ನದಿಮಟ್ಟ ಏರಿಕೆ: ಉತ್ತರಾಖಂಡ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆ

Update: 2021-02-12 04:02 GMT

ಡೆಹ್ರಾಡೂನ್, ಫೆ.12: ತಪೋವನ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ 34 ಜನರನ್ನು ರಕ್ಷಿಸುವ ರಕ್ಷಿಸುವ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ. ಭೂಗತ ಸುರಂಗವನ್ನು ತಲುಪಲು ಹೊಸದಾಗಿ ಅದಕ್ಕೆ ನೇರವಾಗಿ ಅಗೆಯುವ ಕಾರ್ಯಯೋಜನೆ ವಿಫಲವಾಗಿರುವುದು ಒಂದೆಡೆಯಾದರೆ, ದೂಲಿಗಂಗಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಇನ್ನೊಂದು ತಡೆಯಾಗಿ ಪರಿಣಮಿಸಿದೆ.

ಗುರುವಾರ ಅಪರಾಹ್ನ 2 ಗಂಟೆ ವೇಳೆಗೆ ನದಿನೀರಿನ ಮಟ್ಟ ಹೆಚ್ಚಲಾರಂಭಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶದಿಂದ ಸಿಬ್ಬಂದಿ ಹಿಂದಕ್ಕೆ ತೆರಳುವಂತೆ ಆದೇಶ ನೀಡಲಾಗಿದೆ. ಅಂತೆಯೇ ನದಿಯ ಕೆಳಭಾಗದ ಜನರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

ನೀರಿನ ಮಟ್ಟ ಎಷ್ಟು ಹೆಚ್ಚಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಸುರಕ್ಷಿತ ಮಟ್ಟವಾದ 21 ಮೀಟರ್‌ಗಿಂತ ಸಾಕಷ್ಟು ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಅಗೆಯುವ ಯಂತ್ರಗಳು, ಕೊರೆಯುವ ಯಂತ್ರಗಳು ಮತ್ತು ವಿದ್ಯುತ್ ಜನರೇಟರ್‌ಗಳನ್ನು ತಕ್ಷಣವೇ ಬೇರೆಡೆಗೆ ಸಾಗಿಸಲಾಗಿದೆ. ಗಡಿ ರಸ್ತೆ ಸಂಸ್ಥೆ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಯ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ರಿಷಿಗಂಗಾ ಯೋಜನೆಯ ಇತರ ಪರಿಹಾರ ಪ್ರದೇಶಗಳನ್ನು ಖಾಲಿ ಮಾಡಿಸಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.

ಹೆಚ್ಚುತ್ತಿರುವ ನೀರಿನ ಮಟ್ಟದ ಮೇಲೆ ನಿಗಾ ಇಡಲು ಮತ್ತು ಇದಕ್ಕೆ ಕಾರಣ ಪತ್ತೆ ಮಾಡಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ಹೇಳಿದ್ದಾರೆ. ನದಿನೀರಿನ ಮಟ್ಟ ಇಳಿದ ಬಳಿಕ ಮತ್ತೆ ಪರಿಹಾರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಗುರುವಾರ ಅವಶೇಷಗಳಡಿ ಮತ್ತೆರಡು ಮೃತದೇಹಗಳು ಪತ್ತೆಯಾಗಿದ್ದು, ಒಟ್ಟು ಮೃತರ ಸಂಖ್ಯೆ 36ಕ್ಕೇರಿದೆ. 168 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News