ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ನಿರಂತರ ಪ್ರತಿಭಟನೆ: ರಾಮಲಿಂಗಾರೆಡ್ಡಿ ಎಚ್ಚರಿಕೆ

Update: 2021-02-05 18:21 GMT

ಬೆಂಗಳೂರು, ಫೆ.5: ಕೇಂದ್ರ ಸರಕಾರದ ಬೆಲೆ ಏರಿಕೆ, ಜನಿವಿರೋಧಿ ಕೃಷಿ ಹಾಗೂ ಕಾರ್ಮಿಕ ಕಾಯ್ದೆಗಳು ವಾಪಸ್ ಆಗುವವರೆಗೆ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದೆಂದು ಮಾಜಿ ಶಾಸಕ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಾರ್ಮಿಕ ವಿಭಾಗದ ವತಿಯಿಂದ ಕೇಂದ್ರ ಸರಕಾರ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಕಾಲಾವಧಿಯಲ್ಲಿ ಪೆಟ್ರೋಲ್ ಲೀಟರ್‍ಗೆ 65ರೂ., ಅನಿಲ ಗ್ಯಾಸ್ ದರ 350 ರೂ. ಇದ್ದಾಗ ಬಿಜೆಪಿ ನಾಯಕರು ಬಲವಾಗಿ ವಿರೋಧಿಸಿದ್ದರು. ಈಗ ಅವರದೇ ಕಾಲಾವಧಿಯಲ್ಲಿ ಪೆಟ್ರೋಲ್ 85ರೂ., ಗ್ಯಾಸ್ 750 ರೂ.ಮುಟ್ಟಿದೆ. ಆದರೂ ಈ ನಾಯಕರು ತುಟಿ ಬಿಚ್ಚದಿರುವುದು ನೋಡಿದರೆ ಯಾರು ಜನವಿರೋಧಿಗಳೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಎಂದು ಚಾಟಿ ಬೀಸಿದ್ದಾರೆ.

ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಮಾತನಾಡಿ, ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯದೆಲ್ಲಡೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನ ಕಾರ್ಯದರ್ಶಿ ಬಿ.ಆರ್. ದಿನೇಶ್ ಮಾತನಾಡಿ, ಪೆಟ್ರೋಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಬಡಕಾರ್ಮಿಕರು, ಕೂಲಿಗಾರರು, ಮಧ್ಯಮ ವರ್ಗದವರ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತದೆ. ಈಗಾಗಲೆ ಕೆಲಸವಿಲ್ಲದೆ ಬಡತನ ರೇಖೆಯಿಂದ ಕೆಳಗಿರುವವರ ಸಂಖ್ಯೆ ಹೆಚ್ಚಾಗಿದ್ದು, ಇಂತಹ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಕೇಂದ್ರ ಸರಕಾರದ ನೀತಿ ಅನುಗುಣವಾಗಿ ರಾಜ್ಯ ಸರಕಾರವು ಅದೇ ಧೋರಣೆ ಕೈಗೊಂಡಿದೆ ಎಂದು ಆಪಾದಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷರಾದ ಕೆ.ಸಿ.ಹರಿಣಿಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲರಾಜ್‍ಗೌಡ, ಜಿಲ್ಲಾಧ್ಯಕ್ಷರಾದ ಸತ್ಯ ನಾರಾಯಣ್, ತ್ರಿಭುವನ್ ಗೌಡ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News