ಕುಹರದಲ್ಲಿ ಮತ್ತು ಅದರ ಸುತ್ತಮುತ್ತ ಕಾಣಿಸಿಕೊಳ್ಳುವ ಅಸಹಜ ಬೆಳವಣಿಗೆಗಳಾಗಿವೆ. ಪಾರಾನೇಸಲ್ ಟ್ಯೂಮರ್‌ಗಳು ಮೂಗಿನ ಸುತ್ತಲಿನ ವಾಯು ತುಂಬಿಕೊಂಡ ಪ್ಯಾರಾನೇಸಲ್ ಸೈನಸ್‌ಗಳಲ್ಲಿ ಬೆಳೆಯುತ್ತವೆ.

ನೇಸಲ್ ಮತ್ತು ಪ್ಯಾರಾನೇಸಲ್ ಟ್ಯೂಮರ್‌ಗಳು ಕ್ಯಾನ್ಸರ್ ಗಡ್ಡೆಗಳಾಗಿರಬಹುದು ಅಥವಾ ಅಲ್ಲದಿರಲೂಬಹುದು. ಈ ಟ್ಯೂಮರ್‌ಗಳಲ್ಲಿ ಹಲವಾರು ವಿಧಗಳಿವೆ. ರೋಗಿಯ ಮೂಗಿನಲ್ಲಿ ಬೆಳೆದಿರುವ ಗಡ್ಡೆ ಯಾವ ವಿಧಕ್ಕೆ ಸೇರಿದ್ದು ಎನ್ನುವುದನ್ನು ನಿರ್ಧರಿಸಿಕೊಂಡ ಬಳಿಕ ವೈದ್ಯರು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.

ಲಕ್ಷಣಗಳು

ಮೂಗಿನಿಂದ ಉಸಿರಾಡಲು ಕಷ್ಟವಾಗುವುದು, ಘ್ರಾಣಶಕ್ತಿಯ ನಷ್ಟ,ಮೂಗಿನಿಂದ ರಕ್ತಸ್ರಾವ,ಮೂಗಿನಿಂದ ಲೋಳೆ ಸೋರಿಕೆ,ಮುಖದಲ್ಲಿ ಊತ ಅಥವಾ ನೋವು,ನೀರು ತುಂಬಿದ ಕಣ್ಣುಗಳು,ಬಾಯಿಯ ಅಂಗುಳದಲ್ಲಿ ಹುಣ್ಣು ಅಥವಾ ಗಾಯ,ದೃಷ್ಟಿ ಸಮಸ್ಯೆ,ಕುತ್ತಿಗೆಯಲ್ಲಿ ಗಂಟು ಮತ್ತು ಬಾಯಿಯನ್ನು ತೆರೆಯಲು ಕಷ್ಟವಾಗುವುದು ಇವು ನೇಸಲ್ ಮತ್ತು ಪಾರಾನೇಸಲ್ ಟ್ಯೂಮರ್‌ಗಳ ಲಕ್ಷಣಗಳಲ್ಲಿ ಸೇರಿವೆ.

ಕಾರಣಗಳು

ವಂಶವಾಹಿ ರೂಪಾಂತರದಿಂದಾಗಿ ಆರೋಗ್ಯಕರ ಜೀವಕೋಶಗಳು ಅಸಹಜ ಕೋಶಗಳಾಗಿ ಬದಲಾದಾಗ ನೇಸಲ್ ಮತ್ತು ಪಾರಾನೇಸಲ್ ಟ್ಯೂಮರ್‌ಗಳು ರೂಪುಗೊಳ್ಳುತ್ತವೆ. ಆರೋಗ್ಯಕರ ಜೀವಕೋಶಗಳು ನಿಗದಿತ ವೇಗದಲ್ಲಿ ವೃದ್ಧಿಸುತ್ತವೆ ಮತ್ತು ಅಂತಿಮವಾಗಿ ನಿಗದಿತ ಸಮಯದಲ್ಲಿ ಸಾಯುತ್ತವೆ. ಅಸಹಜ ಜೀವಕೋಶಗಳು ಯಾವುದೇ ನಿಯಂತ್ರಣವಿಲ್ಲದೆ ಬೆಳೆಯುತ್ತವೆ ಮತ್ತು ವಿಭಜನೆಗೊಳ್ಳುತ್ತವೆ. ಈ ಜೀವಕೋಶಗಳು ಸಾಯುವುದಿಲ್ಲ ಮತ್ತು ಒಂದೇ ಕಡೆ ಸಂಗ್ರಹಗೊಂಡು ಟ್ಯೂಮರ್ ರೂಪವನ್ನು ಪಡೆಯುತ್ತವೆ.

