ಏನಿದು ಟೆನಿಸ್ ಎಲ್‌ಬೋ?

Update: 2021-02-07 14:16 GMT

ಟೆನಿಸ್ ಎಲ್‌ಬೋ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ,ಆದರೆ ವಾಸ್ತವದಲ್ಲಿ ಹಾಗೆಂದರೆ ಏನು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಮಣಿಗಂಟು ಮತ್ತು ತೋಳಿನ ಪುನರಾವರ್ತಿತ ಚಲನೆಗಳಿಂದ ಮೊಣಕೈ ಸ್ನಾಯುರಜ್ಜುಗಳು ಹೆಚ್ಚಿನ ಒತ್ತಡಕ್ಕೊಳಗಾಗಿ ಉಂಟಾಗುವ ಯಾತನಾಮಯ ಸ್ಥಿತಿಯನ್ನು ಟೆನಿಸ್ ಎಲ್‌ಬೋ ಅಥವಾ ಲ್ಯಾಟರಲ್ ಎಪಿಕಾಂಡಿಲೈಟಿಸ್ ಎಂದು ಕರೆಯಲಾಗುತ್ತದೆ.

ಹೆಸರು ಟೆನಿಸ್ ಎಲ್‌ಬೋ ಎಂದಿದ್ದರೂ ಈ ಸಮಸ್ಯೆಯು ಕ್ರೀಡಾಪಟುಗಳನ್ನಷ್ಟೇ ಕಾಡುವುದಿಲ್ಲ. ಪ್ಲಂಬರ್‌ಗಳು, ಪೇಂಟರ್‌ಗಳು, ಬಡಗಿಗಳು ಮತ್ತು ಕಸಾಯಿಗಳು ಸೇರಿದಂತೆ ತಮ್ಮ ವೃತ್ತಿಗಳಲ್ಲಿ ಕೈಗಳ ಚಲನವಲನಗಳೇ ಪ್ರಮುಖವಾಗಿರುವ ವ್ಯಕ್ತಿಗಳೂ ಈ ಸಮಸ್ಯೆಗೆ ಗುರಿಯಾಗುತ್ತಾರೆ.

ಟೆನಿಸ್ ಎಲ್‌ಬೋದ ನೋವು ಪ್ರಮುಖವಾಗಿ ನಮ್ಮ ಮುಂಗೈ ಸ್ನಾಯುಗಳು ಮೊಣಗಂಟಿನ ಹೊರಗಿನ ಎಲುಬಿನ ಗಂಟಿನೊಂದಿಗೆ ಜೋಡಣೆಗೊಂಡಿರುವಲ್ಲಿ ಕಾಣಿಸಿಕೊಳ್ಳುತ್ತದೆ. ನೋವು ಮುಂಗೈ ಮತ್ತು ಮಣಿಗಂಟಿಗೂ ಹರಡಬಹುದು.

ಹೆಚ್ಚಿನ ಪ್ರಕರಣಗಳಲ್ಲಿ ವಿಶ್ರಾಂತಿ ಮತ್ತು ನೋವು ನಿವಾರಕಗಳು ಟೆನಿಸ್ ಎಲ್‌ಬೋದಿಂದ ಮುಕ್ತಿ ನೀಡುತ್ತವೆ. ಆದರೆ ಸಾಂಪ್ರದಾಯಿಕ ಚಿಕಿತ್ಸೆಗಳು ಫಲ ನೀಡದಿದ್ದರೆ ಮತ್ತು ಲಕ್ಷಣಗಳು ಉಲ್ಬಣಗೊಂಡರೆ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಸೂಚಿಸಬಹುದು.

ಲಕ್ಷಣಗಳು

ಟೆನಿಸ್ ಎಲ್‌ಬೋದ ನೋವು ಮೊಣಕೈ ಹೊರಭಾಗದಿಂದ ಮುಂಗೈ ಮತ್ತು ಮಣಿಗಂಟಿಗೆ ಹರಡಬಹುದು. ನೋವು ಮತ್ತು ನಿಶ್ಶಕ್ತಿಯಿಂದಾಗಿ ಹಸ್ತಲಾಘವ,ವಸ್ತುಗಳನ್ನು ಹಿಡಿದುಕೊಳ್ಳುವುದು,ಡೋರ್‌ನಾಬ್ ತಿರುಗಿಸುವುದು,ಚಹಾದ ಕಪ್‌ನ್ನು ಕೈಯಲ್ಲಿ ಹಿಡಿದುಕೊಳ್ಳುವುದು ಇತ್ಯಾದಿಗಳು ಕಷ್ಟವಾಗಬಹುದು.

ವೈದ್ಯರನ್ನು ಯಾವಾಗ ಭೇಟಿಯಾಗಬೇಕು? ವಿಶ್ರಾಂತಿ,ಮಂಜುಗಡ್ಡೆ ಬಳಕೆ,ನೋವು ನಿವಾರಕಗಳ ಸೇವನೆಯಂತಹ ಸ್ವ ವೈದ್ಯಕೀಯವು ನೋವನ್ನು ಕಡಿಮೆ ಮಾಡದಿದ್ದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

