×
Ad

ಎಸ್ಟಿ ಸೇರ್ಪಡೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಕುರುಬ ಸಮುದಾಯದಿಂದ ಬೃಹತ್ ಸಮಾವೇಶ

Update: 2021-02-07 20:13 IST

ಬೆಂಗಳೂರು, ಫೆ.7: ರಾಜ್ಯದಲ್ಲಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಸೇರಿಸುವಂತೆ ಒತ್ತಾಯಿಸಿ ಕಾಗಿನೆಲೆಯ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಮಂದಿ ಕುರುಬರು ರಾಜಧಾನಿಯಲ್ಲಿ ಬೃಹತ್ ಸಮಾವೇಶದ ಮೂಲಕ ಬಲ ಪ್ರದರ್ಶನ ನಡೆಸಿದರು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶವನ್ನು ಮುಖಂಡರು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ನೀಡಿದರು.

ರವಿವಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವಿರಾಟ ಪ್ರದರ್ಶನ ತೋರಿದ ಕುರುಬ ಸಮುದಾಯ, ನಮ್ಮನ್ನು ಎಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.

ಜ.15ರಂದು ಪಾದಯಾತ್ರೆ ಆರಂಭಿಸಿ ಬೆಂಗಳೂರು ತಲುಪಿದ್ದ ಕುರುಬರ ಎಸ್‍ಟಿ ಹೋರಾಟ ಸಮಿತಿಯು, ರಾಜ್ಯದ ಉದ್ದಗಲಕ್ಕೂ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ)ಕ್ಕೆ ಸೇರಿಸುವ ಕುರಿತು ಜನಜಾಗೃತಿ ಮೂಡಿಸಿತ್ತು. ಇಂದು ಸ್ವಾಮೀಜಿಗಳು ಮತ್ತು ರಾಜಕೀಯ ನಾಯಕರು, ಬೃಹತ್‍ ಸಮಾವೇಶದ ಮೂಲಕ ಶೀಘ್ರವೇ ಎಸ್‍ಟಿ ಪಂಗಡಕ್ಕೆ ಸೇರಿಸುವಂತೆ ಪ್ರಬಲ ಹಕ್ಕೊತ್ತಾಯ ಮಂಡಿಸಿದರು.

‘ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ' ಘೋಷವಾಕ್ಯದಡಿ ನಡೆದ ಬೃಹತ್ ಪಾದಯಾತ್ರೆ ಮತ್ತು ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವುದು ಕುರುಬ ಸಮುದಾಯದ ನಾಯಕರಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಿದೆ.

ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬೃಹತ್‍ ಪಾದಯಾತ್ರೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸೇರಿ ಸಮುದಾಯದ ವಿವಿಧಪಕ್ಷಗಳ ನಾಯಕರು ಪಾಲ್ಗೊಳ್ಳುವ ಮೂಲಕ ಜನಾಂಗದ ವಿಷಯದಲ್ಲಿ ನಾವೆಲ್ಲ ಒಂದು ಎನ್ನುವ ಒಗ್ಗಟ್ಟು ಪ್ರದರ್ಶಿಸಿದರು. ಈ ಮೂಲಕ ಶೀಘ್ರವೇ ಕುರುಬ ಸಮುದಾಯಕ್ಕೆ ಎಸ್‍ಟಿ ಪಂಗಡ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ.

ಸಮಾವೇಶದಲ್ಲಿ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮಿ, ಈಶ್ವರಾನಂದ ಸ್ವಾಮಿ, ಸಿದ್ದರಾಮಾನಂದ ಸ್ವಾಮಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ಎಂಟಿಬಿ ನಾಗರಾಜ್, ಆರ್.ಶಂಕರ್, ಮಾಜಿ ಸಚಿವ, ಮಾಜಿ ಸಂಸದ ಸಿ.ಎಚ್ ವಿಜಯಶಂಕರ್, ಮಾಜಿ ಸಚಿವರುಗಳಾದ ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ, ಬಂಡೆಪ್ಪ ಕಾಶಂಪುರ, ಶಾಸಕ ರಘುನಾಥ್ ರಾವ್ ಮಲ್ಕಾಪೂರೆ, ಸಮಿತಿಯ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಶಾಂತಪ್ಪ, ಖಜಾಂಚಿಗಳಾದ ಬಳಗಾವಿ, ಕೆ.ಈ.ಕಾಂತೇಶ್, ಎಸ್.ಪುಟ್ಟಸ್ವಾಮಿ,ಆನೇಕಲ್‍ ದೊಡ್ಡಯ್ಯ, ಜೀವೇಶ್ವರಿ ರಾಮಕೃಷ್ಣ, ಮಾಜಿ ಶಾಸಕ ಹುಲಿನಾಯ್ಕರ್, ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ಪ್ರತಿನಿಧಿಗಳು ಭಾಗವಹಿಸಿದ್ದರು.

ನಿರಂತರವಾಗಿ ಸ್ವಾಮೀಜಿಗಳ ಜತೆ ಇರುತ್ತೇವೆ

‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಸೇರಿಸುವಂತೆ ಒತ್ತಾಯಿಸಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಜತೆಗೆ ನಾವು ನಿರಂತರವಾಗಿ ಇರುತ್ತೇವೆ. ಕಾಂಗ್ರೆಸ್ ಪಕ್ಷ ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸಲು ಯಾವ ರೀತಿಯಿಂದಲೂ ಶ್ರಮಿಸಿಲ್ಲ. ಇಂದು ಸುನಾಮಿಯಂತೆ ಕುರುಬ ಜನಾಂಗದವರು ಬೆಂಗಳೂರಿಗೆ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಿದ್ದಾರೆ.’