ಅಸಹಜ ಜೀವಕೋಶಗಳು ಕ್ಯಾನ್ಸರ್ ಆಗಿದ್ದರೆ ಅವು ಸಮೀಪದ ಅಂಗಾಂಶಗಳಿಗೆ ದಾಳಿಯಿಡುತ್ತವೆ ಮತ್ತು ಶರೀರದ ಇತರ ಭಾಗಗಳಿಗೆ ಹರಡಲು ಮೂಲ ಟ್ಯೂಮರ್‌ನಿಂದ ಪ್ರತ್ಯೇಕಗೊಳ್ಳುತ್ತವೆ.

ಅಪಾಯದ ಅಂಶಗಳು

ಧೂಮ್ರಪಾನ ಮಾಡುವುದು ಮತ್ತು ಧೂಮ್ರಪಾನ ಮಾಡುತ್ತಿರುವವರ ಆಸುಪಾಸಿನಲ್ಲಿರುವುದು,ವಾಯು ಮಾಲಿನ್ಯವನ್ನು ಉಸಿರಾಡಿಸುವುದು,ಕೆಲಸದ ಸ್ಥಳಗಳಲ್ಲಿ ರಾಸಾಯನಿಕಗಳು ಮತ್ತು ಕಟ್ಟಿಗೆಯ ಧೂಳು,ಗಾಳಿಯಲ್ಲಿರುವ ರೋಗಕಾರಕಗಳಿಗೆ ದೀರ್ಘ ಸಮಯ ಒಡ್ಡಿಕೊಳ್ಳುವುದು,ಅಂಟು ವಸ್ತುಗಳ ಹೊಗೆ,ಉಜ್ಜುವ ಮದ್ಯಸಾರ ಮತ್ತು ಫಾರ್ಮಾಲ್ಡಿಹೈಡ್,ಹಿಟ್ಟು,ಕ್ರೋಮಿಯಂ ಹಾಗೂ ನಿಕೆಲ್‌ನ ಧೂಳುಗಳಂತಹ ಹಾನಿಕಾರಕಗಳಿಗೆ ದೀರ್ಘ ಕಾಲ ಒಡ್ಡಿಕೊಳ್ಳುವುದು,ಲೈಂಗಿಕವಾಗಿ ಹರಡುವ ಹ್ಯೂಮನ್ ಪಾಪಿಲೋಮಾವೈರಸ್ (ಎಚ್‌ಪಿವಿ)ನ ಸೋಂಕು ಇವು ನೇಸಲ್ ಮತ್ತು ಪಾರಾನೇಸಲ್ ಟ್ಯೂಮರ್‌ಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ.

ತಡೆಯುವುದು ಹೇಗೆ?

 ಧೂಮ್ರಪಾನ ವರ್ಜನೆ: ನೀವು ಧೂಮ್ರಪಾನಿಯಲ್ಲದಿದ್ದರೆ ಅದನ್ನು ಹೊಸದಾಗಿ ಆರಂಭಿಸಬೇಡಿ.ಧೂಮ್ರಪಾನಿಯಾಗಿದ್ದರೆ ಆ ಚಟವನ್ನು ಮೊದಲು ವರ್ಜಿಸಿ. ಸಾಧ್ಯವಾಗದಿದ್ದರೆ ವೈದ್ಯರ ಬಳಿ ಹೇಳಿಕೊಳ್ಳಿ. ಅವರು ಚಟವನ್ನು ಬಿಡಲು ಸಮಾಲೋಚನೆ ಮತ್ತು ಸೇವಿಸಬಹುದಾದ ಔಷಧಿಗಳ ಬಗ್ಗೆ ತಿಳಿಸುತ್ತಾರೆ.

