ನವೋದ್ಯಮಗಳೇ ಭಾರತದ ಆರ್ಥಿಕತೆಯನ್ನು ಮುನ್ನಡಸಲಿವೆ: ಕೇಂದ್ರ ಸಚಿವ ರಾಜನಾಥ್ ಸಿಂಗ್

Update: 2021-02-05 18:01 GMT

ಬೆಂಗಳೂರು, ಫೆ.5: ದೇಶದ ಯುವಕರಲ್ಲಿನ ಕೌಶಲ್ಯಗಳ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ನವೋದ್ಯಮಗಳ ತವರು ಎಂದು ಭಾರತವು ಗುರುತಿಸಿಕೊಳ್ಳುತ್ತಿದೆ. ಮುಂದಿನ ವರ್ಷಗಳಲ್ಲಿ ನವೋದ್ಯಮಗಳೆ ನಮ್ಮ ದೇಶದ ದೇಶದ ಆರ್ಥಿಕತೆಯನ್ನು ಮುನ್ನಡೆಸಬಹುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಶುಕ್ರವಾರ ಏರೋ ಇಂಡಿಯಾ 2021ರ ಅಂಗವಾಗಿ ಆಯೋಜಿಸಲಾಗಿದ್ದ ಸ್ಟಾರ್ಟ್ ಅಪ್ ಮಂಥನ(ನವೋದ್ಯಮಗಳ ಮಂಥನ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 41 ಸಾವಿರ ನವೋದ್ಯಮಗಳು ಈಗ 4.71 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಿವೆ. ನವೋದ್ಯಮಗಳಿಗೆ ಉತ್ತೇಜನ ನೀಡಲು ಸರಕಾರವು ಐಡೆಕ್ಸ್ ಸ್ಥಾಪನೆ ಮಾಡಿದೆ ಎಂದರು.

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ನವೋದ್ಯಮಗಳು ಅಭಿವೃದ್ಧಿಪಡಿಸುವ ಆವಿಷ್ಕಾರವನ್ನು ನಮ್ಮ ರಕ್ಷಣಾ ಇಲಾಖೆ ಖರೀದಿಸಲಿದೆ. ಈ ಮಂಥನ ವಾರ್ಷಿಕ ಸಮಾರಂಭದಲ್ಲಿ ರಕ್ಷಣಾ ಇಲಾಖೆಗೆ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳು ಲಭ್ಯವಾಗುತ್ತದೆ ಎಂದು ಅವರು ಹೇಳಿದರು.

ಈ ಮಂಥನ ಕಾರ್ಯಕ್ರಮದಲ್ಲಿ ಸುಮಾರು 1200ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಿದ್ದು, ಸುಮಾರು 60ಕ್ಕೂ ಹೆಚ್ಚು ನವೋದ್ಯಮಗಳಿಗೆ ಹೂಡಿಕೆ ಲಭ್ಯವಾಗಿದೆ. ಬಾಹ್ಯಾಕಾಶ ವಲಯದಲ್ಲಿ ಸುಮಾರು 300ಕ್ಕೂ ಹೆಚ್ಚು ನವೋದ್ಯಮಗಳು ಕೆಲಸ ಮಾಡುತ್ತಿದ್ದು, 10ಕ್ಕೂ ಹೆಚ್ಚು ಸಂಸ್ಥೆಗಳು 10 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಿವೆ ಎಂದು ಅವರು ಹೇಳಿದರು.

ದೇಶದ ಮೂರು ಸೇನಾ ತುಕಡಿಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News