ಕೊಳಗೇರಿ ನಿವಾಸಿಗಳ ತೆರವಿಗೆ ಆಕ್ಷೇಪ: ಅಧಿಕಾರಿಗಳ ಕ್ರಮ ಖಂಡಿಸಿ ಆತ್ಮಹತ್ಯೆಗೆ ಯತ್ನಿಸಿದ ಸ್ಥಳೀಯರು

Update: 2021-02-11 13:02 GMT

ಬೆಂಗಳೂರು, ಫೆ. 11: ಕೋರ್ಟ್ ಆದೇಶದ ಮೇರೆಗೆ ಇಲ್ಲಿನ ಅಗ್ರಹಾರ ದಾಸರಹಳ್ಳಿಯ ಕೊಳಗೇರಿ ನಿವಾಸಿಗಳನ್ನು ಏಕಾಏಕಿ ತೆರವುಗೊಳಿಸಲು ಕಾರ್ಯಾಚರಣೆಗೆ ಮುಂದಾದ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಇಬ್ಬರು ಸ್ಥಳೀಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಸಿದೆ.

ಗುರುವಾರ ಬೆಳಗ್ಗೆ ಏಕಾಏಕಿ ಕೊಳಗೇರಿಗೆ ತೆರಳಿದ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಮಕ್ಕಳು, ವೃದ್ಧರು, ಮಹಿಳೆಯರು ಎಂಬ ಯಾವುದೇ ಭೇದವಿಲ್ಲದೆ, ತೆರವು ಕಾರ್ಯಾಚರಣೆಗೆ ಮುಂದಾದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರಿಬ್ಬರು ಪೊಲೀಸರ ಕ್ರಮವನ್ನು ಪ್ರತಿಭಟಿಸಿ ವಿಷ ಸೇವಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಮನೆಯಲ್ಲಿದ್ದ ಮಕ್ಕಳು, ವೃದ್ಧರನ್ನು ಹೊರಗೆಳೆದ ಪೊಲೀಸರು, ಅವರ ಬಟ್ಟೆ-ಬರೆ, ಕಾಳು-ಕಡಿಗಳನ್ನು ಮನೆಯಿಂದ ಹೊರಕ್ಕೆ ಎಸೆದಿದ್ದು, ನಿವಾಸಿಗಳನ್ನು ಹೊರದಬ್ಬಿದ್ದಾರೆ. ಹೀಗೆ ಏಕಾಏಕಿ ಬಂದು ಮನೆ ತೆರವು ಮಾಡಿದರೆ ಈ ಕೊರೋನ ಸೋಂಕಿನ ಸಮಯದಲ್ಲಿ ಎಲ್ಲಿ ಹೋಗಬೇಕು ಎಂದು ಸ್ಥಳೀಯ ಕೊಳಗೇರಿ ನಿವಾಸಿಗಳು ಕಣ್ಣೀರು ಹಾಕಿದ್ದಾರೆ.

ರಾಜಕೀಯ ಜಟಾಪಟಿ: ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಇಲ್ಲಿನ ಕೊಳಗೇರಿ ನಿವಾಸಿಗಳು ತಮ್ಮ ಪಕ್ಷಕ್ಕೆ ಬೆಂಬಲ ನೀಡಿಲ್ಲ ಎಂಬ ಕಾರಣಕ್ಕೆ ಅನಧಿಕೃತವಾಗಿ ವಾಸ ಮಾಡುತ್ತಿರುವವರ ಪೈಕಿ ಕೇವಲ 17 ಮಂದಿಯ ಮನೆಗಳಿಗೆ ಮಾತ್ರ ನೋಟಿಸ್ ನೀಡಿ ತೆರವು ಮಾಡಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತೆರವು ಕಾರ್ಯಾಚರಣೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದು, ತೆರವು ಮಾಡಿರಲಿಲ್ಲ. ಇದೀಗ ಪುನಃ ಕೋರ್ಟ್ ಆದೇಶದ ನೆಪದಲ್ಲಿ ಏಕಾಏಕಿ ತೆರವುಗೊಳಿಸಲು ಸರಕಾರ ಮುಂದಾಗಿದೆ ಎಂದು ದೂರಿದ್ದು, ನಮಗೆ ಕಾಲಾವಕಾಶ ಕೊಡಿ ಎಂದರೂ ಅಧಿಕಾರಿಗಳು ಕೇಳುತ್ತಿಲ್ಲ. ಹೀಗೆ ಜನರನ್ನು ಬೀದಿಗೆ ತಳ್ಳಿದರೆ ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ನಮ್ಮ ಸಾವು ಇಲ್ಲೇ: ನಾವು ಯಾವುದೇ ಕಾರಣಕ್ಕೂ ಈ ಜಾಗ ಬಿಟ್ಟು ಕದಲುವುದಿಲ್ಲ. ಇವರ ವೈಯಕ್ತಿಕ ರಾಜಕೀಯಕ್ಕೆ ನಾವು ಬಲಿಯಾಗಬೇಕಿದೆ. ನಮಗೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಒಂದು ನಾವು ಇಲ್ಲೇ ವಾಸ ಮಾಡುತ್ತೇವೆ. ಇಲ್ಲವಾದರೆ ನಮ್ಮ ಸಾವು ಇಲ್ಲೇ ಎಂದು ಸ್ಥಳೀಯ ನಿವಾಸಿಗಳು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಕೋರ್ಟ್ ನಿರ್ದೇಶನದಂತೆ ಅಗ್ರಹಾರ ದಾಸರಹಳ್ಳಿಯಲ್ಲಿ ಮನೆಗಳನ್ನು ತೆರವು ಮಾಡಲಾಗಿದೆ. ನಮ್ಮ ಅವಧಿಯಲ್ಲಿ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗಿತ್ತು. ಬಳಿಕ 20 ಕುಟುಂಬಗಳು ಅಕ್ರಮವಾಗಿ ನೆಲೆಸಿವೆ. ಈ ಸಂಬಂಧ ತಪಾಸಣೆ ಮಾಡಿ, ತೆರವು ಮಾಡಲು ಸೂಚಿಸಿದ್ದೆ. ಆದರೆ, ತೆರವು ಮಾಡಿರಲಿಲ್ಲ. ಇದೀಗ ಕೋರ್ಟ್ ಆದೇಶದಂತೆ ತೆರವು ಮಾಡಲಾಗಿದೆ'

-ವಿ.ಸೋಮಣ್ಣ, ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News