ಕೆಲಸದ ಸ್ಥಳದಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಿ: ನೀವು ಕಾರ್ಖಾನೆಗಳು,ವರ್ಕಶಾಪ್‌ಗಳಂತಹ ಯಾವುದೇ ಕ್ಷಣದಲ್ಲಿ ಅಪಾಯಕ್ಕೆ ಗುರಿಯಾಗಬಹುದಾದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದರೆ ಹಾನಿಕಾರಕ ಹೊಗೆ ಮತ್ತು ಗಾಳಿಯಲ್ಲಿನ ಅನಾರೋಗ್ಯಕಾರಿ ಕಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಇತ್ಯಾದಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ.

ರೋಗನಿರ್ಧಾರ

ನೇಸಲ್ ಮತ್ತು ಪಾರಾನೇಸಲ್ ಟ್ಯೂಮರ್‌ಗಳನ್ನು ಖಚಿತಪಡಿಸಿಕೊಳ್ಳಲು ಕೆಲವು ಪರೀಕ್ಷೆಗಳು ಮತ್ತು ವಿಧಾನಗಳನ್ನು ನಡೆಸಲಾಗುತ್ತದೆ.

ವೈದ್ಯರು ಎಂಡೋಸ್ಕೋಪಿಕ್ ಕ್ಯಾಮೆರಾದ ಮೂಲಕ ಮೂಗಿನ ಕುಹರದಲ್ಲಿ ಮತ್ತು ಸೈನಸ್‌ಗಳಲ್ಲಿ ಪರಿಶೀಲನೆ ನಡೆಸುತ್ತಾರೆ. ಎಂಡೋಸ್ಕೋಪಿ ಸಂದರ್ಭದಲ್ಲಿ ವೈದ್ಯರು ಯಾವುದೇ ಅಸಹಜ ಬೆಳವಣಿಗೆಯನ್ನು ಗಮನಿಸಿದರೆ ಕೆಲವು ಜೀವಕೋಶಗಳ ಸ್ಯಾಂಪಲ್‌ಗಳನ್ನು ತೆಗೆದುಕೊಂಡು ಬಯಾಪ್ಸಿಗೊಳಪಡಿಸುತ್ತಾರೆ. ಮೂಗಿನ ಕುಹರ ಮತ್ತು ಸೈನಸ್‌ಗಳ ಚಿತ್ರಗಳನ್ನು ಸೃಷ್ಟಿಸಲು ಇಮೇಜಿಂಗ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಿಟಿ ಸ್ಕಾನ್ ಮತ್ತು ಎಂಆರ್‌ಐ ಇವುಗಳಲ್ಲಿ ಸೇರಿವೆ. ರೋಗಿಯ ನಿರ್ದಿಷ್ಟ ಸ್ಥಿತಿಯನ್ನು ಅವಲಂಬಿಸಿ ಹೆಚ್ಚುವರಿ ಪರೀಕ್ಷೆಗಳನ್ನು ಮತ್ತು ವಿಧಾನಗಳನ್ನು ವೈದ್ಯರು ಸೂಚಿಸಬಹುದು.

ಚಿಕಿತ್ಸೆ

ನೇಸಲ್ ಮತ್ತು ಪಾರಾನೇಸಲ್ ಟ್ಯೂಮರ್‌ಗಳು ಯಾವ ಜಾಗದಲ್ಲಿವೆ ಮತ್ತು ಯಾವ ವಿಧದ ಜೀವಕೋಶಗಳು ಅವುಗಳ ಸೃಷ್ಟಿಯಲ್ಲಿ ಭಾಗಿಯಾಗಿವೆ ಎನ್ನುವುದನ್ನು ಅವಲಂಬಿಸಿ ಚಿಕಿತ್ಸೆಯ ಬಗ್ಗೆ ವೈದ್ಯರು ನಿರ್ಧರಿಸುತ್ತಾರೆ. ಶಸ್ತ್ರಚಿಕಿತ್ಸೆ,ವಿಕಿರಣ ಚಿಕಿತ್ಸೆ,ಕಿಮೊಥೆರಪಿ,ಪಾಲಿಯೇಟಿವ್ ಕೇರ್ ಇತ್ಯಾದಿಗಳನ್ನು ಕೈಗೊಳ್ಳುವ ಮೂಲಕ ಈ ಟ್ಯೂಮರ್‌ಗಳನ್ನು ನಿವಾರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News