'ಕಳವಾಗಿದ್ದ' ಕೆಎಸ್ಸಾರ್ಟಿಸಿ ಬಸ್ 26 ಕಿಮೀ ದೂರದ ಪ್ರದೇಶದಲ್ಲಿ ಪತ್ತೆ!

Update: 2021-02-08 13:20 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ : ಕೊಟ್ಟರಕರ ಮುನಿಸಿಪಾಲಿಟಿ ಕಚೇರಿ ಸಮೀಪ ನಿಲ್ಲಿಸಲಾಗಿದ್ದ ಕೆಎಸ್ಸಾರ್ಟಿಸಿ ಬಸ್ ಇಂದು ಬೆಳಿಗ್ಗೆ  ನಾಪತ್ತೆಯಾದ ಕೆಲವೇ ಗಂಟೆಗಳಲ್ಲಿ  ಸುಮಾರು 26 ಕಿಮೀ ದೂರದ ಪರಿಪ್ಪಳ್ಳಿ ಎಂಬಲ್ಲಿ  ಪತ್ತೆಯಾಗಿದೆ.

ನಿಗಮದ ಡಿಪೋದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಸಾಮಾನ್ಯವಾಗಿ ರಾತ್ರಿ ಹೆದ್ದಾರಿ ಬಳಿಯಲ್ಲಿ ಯಾವತ್ತಿನಂತೆಯೇ ನಿಲ್ಲಿಸಿ ತೆರಳಿದ್ದ ಚಾಲಕ ಇಂದು  ಬೆಳಿಗ್ಗೆ ಆಗಮಿಸಿದಾಗ ಬಸ್ ಅಲ್ಲಿರಲಿಲ್ಲ. ಸಹೋದ್ಯೋಗಿಗಳಲ್ಲಿ ಯಾರಾದರೂ ಬಸ್ಸನ್ನು ಕೊಂಡು ಹೋಗಿರಬೇಕೆಂದು ತಿಳಿದು ಡಿಪೋಗೆ ಕರೆ ಮಾಡಿದರೆ ಯಾರೂ ಬಸ್ಸನ್ನು ಅಲ್ಲಿಗೆ ಕೊಂಡು ಹೋಗಿರಲಿಲ್ಲ ಎಂದು ತಿಳಿದು ಬಂದಿತ್ತು. ಎಲ್ಲಾ ಚಾಲಕರಿಗೆ ಕರೆ ಮಾಡಿ ಅಧಿಕಾರಿಗಳು ವಿಚಾರಿಸಿದರೂ ಯಾರೊಬ್ಬರಿಗೂ ಬಸ್ ಎಲ್ಲಿದೆ ಎಂದು ತಿಳಿದಿರಲಿಲ್ಲ. ಕೊನೆಗೆ ಕೊಟ್ಟರಕರ ಪೊಲೀಸರಿಗೆ ದೂರು  ನೀಡಲಾಗಿತ್ತು. ಪೊಲೀಸ್ ತನಿಖೆ ಮುಂದುವರಿದಂತೆ ಬಸ್ ಪರಿಪ್ಪಳ್ಳಿಯಲ್ಲಿದೆ ಎಂಬ ಸುದ್ದಿ ದೊರಕಿತ್ತು.

ಬಸ್ಸನ್ನು ಅಲ್ಲಿಗೆ ಯಾರು ಕೊಂಡು ಹೋದರು ಎಂದು ತಿಳಿಯುವ ಸಲುವಾಗಿ ಪೊಲೀಸರು ಸೀಸಿಟಿವಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಆಗಸ್ಟ್ 2017ರಲ್ಲಿ ಕೂಡ ಕೊಲ್ಲಂ ಡಿಪೋದಿಂದ ಬಸ್ ಒಂದು ಕಳ್ಳತನವಾಗಿತ್ತು. ಯುವಕನೊಬ್ಬ ಈ ಬಸ್ಸನ್ನು ನೇರವಾಗಿ ತನ್ನ ಊರಾದ ಅಟ್ಟಿಂಗಲ್ ಎಂಬಲ್ಲಿಗೆ ಕೊಂಡೊಯ್ಯಲು ಇಚ್ಛಿಸಿದ್ದರೂ ವಾಹನ ವಿದ್ಯುತ್ ಕಂಬಕ್ಕೆ ಬಡಿದು ಆತನ ಯೋಜನೆಯೆಲ್ಲಾ ತಲೆಕೆಳಗಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News