ಮಂಗಳನ ಕಕ್ಷೆ ಪ್ರವೇಶಿಸಿದ ಯುಎಇಯ ‘ಹೋಪ್’ ಶೋಧ ನೌಕೆ

Update: 2021-02-10 14:24 GMT

  ದುಬೈ (ಯುಎಇ), ಫೆ. 10: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮಂಗಳ ಗ್ರಹ ಶೋಧಕ ನೌಕೆ ‘ಹೋಪ್’ ಮಂಗಳವಾರ ಕೆಂಪು ಗ್ರಹದ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಈ ಸಾಧನೆಗೈದ ಮೊದಲ ಅರಬ್ ದೇಶವಾಗಿ ಅದು ಇತಿಹಾಸಕ್ಕೆ ಸೇರ್ಪಡೆಗೊಂಡಿದೆ.

ಮಂಗಳ ಗ್ರಹದ ಹವಾಮಾನವನ್ನು ಅಧ್ಯಯನ ಮಾಡುವುದಕ್ಕಾಗಿ ಈ ಶೋಧ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ, ಈ ಬಾಹ್ಯಾಕಾಶ ಕಾರ್ಯಕ್ರಮವು ವಲಯದ ಯುವಜನರಿಗೆ ಪ್ರೇರಣೆಯಾಗಬೇಕೆಂದೂ ಯುಎಇ ಬಯಸಿದೆ.

‘‘ಶೋಧಕ ನೌಕೆ ‘ಹೋಪ್’ ಮಂಗಳ ಗ್ರಹದ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿದೆ ಎನ್ನುವ ಸುದ್ದಿಯನ್ನು ಯುಎಇಯ ಜನತೆಗೆ ಹಾಗೂ ಅರಬ್ ಮತ್ತು ಮುಸ್ಲಿಮ್ ದೇಶಗಳಿಗೆ ನಾವು ಘೋಷಿಸುತ್ತೇವೆ. ದೇವರಿಗೆ ಸ್ತೋತ್ರ’’ ಎಂದು ಕಾರ್ಯಕ್ರಮದ ಯೋಜನಾ ನಿರ್ವಾಹಕ ಉಮ್ರಾನ್ ಶರಾಫ್ ಹೇಳಿದರು.

 ನೌಕೆಯು ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿದಂತೆಯೇ ನಿಯಂತ್ರಣ ಕೇಂದ್ರದಲ್ಲಿದ್ದ ಸಿಬ್ಬಂದಿ ಚಪ್ಪಾಳೆಗೈದು ಹರ್ಷ ವ್ಯಕ್ತಪಡಿಸಿದರು. ನೌಕೆಯು ಮಂಗಳ ಗ್ರಹದ ಗುರುತ್ವಾಕರ್ಷಣೆಯಿಂದ ಸೆಳೆಯಲ್ಪಡುವುದಕ್ಕಾಗಿ ಅದರ ವೇಗವನ್ನು ಕಡಿಮೆ ಮಾಡುವ ಅರ್ಧ ಗಂಟೆಯ ಉದ್ವಿಗ್ನ ಕಾರ್ಯಾಚರಣೆಯ ಬಳಿಕ ಅವರು ನಿರಾಳರಾದರು. ಇದು ಶೋಧ ನೌಕೆಯ ಪ್ರಯಾಣದ ಅತ್ಯಂತ ಅಪಾಯಕಾರಿ ಹಂತವಾಗಿತ್ತು.

ಯುಎಇಯ ‘ಹೋಪ್’ ಬಳಿಕ, ಇದೇ ತಿಂಗಳಲ್ಲಿ ಅಮೆರಿಕ ಮತ್ತು ಚೀನಾಗಳ ಶೋಧ ನೌಕೆಗಳೂ ಮಂಗಳನ ಕಕ್ಷೆಯನ್ನು ಸೇರಲಿವೆ. ಮಂಗಳ ಮತ್ತು ಭೂಮಿ ಪರಸ್ಪರ ಅತ್ಯಂತ ಸನಿಹದಲ್ಲಿದ್ದಾಗ ಕಳೆದ ವರ್ಷದ ಜುಲೈಯಲ್ಲಿ ಈ ಮೂರು ದೇಶಗಳು ಶೋಧ ನೌಕೆಗಳನ್ನು ಉಡಾಯಿಸಿದ್ದವು.

‘‘ಈ ಸಾಧನೆಯೊಂದಿಗೆ ನೀವು ನಿಮಗೆ ಮತ್ತು ದೇಶಕ್ಕೆ ಗೌರವ ತಂದಿದ್ದೀರಿ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ’’ ಎಂದು ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯಿದ್ ನಿಯಂತ್ರಣ ಕೊಠಡಿಗೆ ಪ್ರವೇಶಿಸಿ ಅಲ್ಲಿನ ವಿಜ್ಞಾನಿಗಳನ್ನು ಉದ್ದೇಶಿಸಿ ಹೇಳಿದರು.

‘ಅಲ್ ಅಮಾಲ್’ (ಹೋಪ್) ಶೋಧಕ ನೌಕೆಯು ತನ್ನ ಸರಾಸರಿ ವೇಗವನ್ನು ಗಂಟೆಗೆ 1,21,000 ಕಿ.ಮೀ.ನಿಂದ ಗಂಟೆಗೆ ಸುಮಾರು 18,000 ಕಿ.ಮೀ.ಗೆ ಇಳಿಸುವುದಕ್ಕಾಗಿ ತನ್ನ ಎಲ್ಲ 6 ಶಕ್ತಿಶಾಲಿ ನೂಕು ಯಂತ್ರಗಳನ್ನು ವಿರುದ್ಧ ದಿಕ್ಕಿನಲ್ಲಿ ನಿಯೋಜಿಸಿತು.

ಜಗತ್ತಿನ ಅತಿ ಎತ್ತರದ ಕಟ್ಟಡವಾಗಿರುವ ದುಬೈನ ಬುರ್ಜ್ ಖಲೀಫವನ್ನು ಮಂಗಳ ಗ್ರಹದ ಬಣ್ಣವಾಗಿರುವ ಕೆಂಪಿನಿಂದ ಬೆಳಗಿಸಲಾಗಿತ್ತು ಹಾಗೂ ನೀಲಿ ಲೇಸರ್ ಬೆಳಕನ್ನು ಹಾಯಿಸಲಾಗಿತ್ತು.

ಯುಎಇಯಾದ್ಯಂತದ ಎಲ್ಲ ಪ್ರಮುಖ ಕಟ್ಟಡಗಳನ್ನು ಕೆಂಪಿನಿಂದ ಬೆಳಗಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News