ಬೆಂಗಳೂರು: ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ರೈತರ ಅಭೂತಪೂರ್ವ ಬೆಂಬಲ
ಬೆಂಗಳೂರು, ಫೆ.9: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳ 2021 ಎರಡನೇ ದಿನಕ್ಕೆ ಸಾರ್ವಜನಿಕರು ಮತ್ತು ರೈತರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೋವಿಡ್ ಕಾಲಘಟ್ಟದಲ್ಲಿ ಏರ್ಪಟ್ಟ ಬೃಹತ್ ತೋಟಗಾರಿಕೆ ಮೇಳ ಇದಾಗಿದ್ದು, ಕೋವಿಡ್‍ಗೆ ಲೆಕ್ಕಿಸದೆ, ರೈತರು ಮತ್ತು ಸಾರ್ವಜನಿಕರು ಐಐಎಚ್‍ಎಫ್ ಅಭಿವೃದ್ದಿ ಪಡಿಸಿರುವ ತೋಟಗಾರಿಕೆ ಬೆಳೆಗಳು, ಹಣ್ಣಿನ ಬೆಳೆಗಳು ಮತ್ತು ವಿವಿಧ ತಳಿಯ ಹೂವಿನ ತಳಿಗಳ ಕುರಿತು ಮತ್ತು ಸುಮಾರು 140ಕ್ಕೂ ಅಧಿಕ ಸ್ಟಾಲ್ ಬಗ್ಗೆ ಮಾಹಿತಿ ತಿಳಿಯಲು ಹೆಸರಘಟ್ಟದಲ್ಲಿ ನಡೆಯುತ್ತಿರುವ ಮೇಳಕ್ಕೆ ದಾಂಗುಡಿ ಇಟ್ಟರು.
ನೋಂದಣಿ ಅಧಿಕಾರಿಗಳ ಮಾಹಿತಿ ಪ್ರಕಾರ ಎರಡನೇ ದಿನ ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ತೋಟಗಾರಿಕೆ ಮೇಳ ವೀಕ್ಷಿಸಿದರು. ಸಾರ್ವಜನಿಕರು, ಐಐಎಚ್‍ಎಫ್ ಅಭಿವೃದ್ಧಿ ಪಡಿಸಿರುವ ವಿವಿಧ ತೋಟಗಾರಿಕೆ ಗಿಡಗಳು ಮತ್ತು ಬೀಜಗಳ ಖರೀದಿಗೆ ಮುಗಿ ಬಿದ್ದರು.
ಮುಖ್ಯವಾಗಿ ಸಾರ್ವಜನಿಕರು ಐಐಎಚ್‍ಎಫ್‍ನ ತಾಟುಗಳಿಗೆ ಭೇಟಿ ನೀಡಿ ವಿವಿಧ ತೋಟಗಾರಿಕೆ ಬೆಳೆ ಮತ್ತು ಹೂವಿನ ಕುರಿತು ಮಾಹಿತಿ ಪಡೆದರು. ಐಐಎಚ್‍ಎಫ್ ಬಿಡುಗಡೆ ಮಾಡಿರುವ ಟೊಮೆಟ್ ಬೆಳೆಗಳಾದ ಅರ್ಕಾ ಅಬೇದ್, ಮೆಣಸಿನ ಕಾಯಿ ಅರ್ಕಾ ತುಳಸಿ, ಅರ್ಕಾ ಸಂಗಮ್ ಕಲ್ಲಂಗಡಿ, ಅರ್ಕಾ ಚೆನ್ನ ಕನಕಾಂಬರ ಮತ್ತಿತರ ತೋಟಗಾರಿಕೆ ಬೆಳೆ ಮತ್ತು ಹೂಹಣ್ಣಿನ ಬಗ್ಗೆ ಮಾಹಿತಿ ಪಡೆದರು.
ಅಲ್ಲದೆ ಐಐಎಚ್‍ಆರ್ ಅಭಿವೃದ್ದಿ ಪಡಿಸಿರುವ ತೋಟಗಾರಿಕೆ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದು ಅದನ್ನು ಬಳಸುವ ವಿಧಾನ ಕುರಿತು ತಿಳಿದುಕೊಂಡರು.
