ನಕಲಿ ದಾಖಲೆ ಸಲ್ಲಿಸಿ ನಿವೇಶನ ಕಬಳಿಸಲು ಯತ್ನ ಆರೋಪ: ಐವರು ಇಂಜಿನಿಯರ್ ಗಳ ಬಂಧನ

Update: 2021-02-12 13:01 GMT

ಬೆಂಗಳೂರು, ಫೆ.12: ನಕಲಿ ದಾಖಲೆ ಸಲ್ಲಿಸಿ ಬಿಡಿಎ ನಿವೇಶನ ಕಬಳಿಸಲು ಯತ್ನಿಸಿದ ಆರೋಪದಡಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ) ಐವರು ಇಂಜಿನಿಯರ್ ಗಳನ್ನು ಇಲ್ಲಿನ ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ

ಕೆ.ಎನ್.ರವಿಕುಮಾರ್, ಎಂ.ಎಸ್.ಶಂಕರಮೂರ್ತಿ, ಶ್ರೀನಿವಾಸ್, ಶಬೀರ್ ಅಹ್ಮದ್, ಡಿ.ಶ್ರೀರಾಮ್ ಎಂಬುವರನ್ನು ಬಂಧಿಸಲಾಗಿದ್ದು, ಈ ಸಂಬಂಧ ವಿಚಾರಣೆಗೊಳಪಡಿಸಲಾಗಿದೆ.

ಬಿಡಿಎ ಲೇಔಟ್‍ಗಳ ಭೂದಾಖಲೆ ಪರಿಶೀಲನೆ ವೇಳೆ ನಕಲಿ ದಾಖಲೆ ಸೃಷ್ಟಿ ಮಾಡಿ ಬಿಡಿಎ ನಿವೇಶನಗಳನ್ನು ಮಾರಾಟ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಇದೇ ರೀತಿ ನಗರದಲ್ಲಿ ಬಿಡಿಎ ಇಂಜಿನಿಯರ್ ಗಳು ಸುಮಾರು 40ಕ್ಕೂ ಹೆಚ್ಚು ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಶಂಕೆಯಿದೆ ಎಂದು ಹೇಳಲಾಗುತ್ತಿದೆ.

ಹಲವು ವರ್ಷಗಳಿಂದ ಬಿಡಿಎನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಐವರು ಇಂಜಿನಿಯರ್ ಗಳು ನಗರಯೋಜನೆಯ ಜಯನಗರ, ಬನಶಂಕರಿ ಹಾಗೂ ಆರ್‍ಟಿನಗರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿಖರ ಅಳತೆ ವರದಿ(ಸಿಡಿ) ತಯಾರಿಕೆಯಲ್ಲಿ ನಿವೇಶನಗಳಿವೆ ಎಂದು ತೋರಿಸಿ ಬಳಿಕ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಬಡಾವಣೆಗಳ ಭೂದಾಖಲೆ ಪರಿಶೀಲನೆ ವೇಳೆ ಅಕ್ರಮ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಬಿಡಿಎ ಆಯುಕ್ತರ ಸೂಚನೆ ಮೇರೆಗೆ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಅದರನ್ವಯ ಐವರು ಇಂಜಿನಿಯರ್ ಗಳನ್ನ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News