ಕಾರಣಗಳು

 ಟೆನಿಸ್ ಎಲ್‌ಬೋ ಕೈಗಳ ಅತಿಯಾದ ಬಳಕೆ ಮತ್ತು ಸ್ನಾಯು ಬಿಗಿತವನ್ನುಂಟು ಮಾಡುವ ಗಾಯದಿಂದ ಉಂಟಾಗುತ್ತದೆ. ಕೈ ಮತ್ತು ಮಣಿಗಂಟನ್ನು ಬಳಸಲು ಮತ್ತು ಎತ್ತಲು ಬಳಕೆಯಾಗುವ ಮುಂಗೈ ಸ್ನಾಯುಗಳು ಪದೇ ಪದೇ ಸಂಕುಚಿತಗೊಳ್ಳುವುದು ಟೆನಿಸ್ ಎಲ್‌ಬೋ ಉಂಟಾಗಲು ಕಾರಣವಾಗಿದೆ. ಪುನರಾವರ್ತಿತ ಚಲನೆಗಳು ಮತ್ತು ಅಂಗಾಂಶಗಳ ಮೇಲೆ ಒತ್ತಡದಿಂದಾಗಿ ಮುಂಗೈ ಸ್ನಾಯುಗಳನ್ನು ಮೊಣಕೈನ ಹೊರಗಿನ ಎಲುಬಿನ ಗಂಟಿನೊಂದಿಗೆ ಜೋಡಿಸಿರುವ ಸ್ನಾಯುರಜ್ಜುಗಳು ಹರಿಯಬಹುದು.

ಹೆಸರೇ ಸೂಚಿಸುವಂತೆ ಟೆನಿಸ್ ಆಡುವುದು,ವಿಶೇಷವಾಗಿ ಸರಿಯಾದ ತಾಂತ್ರಿಕತೆ ಗೊತ್ತಿಲ್ಲದೆ ಪದೇ ಪದೇ ಬ್ಯಾಕ್‌ಹ್ಯಾಂಡ್ ಸ್ಟ್ರೋಕ್‌ಗಳನ್ನು ಬಳಸುವುದು ಟೆನಿಸ್ ಎಲ್‌ಬೋಕ್ಕೆ ಸಂಭಾವ್ಯ ಕಾರಣಗಳಲ್ಲೊಂದಾಗಿದೆ. ಆದರೆ ಪ್ಲಂಬಿಂಗ್ ಸಾಧನಗಳ ಬಳಕೆ,ಪೇಂಟಿಂಗ್,ಸ್ಕ್ರೂ ಡ್ರೈವರ್ ಬಳಕೆ,ಕಸಾಯಿಖಾನೆಗಳಲ್ಲಿ ಮಾಂಸವನ್ನು ಕೊಚ್ಚುವುದು,ಕಂಪ್ಯೂಟರ್ ಮೌಸ್‌ನ ಪದೇ ಪದೇ ಬಳಕೆ ಸೇರಿದಂತೆ ತೋಳುಗಳ ಇತರ ಹಲವಾರು ಸಾಮಾನ್ಯ ಚಲನೆಗಳೂ ಟೆನಿಸ್ ಎಲ್‌ಬೋ ಅನ್ನು ಉಂಟು ಮಾಡುತ್ತವೆ.

ಅಪಾಯದ ಅಂಶಗಳು

ವಯಸ್ಸು: ಟೆನಿಸ್ ಎಲ್‌ಬೋ ಎಲ್ಲ ವಯೋಮಾನದವರನ್ನೂ ಕಾಡುತ್ತದೆಯಾದರೂ,30ರಿಂದ 50 ವರ್ಷ ಪ್ರಾಯದ ವ್ಯಕ್ತಿಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ವೃತ್ತಿ: ಮಣಿಗಂಟು ಮತ್ತು ತೋಳಿನ ಚಲನೆಗಳು ಪುನರಾವರ್ತನೆಗೊಳ್ಳುವ ವೃತ್ತಿಯಲ್ಲಿರುವವರಲ್ಲಿ ಟೆನಿಸ್ ಎಲ್‌ಬೋ ಕಾಣಿಸಿಕೊಳ್ಳುವ ಸಾಧ್ಯತೆಯು ಹೆಚ್ಚು. ಉದಾಹರಣೆಗೆ ಪ್ಲಂಬರ್‌ಗಳು,ಪೇಂಟರ್‌ಗಳು,ಬಡಗಿಗಳು,ಕಸಾಯಿಗಳು ಮತ್ತು ಬಾಣಸಿಗರು ಈ ಗುಂಪಿಗೆ ಸೇರುತ್ತಾರೆ.

 ಕೆಲವು ಕ್ರೀಡೆಗಳು: ರ‍್ಯಾಕೆಟ್‌ಗಳು ಬಳಕೆಯಾಗುವ ಕ್ರೀಡೆಗಳಲ್ಲಿ,ನಿರ್ದಿಷ್ಟವಾಗಿ ಆಟಗಾರರಿಗೆ ಹೊಡೆತಗಳನ್ನು ಬಾರಿಸುವ ಸರಿಯಾದ ತಾಂತ್ರಿಕ ಜ್ಞಾನವಿಲ್ಲದಿದ್ದಾಗ ಈ ಸಮಸ್ಯೆಗೆ ಗುರಿಯಾಗುವ ಅಪಾಯವು ಹೆಚ್ಚಾಗಿರುತ್ತದೆ.

ಚಿಕಿತ್ಸೆ

 ಟೆನಿಸ್ ಎಲ್‌ಬೋ ಹೆಚ್ಚಿನ ಪ್ರಕರಣಗಳಲ್ಲಿ ತನ್ನಿಂತಾನೇ ಗುಣವಾಗುತ್ತದೆ. ಆದರೆ ಸ್ವ ಪರಿಹಾರ ಕ್ರಮಗಳು ಮತ್ತು ನೋವು ನಿವಾರಕಗಳ ಸೇವನೆಯಿಂದ ಗುಣವಾಗದಿದ್ದರೆ ನಿಮ್ಮ ವೈದ್ಯರು ಫಿಜಿಯೊಥೆರಪಿಯನ್ನು ಸೂಚಿಸಬಹುದು. ಪ್ರಕರಣ ಗಂಭೀರವಾಗಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News