ಈ ವರ್ಷ ಎರಡು ಸಲ ನೀಟ್:ಆರೋಗ್ಯ ಸಚಿವಾಲಯದ ಒಪ್ಪಿಗೆ

Update: 2021-02-08 19:12 GMT

ಹೊಸದಿಲ್ಲಿ,ಫೆ.8: ಈ ವರ್ಷ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯನ್ನು ನಡೆಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಒಪ್ಪಿಗೆ ನೀಡಿದ್ದು, ಇದರೊಂದಿಗೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ-ಮೇನ್)ಯ ಮಾದರಿಯಲ್ಲಿ ಈ ಪರೀಕ್ಷೆಗಳನ್ನು ನಡೆಸಲು ಮಾರ್ಗವು ಸುಗಮಗೊಂಡಿದೆ.

ಆದರೆ ವೈದ್ಯಕೀಯ,ದಂತವೈದ್ಯಕೀಯ ಮತ್ತು ಇತರ ಸಂಬಂಧಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್‌ನ ಪರೀಕ್ಷಾ ವೇಳಾಪಟ್ಟಿ ಇನ್ನೂ ಅಂತಿಮಗೊಳ್ಳಬೇಕಿದೆ.

 ಶಿಕ್ಷಣ ಸಚಿವಾಲಯ ಮತ್ತು ಕಳೆದ ವರ್ಷದಿಂದ ನೀಟ್ ಪರೀಕ್ಷೆಯನ್ನು ನಡೆಸುತ್ತಿರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ)ಯ ಅಧಿಕಾರಿಗಳೊಂದಿಗೆ ತಾವು ಇತ್ತೀಚಿಗೆ ನಡೆಸಿದ ಸಭೆಯಲ್ಲಿ ಪರೀಕ್ಷೆಯ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಸಂಖ್ಯೆಯ ನೀಟ್ ಆಕಾಂಕ್ಷಿಗಳು ಆನ್‌ಲೈನ್ ಪರೀಕ್ಷೆಗೆ ಹಾಜರಾಗಲು ಇನ್ನೂ ಸಿದ್ಧರಾಗಿಲ್ಲ ಎಂದು ಸಭೆಯಲ್ಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು,ಈ ವರ್ಷ ಪರೀಕ್ಷೆಯನ್ನು ಎರಡು ಸಲ ನಡೆಸಲು ಸಹಮತ ಮೂಡಿಬಂದಿದೆ ಎಂದು ಆರೋಗ್ಯ ಸಚಿವಾಲಯದ ವೈದ್ಯಕೀಯ ವಿಭಾಗದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಎರಡು ಸಲ ಪರೀಕ್ಷೆ ನಡೆಸುವ ವ್ಯವಸ್ಥೆಯು ವಿದ್ಯಾಥಿಗಳು ಎರಡೂ ಸಲ ಪರೀಕ್ಷೆಗಳಿಗೆ ಹಾಜರಾದರೆ ಎರಡರಲ್ಲಿಯ ಅತ್ಯುತ್ತಮ ಅಂಕಗಳ ಆಧಾರದಲ್ಲಿ ರ್ಯಾಂಕ್‌ಗಳನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ. ಕಳೆದ ವರ್ಷದಿಂದ ಜೆಇಇ (ಮೇನ್)ಯಲ್ಲಿಯೂ ಇದೇ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ತಮ್ಮ ಅಂಕಗಳನ್ನು ಉತ್ತಮಗೊಳಿಸಿಕೊಳ್ಳಲು ಅವರಿಗೆ ಅವಕಾಶ ನೀಡುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಎನ್‌ಟಿಎ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News