480 ಕಡತ, 23 ಬಿಬಿಎಂಪಿ ಹಿರಿಯ ಅಧಿಕಾರಿಗಳ ಸೀಲು ಪತ್ತೆ!

Update: 2021-02-08 17:37 GMT

ಬೆಂಗಳೂರು, ಫೆ.8: ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆ ಮೇಲಿನ ದಾಳಿ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಎಸಿಬಿ ಅಧಿಕಾರಿಗಳು, ಆರೋಪಿ ಬಳಿಯಿದ್ದ ಲಕ್ಷಾಂತರ ರೂ. ಮೌಲ್ಯದ ನಗದು, 480ಕ್ಕೂ ಹೆಚ್ಚು ಕಡತಗಳನ್ನು ಜಪ್ತಿ ಮಾಡಿದ್ದಾರೆ.

ದೇವೇಂದ್ರಪ್ಪನ ಮನೆ ಮೇಲೆ ದಾಳಿ ಮಾಡಿ ವಿಚಾರಣೆ ನಡೆಸಿದಾಗ, ಆತನ ಕಾರಿನಲ್ಲಿ ಬಿಬಿಎಂಪಿ ನಗರ ಯೋಜನೆ ಇಲಾಖೆಗೆ ಸೇರಿದ 50ಕ್ಕೂ ಹೆಚ್ಚು ಕಡತಗಳು, ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿನಲ್ಲಿದ್ದ ಸೀಲ್, ಕಚೇರಿಯ ಸೀಲ್ ಹಾಗೂ ದಾಖಲೆಯಿಲ್ಲದ 7.40 ಲಕ್ಷ ರೂ. ನಗದು ಪತ್ತೆಯಾಗಿದೆ.

ಆರೋಪಿ ಮನೆಯಿಂದ ಇದುವರೆಗೆ ಒಟ್ಟು 27.40 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆರೋಪಿ ಮನೆ ಶೋಧ ನಡೆಸಿದಾಗ, ಆತನ ಬಳಿ ಬೆಲೆ ಬಾಳುವ ಕಾರುಗಳು, ವಿವಿಧ ಬ್ಯಾಂಕ್ ಅಕೌಂಟುಗಳು, ನಿಶ್ಚಿತ ಠೇವಣಿ (ಎಫ್.ಡಿ) ಹಣ, ಸುಮಾರು 120 ಲೀಟರ್ ಮದ್ಯದ ಬಾಟಲಿ ಹಾಗೂ ಬಿಬಿಎಂಪಿ ನಗರ ಯೋಜನೆ ವಿಭಾಗಕ್ಕೆ ಸೇರಿದ ಸುಮಾರು 480ಕ್ಕೂ ಹೆಚ್ಚು ಕಡತಗಳು ಮತ್ತು 23 ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿದ್ದ ಸೀಲ್, ಕಚೇರಿಯ ಸೀಲ್ ಸಿಕ್ಕಿವೆ ಎಂದು ಎಸಿಬಿ ತಿಳಿಸಿದೆ.

ಆರೋಪಿ ಬಳಿಯಿದ್ದ ಬೆಲೆ ಬಾಳುವ ಕಾರುಗಳು, ವಿವಿಧ ಬ್ಯಾಂಕ್ ಅಕೌಂಟ್, ಎಫ್.ಡಿ ಠೇವಣಿ ಹಾಗೂ ದಾಖಲೆಯಿಲ್ಲದ ಹಣದ ಕುರಿತು ಪ್ರತ್ಯೇಕವಾಗಿ ತನಿಖೆ ಕೈಗೊಳ್ಳಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?: ನಗರದ ಖಾಸಗಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ದೂರುದಾರರು, ಹುಳಿಮಾವಿನ ಖಾಸಗಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಎಡಿಟಿಪಿ ಕಚೇರಿಗೆ ನಕ್ಷೆ ಮಂಜೂರಾತಿ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದು ಕಟ್ಟಡ ನಿರ್ಮಿಸಿದ್ದರು.  ಬಳಿಕ ಪೂರ್ಣಗೊಂಡ ಕಾಮಗಾರಿಗೆ ಒ.ಸಿ ಪಡೆಯಲು ಎಡಿಟಿಪಿ ದೇವೇಂದ್ರಪ್ಪ ಬಳಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ 40 ಲಕ್ಷ ರೂ. ಹಣ ನೀಡಿದರೆ ಒ.ಸಿ ನೀಡುವುದಾಗಿ ದೂರುದಾರರಿಗೆ ದೇವೇಂದ್ರಪ್ಪ ಹೇಳಿದ್ದನಂತೆ. ಈ ಸಂಬಂಧ ಕಟ್ಟಡ ಮಾಲಕ ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಎಸಿಬಿ ಅಧಿಕಾರಿಗಳು, 20 ಲಕ್ಷ ರೂ. ಲಂಚ ಪಡೆದುಕೊಳ್ಳುವಾಗ ದಾಳಿ ನಡೆಸಿ ಪ್ರಕರಣ ಭೇದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News