ತಾಂತ್ರಿಕ ಗೋಷ್ಠಿ: ಎರಡನೇ ದಿನ ಮೂರು ತಾಂತ್ರಿಕ ಗೋಷ್ಠಿಗಳನ್ನು ಉತ್ತರ ಭಾರತದ ರೈತರಿಗೆ ಆಯೋಜಿಸಲಾಗಿತ್ತು. ಮೂರು ವಲಯವಾರು ನಡೆದ ಗೋಷ್ಠಿಯಲ್ಲಿ ಜಮ್ಮು ಕಾಶ್ಮೀರ, ಎರಡನೇ ಗೋಷ್ಠಿಯಲ್ಲಿ ರಾಜಸ್ಥಾನ ಮತ್ತು ಹರಿಯಾಣ, ಮೂರನೇ ಗೋಷ್ಠಿಯಲ್ಲಿ ಉತ್ತರ ಪ್ರದೇಶದ ರೈತರ ಪ್ರಶ್ನೆಗಳಿಗೆ ವಿಜ್ಞಾನಿಗಳು ಮಾಹಿತಿ ನೀಡಿದರು.
ರೈತರ ಪ್ರಶ್ನೆಗಳನ್ನು ಮುಂಚಿತವಾಗಿ ಪಡೆದುಕೊಂಡು ಇಂದು ಅವರ ಪ್ರಶ್ನೆಗಳಿಗೆ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಉತ್ತರ ನೀಡಿದರು. ದೇಶದ ನಾನಾ ಭಾಗದಲ್ಲಿರುವ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಆನ್‍ಲೈನ್‍ನಲ್ಲಿ ಭಾಗವಹಿಸಿ ಉತ್ತರ ನೀಡಿದರು. ಈ ಮಧ್ಯೆ ನಾಲ್ಕು ರಾಜ್ಯಗಳ ರೈತರು ಕೆವಿಕೆಯಲ್ಲಿ ಕುಳಿತು ಮಾಹಿತಿ ಪಡೆದರು.
ಜತೆಗೆ ಐಐಎಚ್‍ಆರ್ ನ ವಿವಿಧ ತೋಟಗಾರಿಕೆ ತಳಿಗಳ ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ತೋರಿಸಲಾಯಿತು. ಪ್ರಗತಿಪರ ರೈತರ ಸಂದರ್ಶನ, ಟೊಮೆಟೋ, ಕಲ್ಲಂಗಡಿ, ಹೀರೆಕಾಯಿ, ಈರುಳ್ಳಿ, ಬೆಂಡೆಕಾಯಿ, ಕುಂಬಳಕಾಯಿ ಮತ್ತಿತರ ತರಕಾರಿ ಬೆಳೆದ ರೈತರು ಐಐಎಚ್‍ಆರ್ ನೀಡಿರುವ ಬೀಜಗಳಿಂದ ಹೆಚ್ಚು ಇಳುವರಿ ಪಡೆದಿದ್ದು ಹೇಗೆ ಎಂಬ ಕುರಿತು ಸಿದ್ಧಪಡಿಸಿದ ಸಂದರ್ಶನದಲ್ಲಿ ಮಾಹಿತಿ ಒದಗಿಸಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಐಐಎಚ್‍ಆರ್ ನಿರ್ದೇಶಕ ಡಾ.ಎಂ.ಆರ್.ದಿನೇಶ್ ವಹಿಸಿದ್ದರು. ಐಐಎಚ್‍ಆರ್ ವಿಜ್ಞಾನಿಗಳಾದ ಡಾ.ಅನಿಲ್ ಕುಮಾರ್ ನಾಯರ್, ಡಾ.ರಾಜೀವ್ ಕುಮಾರ್, ಡಾ. ಅಂಜನಿಕುಮಾರ್ ಝಾ ನಡೆಸಿಕೊಟ್ಟರು.