ಶಶಿ ತರೂರ್, 6 ಪತ್ರಕರ್ತರ ಬಂಧನಕ್ಕೆ ತಡೆ ವಿಧಿಸಿದ ಸುಪ್ರೀಂಕೋರ್ಟ್

Update: 2021-02-09 07:44 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್ಯಾಲಿಯ ಬಳಿಕ ಉಂಟಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಕ್ಕೆ ಕೇಸ್ ಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಆರು ಪತ್ರಕರ್ತರನ್ನು ಯಾವುದೆ ತನಿಖಾ ಸಂಸ್ಥೆಗಳು ಬಂಧಿಸದಂತೆ ಸುಪ್ರೀಂಕೋರ್ಟ್ ಇಂದು ತಡೆ ಹೇರಿದೆ. ಈ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಬಳಿಕ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ದಿಲ್ಲಿ ಪೊಲೀಸರ ಪರ ನ್ಯಾಯಾಲಯದಲ್ಲಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿದಾರರಿಗೆ ಯಾವುದೇ ಪರಿಹಾರವನ್ನು ನೀಡಲು ವಿರೋಧ ವ್ಯಕ್ತಪಡಿಸಿದ್ದಲ್ಲದೆ,ಪ್ರಕರಣವನ್ನು ನಾಳೆಗೆ ಮುಂದೂಡಲು ಒತ್ತಾಯಿಸಿದರು. 

ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಅವರು, ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ತನಕ ತರೂರ್ ಹಾಗೂ 6 ಪತ್ರಕರ್ತರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂದು ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದರು. 

“ನಾವು ನೋಟಿಸ್ ನೀಡುತ್ತಿದ್ದೇವೆ. ಏನೂ ಆಗುವುದಿಲ್ಲ’’ಎಂದು ಮುಖ್ಯ ನ್ಯಾಯಮೂರ್ತಿ ಶರದ್ ಎ.ಬೋಬ್ಡೆ ಹಾಗೂ  ಜಸ್ಟಿಸ್ ಗಳಾದ ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ನ್ಯಾಯ ಪೀಠ ಹೇಳಿದೆ. 

ತರೂರ್, ಪತ್ರಕರ್ತರಾದ ರಾಜ್‍ದೀಪ್ ಸರ್ದೇಸಾಯಿ, ಮೃಣಾಲ್ ಪಾಂಡೆ, ಝಾಫರ್ ಆಘಾ, ವಿನೋದ್ ಕೆ.ಜೋಸ್. ಪರೇಶ್ ನಾಥ್ ಹಾಗೂ ಅನಂತ್ ನಾಥ್ ವಿರುದ್ಧ ಪೊಲೀಸ್ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಆಲಿಸಿತು.

ಗಣರಾಜ್ಯೋತ್ಸವ ದಿನ ದಿಲ್ಲಿಯಲ್ಲಿ ನಡೆದಿದ್ದ ಟ್ರ್ಯಾಕ್ಟರ್ ರ್ಯಾಲಿಯ ಬಳಿಕ ನಡೆದ ಘಟನೆಗೆ ಸಂಬಂಧಿಸಿ ಸುಳ್ಳು, ದಾರಿ ತಪ್ಪಿಸುವ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದಾರೆಂಬ ಆರೋಪದ ಮೇಲೆ ಈ ಏಳು ಜನರ ವಿರುದ್ಧ ದೇಶದ್ರೋಹ, ದ್ವೇಷದ ಪ್ರಚಾರ ಹಾಗೂ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News