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ನಾವು ಬ್ಲಾಕ್ ಮೇಲ್ ಮಾಡುವವರು ಅಲ್ಲ

‘ಮುಖ್ಯಮಂತ್ರಿಗಳೆ ನಾವು ಬೇರೆ ಸ್ವಾಮಿಗಳಂತೆ ನಾವು ಕೆಟ್ಟದಾಗಿ ಮಾತನಾಡುವವರು, ಬ್ಲಾಕ್‍ಮೇಲ್ ಮಾಡುವವರು ಅಲ್ಲ. ನಾವು ಪ್ರೀತಿಯಿಂದ ಬೇಡುತ್ತಿದ್ದೇವೆ. ನಾಡ ದೊರೆಯಾಗಿ ಅದೇ ಪ್ರೀತಿಯಿಂದ ಕೇಂದ್ರ ಸರಕಾರಕ್ಕೆ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಶಿಫಾರಸ್ಸು ಮಾಡಿ. ನಾವು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಎಸ್ಟಿ ಹಕ್ಕು ಪಡೆಯುತ್ತೇವೆ. ನಮ್ಮ ಹೋರಾಟ ಯಾರ ಪರ, ಯಾರ ವಿರುದ್ಧವೂ ಅಲ್ಲ. ಯಾವ ಪಕ್ಷದ ಪರವೂ ಯಾವ ಪಕ್ಷದ ವಿರುದ್ಧವೂ ಅಲ್ಲ, ಕೇವಲ ಎಸ್ಟಿ ಹಕ್ಕು ಪಡೆಯಲಷ್ಟೇ ನಮ್ಮ ಹೋರಾಟ’

-ನಿರಂಜನಾನಂದಪುರಿ ಸ್ವಾಮಿ, ಕಾಗಿನೆಲೆಯ ಕನಕ ಪೀಠ

ಮಾಜಿ ಸಿಎಂ ಬರದಿರುವುದು ನೋವು ತಂದಿದೆ

‘ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಲು ಅಗತ್ಯವಾದ ಎಲ್ಲ ಪೂರಕ ಅಂಶಗಳನ್ನು ಹೊಂದಿರುವುದರಿಂದ ಯಾವ ಕುಲಶಾಸ್ತ್ರೀಯ ಅಧ್ಯಯನದ ಅಗತ್ಯ ಇಲ್ಲದೆ ರಾಜ್ಯ ಸರಕಾರ ಕೂಡಲೇ ಕೇಂದ್ರ ಸರಕಾರಕ್ಕ್ಕೆ ಶಿಫಾರಸ್ಸು ಮಾಡಬೇಕು. ಕೇಂದ್ರ ಅದನ್ನು ಒಪ್ಪಿ ಎಸ್ಟಿ ಪಟ್ಟಿಗೆ ಸೇರ್ಪಡೆಮಾಡಬೇಕು. ಕುರುಬ ಸಮಾಜ ಯಾರನ್ನು ತಮ್ಮತನು, ಮನ, ಧನ ಅರ್ಪಿಸಿ ಮುಖ್ಯಮಂತ್ರಿ ಮಾಡಿತೊ ಅವರು ಸಮಾವೇಶಕ್ಕೆ ಬಾರದಿರುವು ಅತೀವ ನೋವು ತಂದಿದೆ. ಕುರುಬರು ಎಸ್ಟಿ ಪಟ್ಟಿಗೆ ಸೇರಬೇಕೆನ್ನುವುದು ನಮ್ಮ ಹಕ್ಕೊತ್ತಾಯ.’

-ಎಚ್.ವಿಶ್ವನಾಥ್, ಮಾಜಿ ಸಚಿವ-ಮೇಲ್ಮನೆ ಸದಸ್ಯ

ಬೇರೆ ರಾಜ್ಯಗಳಲ್ಲಿ ಎಸ್‍ಟಿಗೆ ಸೇರಿಸಲಾಗಿದೆ

‘ಕುರುಬರ ಸಮನಾಂತರ ಪದಗಳನ್ನು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಎಸ್‍ಟಿ ಪಟ್ಟಿಗೆ ಸೇರಿಸಲಾಗಿದೆ. ಅದನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೂ ವಿಸ್ತರಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕುರುಬರನ್ನು ಎಸ್‍ಟಿ ಪಟ್ಟಿಗೆ ಸೇರಿಸುವಂತೆ ಶಿಫಾರಸ್ಸು ಮಾಡಬೇಕು. ರಾಜಕೀಯವಾಗಿ ಉನ್ನತ ಸ್ಥಾನ ಪಡೆದ ನಮ್ಮ ಸಮಾಜದ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಕುರುಬರು ಇನ್ನೂ ಎಸ್ಟಿ ಪಟ್ಟಿಗೆ ಸೇರಲಾಗಿಲ್ಲ. ಬ್ರಿಟಿಷರ ಕಾಲದಲ್ಲಿ ಎಸ್ಟಿ ಪಟ್ಟಿಯಲ್ಲಿದ್ದ ಕುರುಬರನ್ನು ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ಎಸ್ಟಿ ಪಟ್ಟಿಗೆ ಸೇರಿಸಬೇಕಿತ್ತು.’

-ಕೆ.ವಿರೂಪಾಕ್ಷಪ್ಪ, ಕುರುಬರ ಎಸ್ಟಿ ಹೋರಾಟ ಸಮಿತಿಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News